ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಬೆಳಿಗ್ಗೆ 11 ಗಂಟೆಗೇ ಮದ್ಯ ಸೇವಿಸಿ ಲೋಕಸಭೆಗೆ ಬರುತಿದ್ದರು"; ಪಂಜಾಬ್ ಸಿಎಂ ವಿರುದ್ಧ ರಾಹುಲ್ ಗಾಂಧಿ ಆರೋಪ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮದ್ಯದ ನಶೆಯಲ್ಲಿರುವ ನಾಯಕನಿಂದ ರಾಜ್ಯದ ಮಾದಕ ದ್ರವ್ಯ (ಡ್ರಗ್ಸ್) ಪಿಡುಗಿನ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (CM Bhagwant Mann) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮದ್ಯದ ನಶೆಯಲ್ಲಿರುವ ನಾಯಕನಿಂದ ರಾಜ್ಯದ ಮಾದಕ ದ್ರವ್ಯ (ಡ್ರಗ್ಸ್) ಪಿಡುಗಿನ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸಂಗ್ರೂರ್‌ ನಲ್ಲಿ ಇನ್ಸಾಫ್ ರ್ಯಾಲಿ ನಡೆಸಿದರು.

ಪಂಜಾಬ್‌ನಲ್ಲಿ ಮಾದಕ ದ್ರವ್ಯಗಳ ದುರುಪಯೋಗ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದಾಗ, ಅನೇಕ ರಾಜಕೀಯ ಪಕ್ಷಗಳು ತಮಗೆ ಪಂಜಾಬ್ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಎಂದು ಹೇಳಿದ್ದವು ಎಂದು ಅವರು ಹೇಳಿದರು. ಪಂಜಾಬ್‌ನಲ್ಲಿ ಕೈಗಾರಿಕೆ ಮತ್ತು ಮೂಲಸೌಕರ್ಯ ಅತ್ಯಗತ್ಯ, ಇಲ್ಲದಿದ್ದರೆ ಮಾದಕ ದ್ರವ್ಯಗಳು ಮತ್ತು ಗೂಂಡಾಗಿರಿ ಹೆಚ್ಚುತ್ತದೆ ಎಂದು ರಾಹುಲ್‌ ಕಿಡಿ ಕಾರಿದ್ದಾರೆ. ಭಗವಂತ್ ಮಾನ್ ಅವರು ಸಂಸದರಾಗಿದ್ದ ದಿನಗಳನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, "ನಾವು ಲೋಕಸಭೆಯಲ್ಲಿದ್ದಾಗ ಅವರು ನಮ್ಮ ಜೊತೆಯೇ ಕುಳಿತು ಜೋಕ್‌ಗಳನ್ನು ಹೇಳುತ್ತಿದ್ದರು. ಆದರೆ ಬೆಳಿಗ್ಗೆ 11 ಗಂಟೆಯ ಹೊತ್ತಿಗಾಗಲೇ ಅವರ ಉಸಿರಿನಲ್ಲಿ ಮದ್ಯದ ವಾಸನೆ ಬರುತ್ತಿತ್ತು" ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮುಂದುವರಿದು, ಮದ್ಯಪಾನ ಮಾಡುವುದು ಅವರ ವೈಯಕ್ತಿಕ ಆಯ್ಕೆಯಾಗಿದ್ದರೂ, ಪ್ರತಿ ಸಂಜೆ ನಶೆಯಲ್ಲಿ ಮುಳುಗಿರುವ ಮುಖ್ಯಮಂತ್ರಿ ಡ್ರಗ್ಸ್ ವಿರುದ್ಧದ ಹೋರಾಟವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಪಂಜಾಬ್‌ಗೆ ರಾಜ್ಯದ ಯುವಕರ ನೋವನ್ನು ಅರ್ಥಮಾಡಿಕೊಳ್ಳುವ ನಾಯಕನ ಅಗತ್ಯವಿದೆ ಎಂದು ಹೇಳಿದ್ದಾರೆ.

ʼʼSIR ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಸಿದ್ಧʼʼ: ಪ್ರಧಾನಿ ನರೇಂದ್ರ ಮೋದಿಗೆ ಸವಾಲೆಸೆದ ರಾಹುಲ್‌ ಗಾಂಧಿಗೆ ಅಮಿತ್‌ ಶಾ ತಿರುಗೇಟು

ಮುಂದಿನ ಮೂರು ವರ್ಷಗಳಲ್ಲಿ ಪಂಜಾಬ್ ಅನ್ನು ಮಾದಕ ದ್ರವ್ಯ ಮುಕ್ತ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಗಡುವನ್ನು ರಾಹುಲ್ ಗಾಂಧಿ ಪ್ರಶ್ನಿಸಿದರು. "ಮೂರು ವರ್ಷಗಳಲ್ಲಿ ಅಮಿತ್ ಶಾ ಅವರೇ ಗೃಹ ಸಚಿವರಾಗಿ ಇರುವುದಿಲ್ಲ. ನನ್ನ ಅಂದಾಜಿನ ಪ್ರಕಾರ ಈ ಕೇಂದ್ರ ಸರ್ಕಾರವೇ ಮುಂದಿನ ಒಂದು ವರ್ಷದೊಳಗೆ ಬೀಳಲಿದೆ" ಎಂದು ಭವಿಷ್ಯ ನುಡಿದರು. ಇದೇ ವೇಳೆ, ಗುಜರಾತ್‌ನ ಅದಾನಿ ಪೋರ್ಟ್‌ನಲ್ಲಿ ಪತ್ತೆಯಾದ ಸಾವಿರಾರು ಕಿಲೋಗ್ರಾಂ ಹೆರಾಯಿನ್ ಮತ್ತು ಡ್ರಗ್ಸ್ ಪ್ರಕರಣದ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ಕ್ರಮವೇನು ಎಂದು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷಗಳು ದೇಶವಿರೋಧಿಗಳು ಮತ್ತು ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿವೆ ಎಂಬ ಆಡಳಿತ ಪಕ್ಷದ ಆರೋಪಗಳ ವಿರುದ್ಧ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖಾಮುಖಿ ಬಹಿರಂಗ ಚರ್ಚೆಗೆ ಮೂರನೇ ಬಾರಿಗೆ ಸವಾಲು ಹಾಕಿದರು. "ಪ್ರಧಾನಿಯವರು ತಮಗೆ ಇಷ್ಟಬಂದ ವೇದಿಕೆ ಮತ್ತು ಇಷ್ಟಬಂದ ನ್ಯಾಯಾಧೀಶರನ್ನು ಆಯ್ಕೆ ಮಾಡಿಕೊಳ್ಳಲಿ, ಆದರೆ ಅವರು ನನ್ನ ಮುಂದೆ ಬಂದು ಕುಳಿತು ಚರ್ಚಿಸಲು ಸಾಧ್ಯವಿಲ್ಲ. ಚರ್ಚೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ನಾನು ನನ್ನ ಆರೋಪಗಳನ್ನು ಸಾಬೀತುಪಡಿಸುತ್ತೇನೆ" ಎಂದು ಅವರು ಗುಡುಗಿದ್ದಾರೆ.

Vishakha Bhat Heggar

View all posts by this author