ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼSIR ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಸಿದ್ಧʼʼ: ಪ್ರಧಾನಿ ನರೇಂದ್ರ ಮೋದಿಗೆ ಸವಾಲೆಸೆದ ರಾಹುಲ್‌ ಗಾಂಧಿಗೆ ಅಮಿತ್‌ ಶಾ ತಿರುಗೇಟು

Amit Shah: "ಎಸ್‌ಐಆರ್ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲು ನಾವು ಸಿದ್ಧ. ನಿಮ್ಮಲ್ಲಿ ಯಾರಿಗಾದರೂ ಧೈರ್ಯವಿದ್ದರೆ ಬನ್ನಿ. ಈ ದೇಶದ ಜನರ ಮುಂದೆ ಚರ್ಚೆಯಲ್ಲಿ ಪಾಲ್ಗೊಳ್ಳಿ. ಕೇವಲ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಓಡಾಡುವುದರಿಂದ ಸಂವಿಧಾನವನ್ನು ಬೆಂಬಲಿಸಿದಂತಾಗುವುದಿಲ್ಲʼʼ ಎಂದು ವಿಪಕ್ಷಗಳಿಗೆ ಗೃಹ ಸಚಿವ ಅಮಿತ್‌ ಶಾ ಸವಾಲು ಹಾಕಿದ್ದಾರೆ.

ʼʼSIR ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಸಿದ್ಧʼʼ: ಅಮಿತ್‌ ಶಾ

ಅಮಿತ್‌ ಶಾ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 3, 2026 10:04 PM

ದೆಹಲಿ, ನ. 3: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR), ಇವಿಎಂ (EVM) ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಸಿದ್ಧ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ‌ (Amit Shah) ಘೋಷಿಸಿದ್ದಾರೆ. ಇದರ ಜತೆಗೆ ಈ ಚರ್ಚೆಯಲ್ಲಿ ಭಾಗವಹಿಸುವಂತೆ ವಿರೋಧ ಪಕ್ಷಗಳಿಗೆ ಸವಾಲು ಹಾಕಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ (ನವೇಂಬರ್‌ 2) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿ ಅವರು ಪ್ರಧಾನಿಯಾಗಿದ್ದೇ ವಿದೇಶಿ ನೆರವಿನಿಂದ. ತಾಕತಿದ್ದರೆ ಈ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಬರುವಂತೆ ಸವಾಲು ಹಾಕಿದ್ದರು. ಅಲ್ಲದೆ ಮಂಗಳವಾರ ಮತ್ತೆ ತಾವು ಸವಾಲು ಹಾಕಿ 24 ಗಂಟೆ ಕಳೆದರೂ ಪ್ರಧಾನಿ ಪ್ರತಿಕ್ರಿಯಿಸಿಲ್ಲ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಅಮಿತ್‌ ಶಾ ಪ್ರತಿಸವಾಲು ಒಡ್ಡಿದ್ದಾರೆ.

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಮಾತನಾಡಿದ ಅಮಿತ್‌ ಶಾ, ಕಾಂಗ್ರೆಸ್ ನಕ್ಸಲಿಸಂ ಅನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಮಾವೋವಾದಿಗಳ ಅಸಂವಿಧಾನಿಕ ಜನತನ ಸರ್ಕಾರವನ್ನು ಬೆಂಬಲಿಸಿದ್ದಲ್ಲದೆ, ಇತ್ತೀಚೆಗೆ ನಕಲಿ ಸಂಸತ್ತು ಆಯೋಜಿಸುವ ಮೂಲಕ ಸಂಸತ್ತನ್ನೇ ಅಪಹಾಸ್ಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್‌ ಗಾಂಧಿ ಅವರ ಎಕ್ಸ್‌ ಪೋಸ್ಟ್:



ಛತ್ತೀಸ್‌ಗಢ ರಾಜ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾ, ʼʼಬಸ್ತಾರ್ ಆಗಿರಲಿ, ಈಶಾನ್ಯ ರಾಜ್ಯಗಳಾಗಿರಲಿ ಅಥವಾ ಕಾಶ್ಮೀರವೇ ಆಗಿರಲಿ, ಕಾನೂನನ್ನು ಪಾಲಿಸುವವರನ್ನು ನಾಗರಿಕರಂತೆ ಕಾಣಲಾಗುತ್ತದೆ. ಆದರೆ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಭದ್ರತಾ ಪಡೆಗಳು ಕಠಿಣ ಕ್ರಮ ಕೈಗೊಳ್ಳುತ್ತವೆʼʼ ಎಂದು ತಿಳಿಸಿದ್ದಾರೆ.

ʼʼನರೇಂದ್ರ ಮೋದಿ ಪ್ರಧಾನಿಯಾಗಿದ್ದು ವಿದೇಶಿ ನೆರವಿನಿಂದ; ಧೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬರಲಿʼʼ: ರಾಹುಲ್‌ ಗಾಂಧಿ ನೇರ ಸವಾಲು

"ಎಸ್‌ಐಆರ್ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲು ನಾವು ಸಿದ್ಧ. ನಿಮ್ಮಲ್ಲಿ ಯಾರಿಗಾದರೂ ಧೈರ್ಯವಿದ್ದರೆ ಬನ್ನಿ. ಈ ದೇಶದ ಜನರ ಮುಂದೆ ಚರ್ಚೆಯಲ್ಲಿ ಪಾಲ್ಗೊಳ್ಳಿ. ಕೇವಲ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಓಡಾಡುವುದರಿಂದ ಸಂವಿಧಾನವನ್ನು ಬೆಂಬಲಿಸಿದಂತಾಗುವುದಿಲ್ಲʼʼ ಎಂದು ರಾಹುಲ್‌ ಗಾಂಧಿ ಹೆಸರನ್ನು ಉಲ್ಲೇಖಿಸದೆ ಅವರ ನಡೆಯನ್ನು ಟೀಕಿಸಿದ್ದಾರೆ.

"ನಕಲಿ ಸಂಸತ್ತಿನ ಹೆಸರಿನಲ್ಲಿ ವಿಪಕ್ಷ ಪ್ರಹಸನ ನಡೆಸಿತು. ನರೇಂದ್ರ ಮೋದಿ ಸರ್ಕಾರವು ಪ್ರತಿಯೊಂದು ವಿಷಯದ ಬಗ್ಗೆಯೂ ಚರ್ಚಿಸಲು ಸಿದ್ಧ ಎಂದು ನಾನು ರಾಹುಲ್ ಜಿ ಅವರಿಗೆ ಹೇಳಬಯಸುತ್ತೇನೆ" ಎಂಬುದಾಗಿ ಅವರು ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?

ಸೋಮವಾರ ಬಹರಂಗ ಚರ್ಚೆಗೆ ಮೋದಿ ಅವರನ್ನು ಆಹ್ವಾನಿಸಿದ್ದ ರಾಹುಲ್‌ ಗಾಂಧಿ ಇಂದು ಮತ್ತೆ ಈ ಸವಾಲನ್ನು ನೆನಪಿಸಿದ್ದಾರೆ. "ಮೋದಿ ಜೀ ನಾನು ನಿಮಗೆ ಸವಾಲು ಹಾಕಿ 24 ಗಂಟೆ ಕಳೆದಿದೆ. ವಿಪಕ್ಷವು ದೇಶವಿರೋಧಿ ಎಂದು ನೀವು ಹೇಳುತ್ತೀರಿ. ಯಾವುದೇ ವೇದಿಕೆ ಅಥವಾ ಸ್ಥಳವನ್ನು ಆರಿಸಿಕೊಳ್ಳಿ ಮತ್ತು ನನ್ನೊಂದಿಗೆ ಚರ್ಚೆಗೆ ಬನ್ನಿ. ದೇಶವಿರೋಧಿ ಯಾರು? ವಿದೇಶಿ ಶಕ್ತಿಗಳೊಂದಿಗೆ ಯಾರಿಗೆ ಸಂಪರ್ಕವಿದೆ ಮತ್ತು ಅದು ಎಂತಹ ಸಂಪರ್ಕ ಎನ್ನುವುದನ್ನು ಚರ್ಚಿಸೋಣ. ಇದನ್ನು ಆದಷ್ಟು ಬೇಗ ಮಾಡಿ. ಹೆದರಬೇಡಿ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದರ ಜತೆಗೆ ದೇಶದ ಆರ್ಥಿಕತೆಯ ಬಗ್ಗೆಯೂ ಚರ್ಚೆ ನಡೆಸೋಣ ಎಂದಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.