ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಸೋಮವಾರ ಅಹಮದಾಬಾದ್‌ನ ಸಬರಮತಿ ನದಿ ದಂಡೆಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ-2026 (International Kite Festival-2026) ಅನ್ನು ಉದ್ಘಾಟಿಸಿದರು. ನಂತರ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ (German Chancellor Friedrich Merz) ಅವರೊಂದಿಗೆ ಗಾಳಿಪಟ ಹಾರಿಸಿ ಸಂಭ್ರಮಿಸಿದರು.
ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದ ನಂತರ, ಪ್ರಧಾನಿ ಮೋದಿ ಮತ್ತು ಚಾನ್ಸೆಲರ್ ಮೆರ್ಜ್ ಅವರು ರಾಜ್ಯ ಸರ್ಕಾರ ಗಾಳಿಪಟ ಉತ್ಸವವನ್ನು ಆಯೋಜಿಸಿರುವ ಸಬರಮತಿ ನದಿ ದಂಡೆಗೆ ತೆರಳಿದರು. ಪ್ರಧಾನಿ ಮೋದಿ ಮತ್ತು ಮೆರ್ಜ್ ಅವರು ಮಹಿಳಾ ಕರಕುಶಲ ಕಲಾವಿದರೊಂದಿಗೆ ಸಂವಾದ ನಡೆಸಿ, ಗಾಳಿಪಟ ತಯಾರಿಸುವ ಪ್ರಕ್ರಿಯೆಯನ್ನು ಅರಿತುಕೊಂಡರು. ಉದ್ಘಾಟನೆಯ ಬಳಿಕ ಇಬ್ಬರೂ ನಾಯಕರು ತೆರೆದ ವಾಹನದಲ್ಲಿ ಮೈದಾನದೊಳಗೆ ಸುತ್ತಾಡಿ, ಗಾಳಿಪಟ ಹಾರಿಸುವುದನ್ನೂ ಪ್ರಯತ್ನಿಸಿದರು.
ಸೋಮನಾಥ ದೇವಾಲಯದ ಸ್ವಾಭಿಮಾನ ಪರ್ವ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ: ಭೇಟಿಗೆ ಮುನ್ನ ಹೇಳಿದ್ದೇನು?
ಗುಜರಾತ್ ಸರ್ಕಾರದ ಪ್ರಕಟಣೆಯ ಪ್ರಕಾರ, ಅಹಮದಾಬಾದ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ -2026 ರಲ್ಲಿ 50 ದೇಶಗಳಿಂದ 135 ಗಾಳಿಪಟ ಕಲಾವಿದರು ಮತ್ತು ಭಾರತದಿಂದ ಸುಮಾರು 1,000 ಗಾಳಿಪಟ ಉತ್ಸಾಹಿಗಳು ಭಾಗವಹಿಸುತ್ತಿದ್ದಾರೆ.
ಉತ್ಸವದ ಭಾಗವಾಗಿ, ಗಾಳಿಪಟ ಕಲಾವಿದರು ಕಳೆದ ಎರಡು ದಿನಗಳಲ್ಲಿ ರಾಜ್‌ಕೋಟ್, ಸೂರತ್, ಧೋಲವಿರ (ಕಚ್‌ನಲ್ಲಿರುವ) ಮತ್ತು ಏಕತಾ ಪ್ರತಿಮೆ (ನರ್ಮದಾ) ನಂತಹ ಸ್ಥಳಗಳಿಗೆ ಭೇಟಿ ನೀಡಿ ಸಂದರ್ಶಕರನ್ನು ಮೋಡಿ ಮಾಡಿದ್ದಾರೆ ಎಂದು ಅದು ಹೇಳಿದೆ. ಅಹಮದಾಬಾದ್‌ನಲ್ಲಿ ಉತ್ಸವವು ಜನವರಿ 14ರ ವರೆಗೆ ಮುಂದುವರಿಯುತ್ತದೆ ಎಂದು ಅದು ಹೇಳಿದೆ.
ಕಳೆದ ವರ್ಷ, ಈ ಉತ್ಸವವು ಗುಜರಾತ್‌ನಾದ್ಯಂತ 3.83 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿತ್ತು. ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಮೂಲಕ, ಗುಜರಾತ್ ಪ್ರವಾಸೋದ್ಯಮವು ಧೋಲವಿರ ಮತ್ತು ಏಕತಾ ಪ್ರತಿಮೆಯಂತಹ ಪ್ರಮುಖ ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಈ ವರ್ಷ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ವೀಕ್ಷಿಸಲು ಐದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಗುಜರಾತ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಗುಜರಾತ್ ಭೇಟಿಯ ಭಾಗವಾಗಿ ಶನಿವಾರ (ಜ.10) ಸೋಮನಾಥಕ್ಕೆ ಭೇಟಿ ನೀಡಿದರು. ಅವರು ಸೋಮನಾಥ ಸ್ವಾಭಿಮಾನ್ ಪರ್ವ್ ಮತ್ತು ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ಪಟ್ಟಣದ ಬಳಿಯ ಪ್ರಸಿದ್ಧ ಸೋಮನಾಥ ಮಹಾದೇವ ದೇವಾಲಯದ ಬಳಿಯ ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರರು ಪ್ರಧಾನಿಯನ್ನು ಸ್ವಾಗತಿಸಿದರು.
ಸೋಮನಾಥ ದೇವಾಯಲದ ಭೇಟಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೋದಿ, ನಮ್ಮ ನಾಗರಿಕತೆಯ ಧೈರ್ಯದ ಹೆಮ್ಮೆಯ ಸಂಕೇತವಾದ ಸೋಮನಾಥದಲ್ಲಿ ಇರುವುದು ಧನ್ಯವೆನಿಸುತ್ತದೆ. 1026 ರಲ್ಲಿ ಸೋಮನಾಥ ದೇವಾಲಯದ ಮೇಲೆ ನಡೆದ ಮೊದಲ ದಾಳಿಯ ಸಾವಿರ ವರ್ಷಗಳನ್ನು ಆಚರಿಸಲು ಇಡೀ ರಾಷ್ಟ್ರವು ಒಟ್ಟಾಗಿ ಸೇರಿವೆ. ಆತ್ಮೀಯ ಸ್ವಾಗತಕ್ಕಾಗಿ ಜನರಿಗೆ ಕೃತಜ್ಞತೆಗಳು ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.