ನವದೆಹಲಿ, ಜು. 21: ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧಿಕೃತ ನಿವಾಸದ ಹೊರಗೆ ಹಠಾತ್ ಧರಣಿ ಸತ್ಯಾಗ್ರಹ ನಡೆಸಿದ್ದು, ಈ ನಡೆಗೆ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಾರ್ಟಿ (Aam Admi Party) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ದೇಶದ ಪ್ರತಿಯೊಬ್ಬ ದೇಶಪ್ರೇಮಿಯೂ ವಿದ್ಯಾರ್ಥಿಗಳ ಪರವಾಗಿ ಈ ಧರಣಿಯಲ್ಲಿ ಭಾಗವಹಿಸಬೇಕೆಂದು ರಾಹುಲ್ ಗಾಂಧಿ ಕರೆ ನೀಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಆಗಮಿಸಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದರು. ಆದಾಗ್ಯೂ, ಕೆಲವೇ ಗಂಟೆಗಳ ನಂತರ ದೆಹಲಿ ಪೊಲೀಸರು ರಾಹುಲ್ ಗಾಂಧಿ ಅವರನ್ನು ಸ್ಥಳದಿಂದ ಬಲವಂತವಾಗಿ ತೆರವುಗೊಳಿಸಿದರು.
ಆಪ್ ಆರೋಪವೇನು?
ರಾಹುಲ್ ಗಾಂಧಿ ಅವರ ಈ ಧರಣಿಯನ್ನು ಆಪ್ ನಾಯಕ ಸೋಮನಾಥ್ ಭಾರ್ತಿ ಕಟುವಾಗಿ ಟೀಕಿಸಿದ್ದು, "ರಾಹುಲ್ ಗಾಂಧಿ ಈ ಹೋರಾಟವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಕೈಜೋಡಿಸಿ ವಿದ್ಯಾರ್ಥಿಗಳ ವಿಷಯವನ್ನು ಹಾದಿ ತಪ್ಪಿಸುತ್ತಿವೆ. ರಾಹುಲ್ ಅವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ಜಂತರ್ ಮಂತರ್‌ಗೆ ಹೋಗಿ ಪ್ರತಿಭಟನೆ ನಡೆಸಲಿ" ಎಂದು ಹೇಳಿದರು.
ಆಪ್ ಶಾಸಕ ಸೌರಭ್ ಭಾರದ್ವಾಜ್ ಮಾತನಾಡಿ, "ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಬೃಹತ್ ಹೋರಾಟವನ್ನು ಕೇಂದ್ರ ಸರ್ಕಾರ ಒಂದು ತಿಂಗಳಿನಿಂದ ಕಡೆಗಣಿಸಿತ್ತು. ಆದರೆ ರಾಹುಲ್ ಗಾಂಧಿ ಪ್ರತಿಭಟನೆ ಕುಳಿತ ಒಂದೇ ಗಂಟೆಯಲ್ಲಿ ಇಬ್ಬರು ಸಚಿವರು ಹಾಗೂ ಕಾರ್ಯದರ್ಶಿಗಳು ಅವರನ್ನು ಭೇಟಿಯಾಗಿದ್ದಾರೆ" ಎಂದು ಕಿಡಿಕಾರಿದರು.
ದೆಹಲಿ ಪ್ರತಿಭಟನೆಯ ನಡುವೆ ಬರ್ಗರ್ ತಿಂದ ಸಿಜೆಪಿ ವಕ್ತಾರ ವಿಜೇತ ದಹಿಯಾಗೆ ಕೋಕ್
ಸಿಜೆಪಿ ಪ್ರತಿಕ್ರಿಯೆ ಮತ್ತು ಹೋರಾಟದ ತೀವ್ರತೆ
ಆಪ್‌ನ ಈ ಆರೋಪವನ್ನು ತಳ್ಳಿಹಾಕಿದ ಸಿಜೆಪಿ, "ದೇಶದಲ್ಲಿರುವ ಒಗ್ಗಟ್ಟನ್ನು ಮುರಿಯಲು ಯತ್ನಿಸಬೇಡಿ. ಕಾಂಗ್ರೆಸ್ ಸೇವಾ ದಳದವರು ನಮ್ಮ ಪ್ರತಿಭಟನಾಕಾರರಿಗೆ ಉಪಹಾರ ತಂದುಕೊಟ್ಟು ನೆರವಾಗುತ್ತಿದ್ದಾರೆ. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರಕ್ಕೆ ಸೂಕ್ತ ಒತ್ತಡ ತರುತ್ತಿದ್ದಾರೆ" ಎಂದು 'ಎಕ್ಸ್' ಖಾತೆಯಲ್ಲಿ ಸ್ಪಷ್ಟಪಡಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ಧರಣಿ ಮುಂದುವರಿದಿದೆ. ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ ನಂತರ ಈ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಸಂಸತ್ತಿಗೆ ಮೆರವಣಿಗೆ ನಡೆಸಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಿಸಿದ್ದು, ಘಟನೆಯಲ್ಲಿ 60 ಪ್ರತಿಭಟನಾಕಾರರು ಮತ್ತು 118 ಭದ್ರತಾ ಸಿಬ್ಬಂದಿ ಸೇರಿ ಸುಮಾರು 180 ಜನರು ಗಾಯಗೊಂಡಿದ್ದಾರೆ.