ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಿಲಿಟರಿ ಸಂಘರ್ಷದಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಆಸ್ಟ್ರಿಯಾದ ಚಾನ್ಸೆಲರ್ ಕ್ರಿಶ್ಚಿಯನ್ ಸ್ಟಾಕರ್ ಅವರೊಂದಿಗೆ ನವದೆಹಲಿಯಲ್ಲಿ ಜಂಟಿ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ನಮ್ಮೆಲ್ಲರ ಮೇಲೆ ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಭಾರತವು ಸ್ಥಿರ, ಸುಸ್ಥಿರ, ಶಾಶ್ವತ ಶಾಂತಿಯನ್ನು ಬಯಸುತ್ತಿದೆ ಎಂದು ತಿಳಿಸಿದರು.

ಸಂಗ್ರಹ ಚಿತ್ರ

ನವದೆಹಲಿ: ಇರಾನ್ (Iran war) ಮೇಲೆ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ನಡೆಸಿದ ದಾಳಿಯ (military conflict) ಪರಿಣಾಮ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯು ನಮ್ಮೆಲ್ಲರ ಮೇಲೂ ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಭಾರತವು ಸ್ಥಿರ, ಸುಸ್ಥಿರ ಮತ್ತು ಶಾಶ್ವತ ಶಾಂತಿಯನ್ನು ಬೆಂಬಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಆಸ್ಟ್ರಿಯಾದ ಚಾನ್ಸೆಲರ್ ಕ್ರಿಶ್ಚಿಯನ್ ಸ್ಟಾಕರ್ (Austrian Chancellor Christian Stocker) ಅವರೊಂದಿಗೆ ಗುರುವಾರ ನವದೆಹಲಿಯಲ್ಲಿ ಜಂಟಿ ಸಭೆಯಲ್ಲಿ ಭಾಗವಹಿಸಿದ ಅವರು ಮಿಲಿಟರಿ ಸಂಘರ್ಷದಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ತಿಳಿಸಿದರು.

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಪರಿಸ್ಥಿತಿಯು ಬಹಳ ಗಂಭೀರ ಮತ್ತು ಉದ್ವಿಗ್ನವಾಗಿದೆ. ಇದರ ಪರಿಣಾಮವನ್ನು ವಿಶ್ವದಾದ್ಯಂತ ಇರುವ ಎಲ್ಲಾ ರಾಷ್ಟ್ರಗಳು ಅನುಭವಿಸುತ್ತಿವೆ. ಯುದ್ಧ ಪರಿಣಾಮ ನಮ್ಮೆಲ್ಲರ ಮೇಲೂ ಆಗುತ್ತಿದೆ. ಅದು ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾವಾಗಲಿ ನಾವು ಸ್ಥಿರ, ಸುಸ್ಥಿರ ಮತ್ತು ಶಾಶ್ವತ ಶಾಂತಿಯನ್ನು ಬೆಂಬಲಿಸುತ್ತೇವೆ ಎಂದರು.

ಪಾಕಿಸ್ತಾನದ ಲಾಹೋರ್‌ನಲ್ಲಿ ಲಷ್ಕರ್-ಎ-ತೈಬಾ ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುಂಡಿನ ದಾಳಿ: ಸ್ಥಿತಿ ಗಂಭೀರ

ಭಾರತ ಮತ್ತು ಆಸ್ಟ್ರಿಯಾವು ಮುಂಬರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸಮಾನ ದೃಷ್ಟಿಕೋನವನ್ನು ಹೊಂದಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

ನಾಲ್ಕು ದಶಕಗಳ ಬಳಿಕ ಆಸ್ಟ್ರಿಯನ್ ಚಾನ್ಸೆಲರ್ ಸ್ಟಾಕರ್ ಅವರು ಭಾರತಕ್ಕೆ ಪ್ರವಾಸ ಬಂದಿದ್ದು, ಇದು ಅತ್ಯಂತ ಮಹತ್ವದ್ದಾಗಿದೆ. ಯುರೋಪಿನ ಹೊರಗೆ ಆಸ್ಟ್ರಿಯನ್ ನಾಯಕ ಭೇಟಿ ನೀಡಿರುವ ಮೊದಲ ದೇಶ ಭಾರತ. ಇದು ನಿಮ್ಮ ದೃಷ್ಟಿಕೋನ ಮತ್ತು ಭಾರತ-ಆಸ್ಟ್ರಿಯಾ ಸಂಬಂಧಗಳನ್ನು ಬಲಪಡಿಸುವ ನಿಮ್ಮ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ ತಿಳಿಸಿದರು.

ಭಾರತ ಮತ್ತು ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ ಅನಂತರ ನಿಮ್ಮ ಭೇಟಿಯು ಭಾರತ ಮತ್ತು ಆಸ್ಟ್ರಿಯಾ ಸಂಬಂಧಗಳನ್ನು ಸಹಕಾರ ಮತ್ತು ಬೆಳವಣಿಗೆಯ ಹೊಸ ಹಂತಕ್ಕೆ ಕೊಂಡೊಯ್ಯಲಿದೆ ಎಂದ ಮೋದಿ, ಇದೇ ಸಂದರ್ಭದಲ್ಲಿ ಆಸ್ಟ್ರಿಯಾದೊಂದಿಗೆ ಭಾರತದ ವಲಸೆ ಮತ್ತು ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಕಿದರು.

ನರ್ಸಿಂಗ್ ವಲಯವನ್ನು ಉತ್ತೇಜಿಸಲು, ಯುವ ಪ್ರತಿಭೆಗಳ ವಿನಿಮಯವನ್ನು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ ಪ್ರಧಾನಿ ಮೋದಿ, ಆಸ್ಟ್ರೀಯಾದ ಪರಿಣತಿಯನ್ನು ಭಾರತದ ಅಭಿವೃದ್ಧಿಯ ವೇಗ ಮತ್ತು ಪ್ರಮಾಣದೊಂದಿಗೆ ಸಂಯೋಜಿಸುವ ಮೂಲಕ ನಾವು ಸಂಪೂರ್ಣ ಜಗತ್ತಿಗೆ ವಿಶ್ವಾಸಾರ್ಹ ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿಗಳನ್ನು ರಚಿಸಲು ಸಾಧ್ಯವಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಾಲುದಾರಿಕೆಯನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.

“ನೀವು ನಾಶ ಮಾಡಿದ್ದಕ್ಕಿಂತ ವೇಗವಾಗಿ ಪುನರ್‌ನಿರ್ಮಾಣ ಮಾಡುತ್ತೇವೆ”: ಅಮೆರಿಕ-ಇಸ್ರೇಲ್‌ಗೆ ಇರಾನ್ ಸವಾಲು

ಭಾರತದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಆಸ್ಟ್ರಿಯಾದ ಪಾತ್ರವನ್ನು ಕೂಡ ಗುರುತಿಸಿರುವ ಪ್ರಧಾನಿ ಮೋದಿ, ದೆಹಲಿ ಮೆಟ್ರೋ, ಅಟಲ್ ಸುರಂಗ ಮಾರ್ಗದ ರಚನೆಯಲ್ಲಿ ಆಸ್ಟ್ರಿಯಾದ ಸುರಂಗ ಮಾರ್ಗದ ಪರಿಣತಿಯ ಬಗ್ಗೆ ಕೊಂಡಾಡಿದರು. ಸ್ಟಾಕರ್ ಅವರ ಭಾರತ ಭೇಟಿಯು ವ್ಯಾಪಾರ ಮತ್ತು ಹೂಡಿಕೆಗೆ ಹೊಸ ಉತ್ತೇಜನ ನೀಡಲಿದೆ ಎಂದು ತಿಳಿಸಿದರು.

ಆಸ್ಟ್ರಿಯಾದ ಚಾನ್ಸೆಲರ್ ಆಗಿ ಸ್ಟಾಕರ್ ಅವರು 2025 ರಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಇದರ ಬಳಿಕ ಇದು ಅವರ ಏಷ್ಯಾ ಖಂಡದ ಮೊದಲ ಮೊದಲ ಅಧಿಕೃತ ಭೇಟಿಯಾಗಿದೆ. ನಾಲ್ಕು ದಿನಗಳ ಕಾಲ ಅವರು ಭಾರತದಲ್ಲಿ ಉಳಿಯಲಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author