ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Gandhi: ಬಿಹಾರದಲ್ಲಿ ಹೆಚ್ಚಾಯ್ತು ಚುನಾವಣೆ ಕಾವು; ಕೆರೆಗೆ ಜಿಗಿದು ಮೀನು ಹಿಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

Bihar Assembly Election 2025: ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ನಾನಾ ಕಸರತ್ತಿನಲ್ಲಿ ನಿರತವಾಗಿವೆ. ಇದೀಗ ಬೇಗುಸರಾಯ್‌ನ ಕೊಳವೊಂದಕ್ಕೆ ಹಾರಿದ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಮೀನು ಹಿಡಿದು ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರಾಹುಲ್‌ ಗಾಂಧಿ ದೋಣಿಯಿಂದ ನೀರಿಗೆ ಜಿಗಿಯುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಬೆರಗುಗಣ್ಣನಿಂದ ನೋಡಿದರೆ, ಅವರ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ನಡೆಯನ್ನು ಶ್ಲಾಘಿಸಿದ್ದಾರೆ.

ಕೆರೆಗೆ ಜಿಗಿದು ಮೀನು ಹಿಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

ಬಿಹಾರದ ಬೇಗುಸರಾಯ್‌ನ ಕೆರೆಯೊಂದರಲ್ಲಿ ಮೀನು ಹಿಡಿದ ರಾಹುಲ್‌ ಗಾಂಧಿ. -

Ramesh B Ramesh B Nov 2, 2025 8:24 PM

ಪಾಟ್ನಾ, ನ. 2: ರಾಷ್ಟ್ರ ರಾಜಕೀಯ ಚಿತ್ರಣವನ್ನೇ ಬದಲಾಯಿಸಬಲ್ಲ ಸಾಮರ್ಥ್ಯ ಹೊಂದಿರುವ ಬಿಹಾರ ವಿಧಾನಸಭಾ ಚುನಾವಣೆಗೆ (Bihar Assembly Election 2025) ದಿನಗಣನೆ ಆರಂಭವಾಗಿದೆ. ಎನ್‌ಡಿಎ ಮತ್ತು ಇಂಡಿ ಒಕ್ಕೂಟ (ಮಹಾಘಟಬಂಧನ) ನಡುವಿನ ರೋಚಕ ಹಣಾಹಣಿಗೆ ಸಾಕ್ಷಿಯಾಗಬಲ್ಲ ಚುನಾವಣೆಯ ಮೊದಲ ಹಂತದ ಮತದಾನ ನವೆಂಬರ್‌ 6 ಮತ್ತು 2ನೇ ಹಂತದ ಮತದಾನ ನವೆಂಬರ್‌ 11ರಂದು ನಡೆದು ನವೆಂಬರ್‌ 14ರಂದು ಫಲಿತಾಂಶ ಹೊರಬೀಳಲಿದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ನಾನಾ ಕಸರತ್ತಿನಲ್ಲಿ ನಿರತವಾಗಿವೆ. ಈ ಮಧ್ಯೆ ಬೇಗುಸರಾಯ್‌ನ (Begusarai) ಕೊಳವೊಂದಕ್ಕೆ ಹಾರಿದ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ (Rahul Gandhi) ಮೀನು ಹಿಡಿದು ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮೀನುಗಾರರ ಸಮಸ್ಯೆಗಳನ್ನು ಆಲಿಸಲು ನವೆಂಬರ್‌ 2ರಂದು ರಾಹುಲ್‌ ಗಾಂಧಿ ಬೇಗುಸರಾಜ್‌ಗೆ ತೆರಳಿದರು. ಈ ವೇಳೆ ಮೀನುಗಾರರ ಜತೆ ಬೋಟ್‌ನಲ್ಲಿ ತೆರಳಿದ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಕೆರೆಗೆ ಜಿಗಿದು ಬಲೆ ಹಾಕಿ ಮೀನು ಹಿಡಿದರು.

ಈ ಸುದ್ದಿಯನ್ನೂ ಓದಿ: Bihar Assembly Election: 1 ಕೋಟಿ ಸರ್ಕಾರಿ ಉದ್ಯೋಗ, 10 ಲಕ್ಷ ರೂ. ಸಹಾಯ ಧನ; ಬಿಹಾರ ಚುನಾವಣೆಗೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಸದ್ದು ಮಾಡುತ್ತಿದೆ ವಿಡಿಯೊ

ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟದ ಭಾಗವಾಗಿರುವ, ವಿಕಾಸ್‌ಶೀಲ ಇನ್‌ಸಾನ್‌ ಪಾರ್ಟಿ (VIP)ಯ ಮುಖಂಡ, ಮಾಜಿ ಸಚಿವ ಮುಕೇಶ್‌ ಸಹ್ನಿ ಅವರೊಂದಿಗೆ ಬೇಗುಸರಾಜ್‌ನಲ್ಲಿ ರಾಹುಲ್‌ ಗಾಂಧಿ ಪ್ರಚಾರ ನಡೆಸಿದರು. ಈ ವೇಳೆ ಮೀನುಗಾರರೊಂದಿಗೆ ದೋಣಿಯಲ್ಲಿ ಕೆರೆಗೆ ತೆರಳಿದರು. ಬಳಿಕ ನೀರಿಗೆ ಜಿಗಿದ ರಾಹುಲ್‌ ಗಾಂಧಿ ಸ್ವಲ್ಪ ಹೊತ್ತು ಈಜಾಡಿದರು. ಅವರ ಜತೆ ಮುಕೇಶ್‌ ಸಹ್ನಿ ಕೂಡ ನೀರಿಗೆ ಇಳಿದರು. ಈ ವೇಳೆ ರಾಹುಲ್‌ ಗಾಂಧಿ ಎಂದಿನಂತೆ ಬಿಳಿ ಟೀ ಶರ್ಟ್‌ ಮತ್ತು ಕಪ್ಪು ಪ್ಯಾಂಟ್‌ ಧರಿಸಿದ್ದರು. ಕಾಂಗ್ರೆಸ್‌ ನಾಯಕ ಕನ್ಹಯ ಕುಮಾರ್‌ ಕೂಡ ಸ್ಥಳದಲ್ಲಿದ್ದರು. ತಮ್ಮೊಂದಿಗೆ ಬಲೆ ಬೀಸಿ ಮೀನು ಹಿಡಿದ ರಾಹುಲ್‌ ಗಾಂಧಿಯನ್ನು ನೋಡಿ ಮೀನುಗಾರರು ರೋಮಾಂಚನಗೊಂಡರು.

ಮೀನು ಹಿಡಿದ ರಾಹುಲ್‌ ಗಾಂಧಿ; ವಿಡಿಯೊ ಇಲ್ಲಿದೆ:



ರಾಹುಲ್‌ ಗಾಂಧಿ ದೋಣಿಯಿಂದ ನೀರಿಗೆ ಜಿಗಿಯುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಬೆರಗುಗಣ್ಣನಿಂದ ನೋಡಿದರೆ, ಅವರ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ನಡೆಯನ್ನು ಶ್ಲಾಘಿಸಿದ್ದಾರೆ. ಕಾಂಗ್ರೆಸ್‌ ಎಕ್ಸ್‌ ಖಾತೆಯಲ್ಲಿ ಈ ದೃಶ್ಯವನ್ನು ಪೋಸ್ಟ್‌ ಮಾಡಿದ್ದು, ರಾಹುಲ್‌ ಗಾಂಧಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದ್ದಾರೆ ಎಂದು ಬರೆದುಕೊಂಡಿದೆ.

ರಾಹುಲ್‌ ಗಾಂಧಿ ಅವರ ಎಕ್ಸ್‌ ಪೋಸ್ಟ್‌:



ಮೀನುಗಾರರ ಮತಗಳ ಮೇಲೆ ಕಣ್ಣಿಟ್ಟಿರುವ ಇಂಡಿ ಒಕ್ಕೂಟ ಪ್ರಣಾಳಿಕೆಯಲ್ಲಿ ಅವರಿಗಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಜೀವ ವಿಮೆಯ ವಾಗ್ದಾನ ನೀಡಿದೆ. ಜತೆಗೆ ಮೀನುಗಾರಿಕೆಗೆ ನಿಷೇಧವಿರುವ 3 ತಿಂಗಳು ಪ್ರತಿ ಕುಟುಂಬಕ್ಕೆ 5,000 ರೂ. ಒದಗಿಸುವುದಾಗಿ ಭರವಸೆ ನೀಡಿದೆ. ಬಿಹಾರದ ಆರ್ಥಿಕತೆಯಲ್ಲಿ ಮೀನುಗಾರರು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಹೀಗಾಗಿ ಅವರಿಗೆ ಎಲ್ಲ ರೀತಿಯ ನೆರವು ಒದಗಿಸುವುದಾಗಿ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಸದ್ಯ ರಾಹುಲ್‌ ಗಾಂಧಿಯಂತಹ ರಾಷ್ಟ್ರ ನಾಯಕನನ್ನು ಭೇಟಿಯಾದ ಖುಷಿಯಲ್ಲಿದ್ದಾರೆ ಬೇಗುಸರಾಜ್‌ ಸ್ಥಳೀಯರು. ಈ ಖುಷಿ, ಎಕ್ಸೈಟ್‌ಮೆಂಟ್‌ ಮತವಾಗಿ ಪರಿವರ್ತನೆಯಾಗುತ್ತ ಎನ್ನುವುದನ್ನು ಕಾದು ನೋಡಬೇಕಿದೆ.