ಮಲ್ಲಿಕಾರ್ಜುನ ಖರ್ಗೆ ರ‍್ಯಾಲಿ ಬಳಿಕ ರಾಮಲೀಲಾ ಮೈದಾನ 'ಶುದ್ಧೀಕರಣ': ಸಂಸತ್ ಅಂಗಳಕ್ಕೆ ತಲುಪಿದ ವಿವಾದ
Mallikarjun Kharge: ಉತ್ತರಾಖಂಡದ ಹಲ್ದ್ವಾನಿ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ರ‍್ಯಾಲಿಯ ಬಳಿಕ ನಡೆದ ‘ಶುದ್ಧೀಕರಣ’ ಹವನ ವಿವಾದಕ್ಕೆ ಕಾರಣವಾಗಿದೆ. ಘಟನೆ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ, ಇದರಿಂದ ಅಸ್ಪೃಶ್ಯತೆಯ ನೋವು ಮತ್ತು ಅವಮಾನ ಅನುಭವವಾಗಿದೆ ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದರಲ್ಲಿ ಬಿಜೆಪಿ ಸದಸ್ಯರು ಪಾಲ್ಗೊಂಡಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ.
ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ) -
ನವದೆಹಲಿ, ಆ. 13: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ತಾವು ಭಾಗವಹಿಸಿದ ಬಹಿರಂಗ ಸಭೆಯ ನಂತರ ನಡೆದ 'ಶುದ್ಧೀಕರಣ' ವಿಧಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಈ ದೇಶದಲ್ಲಿ "ದಲಿತರಿಗೆ ಯಾವುದೇ ಜಾಗವಿಲ್ಲ" ಎಂದು ಹೇಳಿದ್ದಾರೆ. "ನಾವು ಮೊದಲಿನಿಂದಲೂ ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂದು ಹೇಳುತ್ತಿದ್ದೇವೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲಾಗುತ್ತಿದೆ. ಅಲ್ಲಿ ಹವನ ಮಾಡುವ ಅಗತ್ಯವೇನಿತ್ತು?" ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ ಪ್ರಶ್ನಿಸಿದ್ದಾರೆ.
ಖರ್ಗೆ ಶನಿವಾರ (ಆಗಸ್ಟ್ 8) ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ 'ವಿಜಯ ಶಂಖನಾದ' ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಎರಡು ದಿನಗಳ ನಂತರ ಅಂದರೆ ಆಗಸ್ಟ್ 10ರಂದು ಶ್ರೀರಾಮ ಸೇನೆ ಸಂಘಟನೆಯು ಆ ರ‍್ಯಾಲಿ ಸ್ಥಳದಲ್ಲಿ 'ಶುದ್ಧೀಕರಣ' ಹವನ ನಡೆಸಿತು. "ರಾಮಲೀಲಾ ಮೈದಾನವು ಎಲ್ಲ ಪಕ್ಷಗಳ ಸಾರ್ವಜನಿಕ ಸಭೆಗಳಿಗೆ ಬಳಸುವ ಸ್ಥಳವಾಗಿದೆ. ಆದರೆ ಅವರು ಮಾಡಿದ್ದು ಮೊದಲನೆಯದಾಗಿ ಹಿಂದೂ ಧರ್ಮಕ್ಕೇ ವಿರುದ್ಧವಾದುದು. ಎರಡನೆಯದಾಗಿ, ಅವರು ದೇಶವನ್ನು ವಿಭಜಿಸುವ ಮತ್ತು ಜಾತಿಗಳ ನಡುವೆ ಸಂಘರ್ಷವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಖರ್ಗೆ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಭಾಷಣ:
Mallikarjun Kharge spoke at Haldwani Ramlila Maidan.
— Rajat Jain (@RajatJain) August 13, 2026
2 days later, stage is “purified” with havan allegedly by local BJP Members.
Kharge Ji remark. Nadda Ji remark. pic.twitter.com/BSZqqQiBol
ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಗುರುವಾರ ಮುಂಗಾರು ಅಧಿವೇಶನದ ಕೊನೆಯ ದಿನದಂದು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. "ನಾನು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಮಾತನಾಡಿದೆ. ಯಾವುದೇ ಧರ್ಮ ಅಥವಾ ಸಮುದಾಯದ ಹೆಸರನ್ನು ಬಳಸದೆ ಸರ್ಕಾರದ ವಿಷಯಗಳ ಕುರಿತು ಮಾತನಾಡಿದ್ದೆ. ಆದರೆ ನಂತರ ಬಿಜೆಪಿ ಬೆಂಬಲಿಗರು ವೇದಿಕೆಯನ್ನು 'ಶುದ್ಧೀಕರಿಸಲು' ಹವನ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಇದು ಸರಿಯೇ? ನೀವು ಸಂವಿಧಾನವನ್ನು ಹೇಗೆ ರಕ್ಷಿಸುತ್ತಿದ್ದೀರಿ?" ಎಂದು ಖರ್ಗೆ ಕೇಳಿದ್ದಾರೆ.
ವೇದಿಕೆಯ ಶುದ್ಧೀಕರಣವು ತಮಗೆ ಅಸ್ಪೃಶ್ಯತೆಯ ನೋವು ತಂದಿದೆ ಮತ್ತು ಅವಮಾನವಾಗಿದೆ ಎಂದು ಹೇಳಿದ ಖರ್ಗೆ, ಈ ವಿರುದ್ಧ ಹೋರಾಡುವ ಶಕ್ತಿ ತಮಗಿದೆ ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಸ್ಪೃಶ್ಯತೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತಪ್ಪಿತಸ್ಥರನ್ನು ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಖರ್ಗೆ ಆರೋಪಕ್ಕೆ ಉತ್ತರಿಸಿದ ಜೆ.ಪಿ. ನಡ್ಡಾ, ಘಟನೆಯು ಖಂಡನೀಯ. ಆದರೆ ಇದರಲ್ಲಿ ಬಿಜೆಪಿ ಸದಸ್ಯರು ಪಾಲ್ಗೊಂಡಿಲ್ಲ ಎಂದು ಸ್ಪಷ್ಟಪಡಿಸಿ ತನಿಖೆಯ ಭರವಸೆ ನೀಡಿದರು.
ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೊಡಿಯಾಲ್, ಶ್ರೀರಾಮ ಸೇನೆ ಸಂಘಟನೆಯು ಬಿಜೆಪಿಯೊಂದಿಗೆ ನಂಟು ಹೊಂದಿದೆ ಮತ್ತು ಖರ್ಗೆ ದಲಿತರಾಗಿರುವುದರಿಂದ ಈ ವಿಧಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಇದನ್ನು ನಿರಾಕರಿಸಿದೆ. ಬಲಪಂಥೀಯ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರನ್ನು ಗೊಡಿಯಾಲ್ ಪ್ರಶ್ನಿಸಿದ್ದಾರೆ.
ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಖಜಾನ್ ದಾಸ್, ರ‍್ಯಾಲಿಯಲ್ಲಿ ಸನಾತನ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಘೋಷಣೆಗಳನ್ನು ಕೂಗಲಾಗಿತ್ತು ಎಂದು ಹೇಳಿದ್ದಾರೆ. ಕಾಂಗ್ರೆಸ್ ದಲಿತ ನಾಯಕರನ್ನು ಗೌರವಿಸಿಲ್ಲ ಎಂದು ಪ್ರತ್ಯಾರೋಪ ಮಾಡಿದ್ದಾರೆ.