ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Education Minister Dharmendra Pradhan) ಮತ್ತು ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ರಾಜೀನಾಮೆಗೆ ಒತ್ತಾಯಿಸಿರುವ ವಿರೋಧ ಪಕ್ಷಗಳು (Opposition parties) ಐದು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದುರಿಸಿವೆ. ಕಾಕ್ರೋಚ್ ಜನತಾ ಪಕ್ಷದ (CJP) ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಅವರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ನಡೆಸಿದ್ದು ಇದರಿಂದ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದನ್ನು ಖಂಡಿಸಿ ಮಂಗಳವಾರ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯ ಖಂಡಿಸಿ ಮಂಗಳವಾರ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆಯು ಹಲವು ರೀತಿಯ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ವಿರೋಧ ಪಕ್ಷದ ನಾಯಕರು ಕೇಂದ್ರದ ಮುಂದೆ ಐದು ಬೇಡಿಕೆಗಳನ್ನು ಮಂಡಿಸಿದೆ.
ಪ್ರಧಾನಿ ನಿವಾಸದ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ: "ಅಪಾಯಕಾರಿ ನಡೆ" ಎಂದ ಕೇಂದ್ರ ಸರ್ಕಾರ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವು ವಿದ್ಯಾರ್ಥಿಗಳನ್ನು ಶೋಷಿಸುತ್ತಿದೆ ಎಂದು ಆರೋಪಿಸಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿದರು.
ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಹೊರಗೆ ಧರಣಿ ನಡೆಸುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಹಲವಾರು ಕಾಂಗ್ರೆಸ್ ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿದರು. ರಾಹುಲ್ ಗಾಂಧಿಯವರನ್ನು ಛತ್ರಸಾಲ್ ಕ್ರೀಡಾಂಗಣಕ್ಕೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮಂದಿರ ಮಾರ್ಗ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಿದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ರಾತ್ರಿ 9 ಗಂಟೆ ಸುಮಾರಿಗೆ ಬಿಡುಗಡೆ ಮಾಡಲಾಯಿತು.
ಐದು ಬೇಡಿಕೆಗಳು
ವಿರೋಧ ಪಕ್ಷಗಳು ಐದು ಬೇಡಿಕೆಗಳನ್ನು ಮುಂದಿಟ್ಟಿದ್ದು, ಇದರಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು, ವಿದಾರ್ಥಿಗಳ ಮೇಲಿನ ದೌರ್ಜನ್ಯಕ್ಕಾಗಿ ಪ್ರಧಾನಿ ಮೋದಿಯವರು ಕ್ಷಮೆಯಾಚನೆ ,ಮಾಡಬೇಕು, ಸಂಸತ್ತಿನಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಸಬೇಕು, ಶಿಕ್ಷಣ ಮತ್ತು ಪರೀಕ್ಷಾ ಸುಧಾರಣೆಗಳನ್ನು ಆದಷ್ಟು ಬೇಗ ಮಾಡಬೇಕು ಎಂದು ಆಗ್ರಹಿಸಿದೆ.
ರಾಹುಲ್ ಗಾಂಧಿ ಹೇಳಿದ್ದೇನು?
ದೇಶದ ಶಿಕ್ಷಣ ವ್ಯವಸ್ಥೆಯ ಕುರಿತು ಮಾತನಾಡಿರುವ ರಾಹುಲ್ ಗಾಂಧಿ, ಭಾರತೀಯ ಶಿಕ್ಷಣ ವ್ಯವಸ್ಥೆ ಏಕೆ ಕುಸಿಯುತ್ತಿದೆ, ಪ್ರಶ್ನೆಪತ್ರಿಕೆಗಳು ಏಕೆ ಸೋರಿಕೆಯಾಗುತ್ತಿವೆ, ಭಾರತದಲ್ಲಿ ಶಿಕ್ಷಣ ಏಕೆ ಇಷ್ಟೊಂದು ದುಬಾರಿಯಾಗಿದೆ ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಕುಟುಂಬಗಳು ಆರ್ಥಿಕವಾಗಿ ತಮ್ಮನ್ನು ತಾವು ಏಕೆ ನಾಶಪಡಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
ನ್ಯಾಯಯುತ ಪ್ರಶ್ನೆಗಳನ್ನು ಕೇಳುವುದರಲ್ಲಿ ತಪ್ಪಿಲ್ಲ ಎಂದಿರುವ ಅವರು ಬುಧವಾರ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆಯಬೇಕು ಎಂದು ವಿರೋಧ ಪಕ್ಷವು ಬಯಸಿದೆ ಎಂದು ಹೇಳಿದರು.