ಬೆಂಗಳೂರು, ಸೆ.5: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯಲ್ಲಿ ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಣ ಮಾಡಿರುವ ಕೃತ್ಯಕ್ಕೆ ಸಂಬಂಧಿಸಿದ ಆರೋಪದ ಮೇಲೆ ಉತ್ತರಾಖಂಡ (Uttarakhand) ಬಿಜೆಪಿ ಸದಸ್ಯರು ಮತ್ತು ಇತರರ ವಿರುದ್ಧ ಝೀರೋ ಎಫ್ಐಆರ್ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ವಿಧಾನಸೌಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎಸ್‌ಟಿ ವಿಭಾಗದ ಮಾಜಿ ಉಪಾಧ್ಯಕ್ಷ ಟಿ.ಆರ್. ರಾಮಪ್ಪ ಅವರು ಸಲ್ಲಿಸಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.
ದೂರಿನ ಪ್ರಕಾರ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಖರ್ಗೆ, ಆಗಸ್ಟ್ 8 ರಂದು ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಈ ಸಭೆಯು ಶಾಂತಿಯುತ ಮತ್ತು ಕಾನೂನುಬದ್ಧವಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.
ಆಗಸ್ಟ್ 10 ರಂದು ಬಿಜೆಪಿ ಸದಸ್ಯರು ಮತ್ತು ಕಾರ್ಯಕರ್ತರು ಅದೇ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಖರ್ಗೆ ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದರಿಂದ ಆ ಸ್ಥಳ ಅಶುದ್ಧವಾಗಿದೆ ಎಂದು ತಿಳಿಸುವುದು ಈ ಆಚರಣೆಯ ಉದ್ದೇಶವಾಗಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ. ಈ ಕೃತ್ಯವನ್ನು ಅವಮಾನ ಮತ್ತು ಅಸ್ಪೃಶ್ಯತೆಯನ್ನು ಎದುರಿಸುವ ಕಾನೂನುಗಳ ಅಡಿಯಲ್ಲಿ ಅಪರಾಧ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ರ‍್ಯಾಲಿ ಬಳಿಕ ರಾಮಲೀಲಾ ಮೈದಾನ 'ಶುದ್ಧೀಕರಣ': ಸಂಸತ್ ಅಂಗಳಕ್ಕೆ ತಲುಪಿದ ವಿವಾದ
ಈ ಆಚರಣೆ ಟೀಕೆಗೆ ಗುರಿಯಾದಾಗ ಅದನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಅವರನ್ನೂ ದೂರಿನಲ್ಲಿ ಹೆಸರಿಸಲಾಗಿದೆ. ಪೊಲೀಸರು 1955 ರ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 7(1)(ಸಿ), 7(1)(ಡಿ) ಮತ್ತು 7(1)(ಇ), 1989 ರ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(ಯು) ಮತ್ತು 2023 ರ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 196(1)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣವನ್ನು ಝೀರೋ ಎಫ್ಐಆರ್ ಆಗಿ ದಾಖಲಿಸಿರುವುದರಿಂದ, ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದು. ಹೆಚ್ಚಿನ ತನಿಖೆಗಾಗಿ ಎಫ್‌ಐಆರ್ ಅನ್ನು ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುವುದು ಎಂದು ವಿಧಾನಸೌಧ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಪೊಲೀಸರು ಈ ಪ್ರಕರಣದ ತನಿಖೆ ನಡೆಸುವುದಿಲ್ಲ. ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಎಂಟು ಕಡೆಗಳಲ್ಲಿ ಇದೇ ರೀತಿಯ ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಅಧಿಕಾರಿ ಹೇಳಿದರು.
ದುಲೀಪ್ ಟ್ರೋಫಿ ಫೈನಲ್‌ನಿಂದ ಹಿಂದೆ ಸರಿದ ರಾಹುಲ್
ಈ ಬೆಳವಣಿಗೆಯು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಘರ್ಷಣೆಗೆ ನಾಂದಿ ಹಾಡಿದೆ. ಆಗಸ್ಟ್ 13 ರಂದು ರಾಜ್ಯಸಭೆಯಲ್ಲಿ ಖರ್ಗೆ ಈ ವಿಷಯವನ್ನು ಪ್ರಸ್ತಾಪಿಸಿದರು. ನಂತರ ಸದನದ ನಾಯಕ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು, ಘಟನೆಯ ಕುರಿತು ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬವನ್ನು ಪ್ರಶ್ನಿಸಿದ್ದರು.
ಈ ಮಧ್ಯೆ, ಆಯೋಜಕರು ಅಂತಹ ಆಚರಣೆ ಮಾಡಿಲ್ಲ ತಾವು ಧಾರ್ಮಿಕ ಆಚರಣೆ ನಡೆಸಿದ್ದಾಗಿ ಸಮರ್ಥಿಸಿಕೊಂಡಿದ್ದರು. ಈ ಆಚರಣೆಯನ್ನು ಜಾತಿಗೆ ವ್ಯಾಖ್ಯಾನ ನೀಡಿದ್ದಾಗಿ ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಹಲ್ದ್ವಾನಿ ಪೊಲೀಸರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಏನಿದು ಝಿರೋ ಎಫ್ಐಆರ್?
ಪೊಲೀಸ್ ಠಾಣೆಯೊಂದು ಬೇರೊಂದು ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅಪರಾಧದ ದೂರನ್ನು ಸ್ವೀಕರಿಸಿದಾಗ ಅದು ಎಫ್ಐಆರ್ ಅನ್ನು ದಾಖಲಿಸಿಕೊಳ್ಳುತ್ತದೆ ಮತ್ತು ನಂತರ ಅದನ್ನು ಮುಂದಿನ ತನಿಖೆಗಾಗಿ ಸಂಬಂಧಿಸಿದ ಪೊಲೀಸ್ ಠಾಣೆಗೆ ವರ್ಗಾಯಿಸುತ್ತದೆ. ಇದನ್ನು ಝೀರೋ ಎಫ್ಐಆರ್ ಎನ್ನಲಾಗುತ್ತದೆ. ಇದಕ್ಕೆ ನಿಯಮಿತ ಎಫ್ಐಆರ್ ಸಂಖ್ಯೆಯನ್ನು ನೀಡಲಾಗುವುದಿಲ್ಲ. ಸಂಬಂಧಿತ ಪೊಲೀಸ್ ಠಾಣೆಯು ಝೀರೋ ಎಫ್ಐಆರ್ ಅನ್ನು ಸ್ವೀಕರಿಸಿದ ಬಳಿಕ ಹೊಸ ಎಫ್ಐಆರ್ ಅನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸುತ್ತದೆ.