ನವದೆಹಲಿ, ಅ. 9: ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ನೊಬೆಲ್ ಪ್ರಶಸ್ತಿಯನ್ನು (Nobel Prize) ಮಾನವಕುಲಕ್ಕೆ ಮಹತ್ವದ ಕೊಡುಗೆ ನೀಡಿದ ಸಾಧಕರಿಗೆ ಪ್ರತಿ ವರ್ಷ ನೀಡಲಾಗುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಭಾರತೀಯರು ಹಾಗೂ ಭಾರತೀಯ ಮೂಲದ ಹಲವು ಸಾಧಕರು ತಮ್ಮದಾಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಬಾರಿಯ ಶಾಂತಿ ನೊಬೆಲ್ ಪ್ರಶಸ್ತಿಯನ್ನು ಭಾರತೀಯ ಮೂಲದ ನವಿ ಪಿಳ್ಳೈ ಮುಡಿಗೇರಿಸಿಕೊಂಡಿದ್ದಾರೆ.
ವಿಜ್ಞಾನ, ಸಾಹಿತ್ಯ, ಆರ್ಥಿಕತೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಸಾಧನೆಯ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಪ್ರಮುಖ ನೊಬೆಲ್ ಪ್ರಶಸ್ತಿ ಪುರಸ್ಕೃತರ ವಿವರ ಇಲ್ಲಿದೆ.
ರವೀಂದ್ರನಾಥ ಟ್ಯಾಗೋರ್ (1913 – ಸಾಹಿತ್ಯ)
ರವೀಂದ್ರನಾಥ ಟ್ಯಾಗೋರ್ 1913ರಲ್ಲಿ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು. ಅವರ ಪ್ರಸಿದ್ಧ ಕವನ ಸಂಕಲನ ‘ಗೀತಾಂಜಲಿ’ಗಾಗಿ ಈ ಗೌರವ ಲಭಿಸಿತು. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಷ್ಯನ್ ಸಾಹಿತಿ ಎಂಬ ಹೆಗ್ಗಳಿಕೆ ಇವರಾಗಿದ್ದು, ಕವಿತೆ, ಸಂಗೀತ, ಕಲೆ, ಶಿಕ್ಷಣ ಮತ್ತು ತತ್ವಶಾಸ್ತ್ರ ಕ್ಷೇತ್ರಗಳಿಗೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.
ಸಿ.ವಿ. ರಾಮನ್ (1930 – ಭೌತಶಾಸ್ತ್ರ)
ಭಾರತದ ಖ್ಯಾತ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ 1930ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. ಬೆಳಕು ಒಂದು ವಸ್ತುವಿನ ಮೂಲಕ ಹಾದುಹೋಗುವಾಗ ಅದರ ಚದುರುವಿಕೆಯಲ್ಲಿ ಉಂಟಾಗುವ ಬದಲಾವಣೆಯನ್ನು ವಿವರಿಸುವ ‘ರಾಮನ್ ಪರಿಣಾಮ’ದ ಆವಿಷ್ಕಾರಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತು. ಈ ಸಂಶೋಧನೆಯು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಕ್ಷೇತ್ರಗಳಲ್ಲಿ ಮಹತ್ವದ ಪ್ರಗತಿಗೆ ನೆರವಾಗಿದೆ.
ಹರ ಗೋವಿಂದ ಖುರಾನಾ (1968 – ವೈದ್ಯಕೀಯ)
ಭಾರತೀಯ ಮೂಲದ ವಿಜ್ಞಾನಿ ಹರ ಗೋವಿಂದ ಖುರಾನಾ 1968ರಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಮಾರ್ಷಲ್ ನೈರೆನ್‌ಬರ್ಗ್ ಮತ್ತು ರಾಬರ್ಟ್ ಹೋಲಿ ಅವರೊಂದಿಗೆ ಹಂಚಿಕೊಂಡರು. ಜೀವಕೋಶಗಳಲ್ಲಿನ ಆನುವಂಶಿಕ ಸಂಕೇತಗಳು ಪ್ರೋಟೀನ್‌ಗಳ ನಿರ್ಮಾಣವನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದರ ಕುರಿತು ನಡೆಸಿದ ಸಂಶೋಧನೆಗಾಗಿ ಈ ಗೌರವ ಲಭಿಸಿತು. ಅವರ ಸಂಶೋಧನೆಯು ಆಣ್ವಿಕ ಜೀವಶಾಸ್ತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿತು.
ಮದರ್ ಥೆರೆಸಾ (1979-ಶಾಂತಿ)
ಮದರ್ ತೆರೇಸಾ 1979ರಲ್ಲಿ ಶಾಂತಿ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಆ ಮೂಲಕ ನೊಬೆಲ್ ಪ್ರಸಸ್ತಿ ಪಡೆದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ಅವರು ಮ್ಯಾಸಿಡೋನಿಯಾ ಗಣರಾಜ್ಯದಲ್ಲಿ ಜನಿಸಿದರು. 19ನೇ ವಯಸ್ಸಿನಲ್ಲಿ ಅವರು ಭಾರತಕ್ಕೆ ಆಗಮಿಸಿದರು ಮತ್ತು ಭಾರತದಲ್ಲಿ ರೋಮನ್ ಕ್ಯಾಥೋಲಿಕ್ ಸನ್ಯಾಸಿನಿಯಾಗಿ ಮತ್ತು ಮಿಷನರಿಯಾಗಿ ನಗರದ ಕೊಳೆಗೇರಿಗಳಲ್ಲಿ ಬಡವರ ಸೇವೆ ಮಾಡಿದರು. ಅವರ ಮಾನವೀಯ ಕೆಲಸವು ಮಿಷನರೀಸ್ ಆಫ್ ಚಾರಿಟಿಯ ಸ್ಥಾಪನೆಗೆ ಕಾರಣವಾಯಿತು.
ಭಾರತೀಯ ಮೂಲದ ನ್ಯಾಯವಾದಿಗೆ ಒಲಿದ 2026ರ ನೊಬೆಲ್ ಶಾಂತಿ ಪ್ರಶಸ್ತಿ: ಯಾರು ಈ ನವಿ ಪಿಳ್ಳೈ?
ಸುಬ್ರಹ್ಮಣ್ಯನ್ ಚಂದ್ರಶೇಖರ್ (1983 – ಭೌತಶಾಸ್ತ್ರ)
ಭಾರತೀಯ ಮೂಲದ ಖಗೋಳ ಭೌತಶಾಸ್ತ್ರಜ್ಞ ಸುಬ್ರಹ್ಮಣ್ಯನ್ ಚಂದ್ರಶೇಖರ್ 1983ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. ನಕ್ಷತ್ರಗಳ ರಚನೆ ಮತ್ತು ವಿಕಾಸಕ್ಕೆ ಸಂಬಂಧಿಸಿದ ಸೈದ್ಧಾಂತಿಕ ಅಧ್ಯಯನಗಳಿಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತು. ನಕ್ಷತ್ರಗಳ ಜೀವನಚಕ್ರ, ಶ್ವೇತ ಕುಬ್ಜ ನಕ್ಷತ್ರಗಳು ಮತ್ತು ಬಾಹ್ಯಾಕಾಶದ ವಿವಿಧ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಅವರ ಸಂಶೋಧನೆ ನೆರವಾಯಿತು.
ಅಮರ್ಥ್ಯ ಸೇನ್ (1998 – ಅರ್ಥಶಾಸ್ತ್ರ)
ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ 1998ರಲ್ಲಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. ಕಲ್ಯಾಣ ಅರ್ಥಶಾಸ್ತ್ರ ಮತ್ತು ಸಾಮಾಜಿಕ ಆಯ್ಕೆ ಸಿದ್ಧಾಂತಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಈ ಗೌರವ ಲಭಿಸಿತು. ಬಡತನ, ಅಸಮಾನತೆ, ಹಸಿವು ಮತ್ತು ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಅವರ ಅಧ್ಯಯನಗಳು ಜಾಗತಿಕ ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರಿವೆ.
ವೆಂಕಟ್ರಾಮನ್ ರಾಮಕೃಷ್ಣನ್ (2009 – ರಸಾಯನಶಾಸ್ತ್ರ)
ಭಾರತ ಮೂಲದ ವಿಜ್ಞಾನಿ ವೆಂಕಟ್ರಾಮನ್ ರಾಮಕೃಷ್ಣನ್ 2009ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಥಾಮಸ್ ಸ್ಟೈಟ್ಜ್ ಮತ್ತು ಅಡಾ ಯೋನತ್ ಅವರೊಂದಿಗೆ ಹಂಚಿಕೊಂಡರು. ಜೀವಕೋಶಗಳಲ್ಲಿ ಪ್ರೋಟೀನ್‌ಗಳನ್ನು ಉತ್ಪಾದಿಸುವ ರೈಬೋಸೋಮ್‌ನ ರಚನೆ ಮತ್ತು ಕಾರ್ಯವಿಧಾನದ ಅಧ್ಯಯನಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು. ಅವರ ಸಂಶೋಧನೆಯು ಆಣ್ವಿಕ ಜೀವಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರಗಳ ಬೆಳವಣಿಗೆಗೆ ನೆರವಾಗಿದೆ.
ಕೈಲಾಶ್ ಸತ್ಯಾರ್ಥಿ (2014 – ಶಾಂತಿ)
ಮಧ್ಯ ಪ್ರದೇಶದ ಸಾಮಾಜಿಕ ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ 2014ರಲ್ಲಿ ಶಾಂತಿ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಮಲಾಲಾ ಯೂಸಫ್‌ಜಾಯಿ ಅವರೊಂದಿಗೆ ಹಂಚಿಕೊಂಡರು. ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಹೋರಾಟ, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯುವಂತೆ ಮಾಡುವ ಪ್ರಯತ್ನಗಳಿಗಾಗಿ ಅವರಿಗೆ ಈ ಗೌರವ ಲಭಿಸಿತು. ಅವರ ‘ಬಚ್ಪನ್ ಬಚಾವೋ ಆಂದೋಲನ’ ಸಂಘಟನೆಯು ಮಕ್ಕಳ ಶೋಷಣೆಯ ವಿರುದ್ಧ ಮಹತ್ವದ ಕಾರ್ಯಗಳನ್ನು ನಡೆಸಿದೆ.
ಅಭಿಜಿತ್ ಬ್ಯಾನರ್ಜಿ (2019 – ಅರ್ಥಶಾಸ್ತ್ರ)
ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ 2019ರಲ್ಲಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಎಸ್ತರ್ ಡುಫ್ಲೊ ಮತ್ತು ಮೈಕೆಲ್ ಕ್ರೆಮರ್ ಜತೆಗೆ ಪಡೆದುಕೊಂಡರು. ಜಾಗತಿಕ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಾಯೋಗಿಕ ಅಧ್ಯಯನ ವಿಧಾನವನ್ನು ರೂಪಿಸಿ ಅಭಿವೃದ್ಧಿಪಡಿಸಿದ್ದಕ್ಕಾಗಿ ಈ ಗೌರವ ಲಭಿಸಿತ್ತು. ಬಡತನ ನಿವಾರಣಾ ಯೋಜನೆಗಳ ಪರಿಣಾಮಕಾರಿತ್ವವನ್ನು ವೈಜ್ಞಾನಿಕವಾಗಿ ಪರಿಶೀಲಿಸುವ ಅವರ ಸಂಶೋಧನೆ ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದಿದೆ.
ನವನೀತಮ್ 'ನವಿ' ಪಿಳ್ಳೈ (2026 – ಶಾಂತಿ)
2026ರ ಸಾಲಿನ ಅತ್ಯಂತ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಖ್ಯಾತ ನ್ಯಾಯಶಾಸ್ತ್ರಜ್ಞೆ ಮತ್ತು ವಿಶ್ವಸಂಸ್ಥೆಯ ಮಾಜಿ ಮಾನವ ಹಕ್ಕುಗಳ ಮುಖ್ಯಸ್ಥೆ ನವನೀತಮ್ ʼನವಿʼ ಪಿಳ್ಳೈ ಅವರಿಗೆ ಘೋಷಿಸಲಾಗಿದೆ. ಜಾಗತಿಕವಾಗಿ ಶಾಂತಿಯನ್ನು ಉತ್ತೇಜಿಸಲು, ಅಂತಾರಾಷ್ಟ್ರೀಯ ಕಾನೂನನ್ನು ಬಲಪಡಿಸಲು ಮತ್ತು ಯುದ್ಧಾಪರಾಧಗಳು ಹಾಗೂ ನರಮೇಧಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ನ್ಯಾಯ ಒದಗಿಸಲು ಅವರು ನಡೆಸಿದ ನಿರಂತರ ಹೋರಾಟವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಭಾರತೀಯ ಸಾಧಕರ ಜಾಗತಿಕ ಹೆಜ್ಜೆಗುರುತು
ನೊಬೆಲ್ ಪ್ರಶಸ್ತಿ ಪಡೆದ ಈ ಸಾಧಕರು ವಿಜ್ಞಾನ, ಸಾಹಿತ್ಯ, ಅರ್ಥಶಾಸ್ತ್ರ ಮತ್ತು ಮಾನವ ಹಕ್ಕುಗಳ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸಾಧನೆಗಳು ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವುದರ ಜತೆಗೆ, ಮುಂದಿನ ಪೀಳಿಗೆಯ ಸಂಶೋಧಕರು ಮತ್ತು ಸಾಧಕರಿಗೆ ಪ್ರೇರಣೆಯಾಗಿವೆ.