ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ಪ್ರತಿಭಟನೆಯ ನಡುವೆ ಬರ್ಗರ್ ತಿಂದ ಸಿಜೆಪಿ ವಕ್ತಾರ ವಿಜೇತ ದಹಿಯಾಗೆ ಕೋಕ್

Vijeta Dahiya: ದೆಹಲಿ ಪ್ರತಿಭಟನೆಯ ವೇಳೆ ಮಾಲ್‌ನಲ್ಲಿ ಬರ್ಗರ್ ತಿನ್ನುತ್ತಿರುವ ವಿಡಿಯೊ ವೈರಲ್ ಆದ ಬಳಿಕ ಸಿಜೆಪಿ ತನ್ನ ವಕ್ತಾರ ವಿಜೇತ ದಹಿಯಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ. ದಹಿಯಾ ತಾವು ಪ್ರತಿಭಟನೆ ಬಳಿಕ ಹಸಿವಾಗಿತ್ತೆಂದು ಆಹಾರ ಸೇವಿಸಲು ತೆರಳಿದ್ದೆ ಎಂದು ಸ್ಪಷ್ಟನೆ ನೀಡಿದರೂ ಪಕ್ಷ ಅವರ ನಡೆ ಅಸಂವೇದನಾಶೀಲ ಎಂದು ಶಿಸ್ತು ಕ್ರಮ ಕೈಗೊಂಡಿದೆ.

ಬರ್ಗರ್ ವಿವಾದ: ಸಿಜೆಪಿ ವಕ್ತಾರ ವಿಜೇತ ದಹಿಯಾ ಹುದ್ದೆಯಿಂದ ವಜಾ

ವಿಜೇತ ದಹಿಯಾ (ಸಂಗ್ರಹ ಚಿತ್ರ) -

Profile
Sushmitha Jain Jul 21, 2026 10:34 PM

ದೆಹಲಿ, ಜು. 21: ದೆಹಲಿಯಲ್ಲಿ ತಮ್ಮ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯ ಸಮಯದಲ್ಲಿ ಪ್ರಸಿದ್ಧ ಮಾಲ್ ಒಂದರ ಬರ್ಗರ್ ಅಂಗಡಿಯಲ್ಲಿ ಕಾಣಿಸಿಕೊಂಡ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಅಧಿಕೃತ ವಕ್ತಾರ ವಿಜೇತ ದಹಿಯಾ (Vijeta Dahiya) ಅವರನ್ನು ಹುದ್ದೆಯಿಂದ ತಕ್ಷಣವೇ ಜಾರಿಗೆ ಬರುವಂತೆ ವಜಾಗೊಳಿಸಿದೆ.

ಪಕ್ಷದ ಇತರ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರು ಬೀದಿಯಲ್ಲಿ ಪೊಲೀಸರ ಕಠಿಣ ಕ್ರಮಗಳನ್ನು ಎದುರಿಸುತ್ತಿರುವಂತಹ ಸೂಕ್ಷ್ಮ ಸಮಯದಲ್ಲಿ ದಹಿಯಾ ತೋರಿದ ಈ ನಡೆಯು ತೀವ್ರ ಆಸಂವೇದನಾಶೀಲ ಎಂದು ಸಿಜೆಪಿ ಖಂಡಿಸಿದೆ.

"ನಮ್ಮ ಶಾಂತಿಯುತ ಪ್ರತಿಭಟನಾಕಾರರು ಮತ್ತು ತಂಡದ ಸದಸ್ಯರು ಪೊಲೀಸರ ಹಿಂಸಾಚಾರ ಹಾಗೂ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾಗ ವಕ್ತಾರರ ಇಂತಹ ವಿಡಿಯೊ ಹೊರಬಂದಿರುವುದು ನಿಜಕ್ಕೂ ಸ್ವೀಕಾರಾರ್ಹವಲ್ಲ. ಇದು ವಿವೇಚನೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಮತ್ತು ನಮ್ಮ ಚಳವಳಿಯ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿದೆ" ಎಂದು ಸಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ. ತಕ್ಷಣದ ಶಿಸ್ತುಕ್ರಮವಾಗಿ ದಹಿಯಾ ಅವರನ್ನು ವಕ್ತಾರ ಹುದ್ದೆಯಿಂದ ತೆಗೆದುಹಾಕಿ, ಅವರ ಬಳಿಯಿದ್ದ ಎಲ್ಲ ಜವಾಬ್ದಾರಿಗಳನ್ನು ಹಿಂಪಡೆಯಲಾಗಿದೆ.

ವಿಜೇತ ದಹಿಯಾ ಅವರ ವಿಡಿಯೊ:

ವಿವಾದದ ಹಿನ್ನೆಲೆ

ಸೋಮವಾರ ಸಿಜೆಪಿ ಪ್ರತಿಭಟನೆ ನಡೆಸುತ್ತಿದ್ದಾಗ, ರಾಜಕೀಯ ಸಂಶೋಧಕ ಹಾಗೂ ಚಲನಚಿತ್ರ ನಿರ್ಮಾಪಕರೂ ಆಗಿರುವ ದಹಿಯಾ ಬರ್ಗರ್ ಔಟ್‌ಲೆಟ್‌ನಲ್ಲಿ ಕುಳಿತಿರುವ ವಿಡಿಯೊ ಹರಿದಾಡಲು ಪ್ರಾರಂಭಿಸಿತು. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ, ಹಲವರನ್ನು ವಶಕ್ಕೆ ಪಡೆಯುತ್ತಿದ್ದಾಗ ಈ ನಾಯಕ ಮಾಲ್‌ನಲ್ಲಿ ಬರ್ಗರ್ ಸವಿಯುತ್ತಿರುವುದನ್ನು ಕಂಡು ಸಾರ್ವಜನಿಕರು ಕಟುವಾಗಿ ಟೀಕಿಸಿದರು. ಮತ್ತೊಂದು ವಿಡಿಯೊದಲ್ಲಿ ಕೆಲವರು ದಹಿಯಾ ಅವರನ್ನು ಸ್ಥಳದಲ್ಲೇ ತಡೆದು, "ಪ್ರತಿಭಟನಾಕಾರರ ಜತೆ ನಿಲ್ಲುವ ಬದಲು ಇಲ್ಲಿ ಬರ್ಗರ್ ತಿನ್ನುತ್ತಿದ್ದೀರಾ?" ಎಂದು ತೀವ್ರವಾಗಿ ಪ್ರಶ್ನಿಸಿರುವುದು ಕಂಡುಬಂದಿದೆ.

ಹಿಂಸೆಗೆ ತಿರುಗಿದ ಸಿಜೆಪಿ ಪ್ರತಿಭಟನೆ; ಗಂಭೀರ ಗಾಯಗೊಂಡ 20 ವರ್ಷದ ಮಹಿಳೆ ಐಸಿಯುಗೆ ದಾಖಲು

ದಹಿಯಾ ನೀಡಿದ ಸ್ಪಷ್ಟನೆ

ಈ ಟೀಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ ದಹಿಯಾ, "ನಾನು ಪ್ರತಿಭಟನೆ ಮುಗಿದ ನಂತರವೇ ಅಲ್ಲಿಂದ ಹೊರಟೆ. ಕಳೆದ ಎರಡು ರಾತ್ರಿಗಳಿಂದ ನಿದ್ರೆಯಿಲ್ಲದೆ ಕೆಲಸ ಮಾಡಿದ್ದೆ. ವಿಪರೀತ ಹಸಿವಾಗಿದ್ದರಿಂದ ಆಹಾರಕ್ಕಾಗಿ ಬಂದಿದ್ದೆ. ಇದರಲ್ಲಿ ತಪ್ಪೇನಿದೆ?" ಎಂದು ಸಮರ್ಥಿಸಿಕೊಂಡರು. ಅಲ್ಲದೆ, ಆ ಬರ್ಗರ್‌ನಲ್ಲಿ ಮೈದಾ ಮತ್ತು ಟ್ರಾನ್ಸ್ ಫ್ಯಾಟ್ ಹೆಚ್ಚಾಗಿದ್ದರಿಂದ ತಾನು ಅದನ್ನು ಪೂರ್ತಿಯಾಗಿ ತಿನ್ನದೆ ಬೇರೆಡೆ ಊಟ ಮಾಡಿದ್ದಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮುಂದುವರಿದ ರಾಜಕೀಯ ಸಂಘರ್ಷ

ವಿಜೇತ ದಹಿಯಾ ಅವರಿಗೆ ವಿವಾದಗಳು ಹೊಸದೇನಲ್ಲ. ಈ ಹಿಂದೆ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಅವರು ಮಾಡಿದ್ದ ವಿವಾದಾತ್ಮಕ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದವು. ಪ್ರಸ್ತುತ ಸಿಜೆಪಿ ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದೆ. ಸಂಸತ್ತಿಗೆ ಮೆರವಣಿಗೆ ನಡೆಸಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದು, ಈ ಘಟನೆಯು ವಿಪಕ್ಷ ಹಾಗೂ ಕೇಂದ್ರ ಸರ್ಕಾರದ ನಡುವೆ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.