Chhath Pooje: ಛತ್ ಪೂಜೆ ಹಿನ್ನಲೆ ಮುಂದಿನ ನಾಲ್ಕು ದಿನ 1,205 ವಿಶೇಷ ರೈಲುಗಳ ಸಂಚಾರ
Special Trains: ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಆಚರಿಸುವ ಛತ್ ಪೂಜೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಸುಮಾರು ನಾಲ್ಕು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬಕ್ಕೆ ಮನೆಗೆ ತೆರಳುವವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಹೆಚ್ಚು ಜನದಟ್ಟನೆ ಸಮಸ್ಯೆ ಆಗುವುದನ್ನು ತಪ್ಪಿಸಲು 1,205 ವಿಶೇಷ ರೈಲುಗಳನ್ನು ನಿಯೋಜಿಸಿದೆ.
-
ನವದೆಹಲಿ: ಛತ್(Chhath) ಪೂಜೆ ಹಿನ್ನೆಲೆ ಜನದಟ್ಟಣೆಯನ್ನು ನಿಭಾಯಿಸಲು ನಿಯಮಿತ ರೈಲು ಸೇವೆಗಳೊಂದಿಗೆ ಮುಂದಿನ ನಾಲ್ಕು ದಿನ 1,205 ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಕೇಂದ್ರ ಸರ್ಕಾರ(Central Government) ಗುರುವಾರ ತಿಳಿಸಿದೆ. ಛತ್ ಪೂಜೆಗೂ ಮುನ್ನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದು, ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಪ್ರಯಾಣಕ್ಕಾಗಿ ಸಿದ್ಧತೆಯನ್ನು ಕೈಗೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw), "ಸ್ಟೇಷನ್‌ಗಳಲ್ಲಿ ಪ್ರಯಾಣಿಕರ ಕ್ರಮಬದ್ಧ ಪ್ರವೇಶಕ್ಕಾಗಿ “ಹೋಲ್ಡಿಂಗ್ ಮತ್ತು ವೇಟಿಂಗ್ ಏರಿಯಾ”ಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಹಬ್ಬದ ಪ್ರಯಾಣ ದಟ್ಟಣೆಯನ್ನು ನಿಭಾಯಿಸಲು ಸುಮಾರು 10,700 ಕಾಯ್ದಿರಿಸಿದ ಹಾಗೂ 3,000 ರಿಸರ್ವೇಶನ್ ಅಲ್ಲದ ರೈಲುಗಳು ಕಾರ್ಯನಿರ್ವಹಿಸಲಿವೆ," ಎಂದಿದ್ದಾರೆ.
ವಾರ್ ರೂಮ್ ಮತ್ತು ನಿಗಾ ವ್ಯವಸ್ಥೆ ಪರಿಶೀಲನೆ
ನವದೆಹಲಿಯ ರೈಲ್ವೆ ಬೋರ್ಡ್‌ನ ವಾರ್ ರೂಮ್‌ಗೆ ಭೇಟಿ ನೀಡಿ, ಪ್ರಯಾಣಿಕರ ಚಲನವಲನ ಪರಿಶೀಲಿಸಿದ ಸಚಿವರು, "ವಿಭಾಗ, ವಲಯ ಮತ್ತು ರೈಲ್ವೆ ಬೋರ್ಡ್ ಮಟ್ಟದಲ್ಲಿ ವಾರ್ ರೂಮ್‌ಗಳನ್ನು ಸ್ಥಾಪಿಸಲಾಗಿದ್ದು, ಬೋರ್ಡ್‌ಗೆ ಎಲ್ಲಾ ಸ್ಥಳಗಳಿಂದ ನೇರ ಮಾಹಿತಿ ಲಭ್ಯವಾಗುತ್ತಿವೆ," ಎಂದರು.
ಪ್ರಮುಖ ನಿಲ್ದಾಣಗಳಲ್ಲಿ ಚಿಕ್ಕ ನಿಯಂತ್ರಣ ಕೊಠಡಿಗಳನ್ನು (mini control rooms) ಸಹ ಸ್ಥಾಪಿಸಲಾಗಿದ್ದು, ಈ ವ್ಯವಸ್ಥೆ ದೇಶದಾದ್ಯಂತ ಪ್ರತಿಯೊಂದು ನಿಲ್ದಾಣದ ಸ್ಥಿತಿ, ಹೆಚ್ಚುವರಿ ರೈಲುಗಳ ಅಗತ್ಯತೆ, ಮತ್ತು ಕಾರ್ಯಾಚರಣೆಯ ಇತರೆ ಅಂಶಗಳನ್ನು ನೇರವಾಗಿ ಸಂಯೋಜಿಸಲು ಸಹಾಯಕವಾಗಿವೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಯಮನಂತೆ ಬಂದ ರೈಲಿನಿಂದ ಜಸ್ಟ್ ಮಿಸ್ ಆದ ತಾತ; ಎದೆ ಝಲ್ಲೆನ್ನಿಸುವ ವಿಡಿಯೊ ವೈರಲ್
ಪ್ರಯಾಣಿಕರಿಗೆ ಹೊಸ ಸೌಲಭ್ಯಗಳು
ನವದೆಹಲಿಯ ರೈಲು ನಿಲ್ದಾಣದಲ್ಲಿ 7,000ಕ್ಕೂ ಹೆಚ್ಚು ಪ್ರಯಾಣಿಕರ ಸಾಮರ್ಥ್ಯ ಸ್ಥಿರ ಹೋಲ್ಡಿಂಗ್ ಪ್ರದೇಶವನ್ನು ಸ್ಥಾಪಿಸಲಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ 150 ಶೌಚಾಲಯಗಳು, ಸ್ವಯಂಚಾಲಿತ ಟಿಕೆಟ್ ಯಂತ್ರಗಳು, ಟಿಕೆಟ್ ಕೌಂಟರ್‌ಗಳು ಮತ್ತು ಉಚಿತ RO ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ವಿಶೇಷ ರೈಲುಗಳ ವೇಳಾಪಟ್ಟಿ
- ಗುರುವಾರದಂದು ದೆಹಲಿ ಪ್ರದೇಶದ ಪ್ರಮುಖ ನಿಲ್ದಾಣಗಳಿಂದ 30 ವಿಶೇಷ ರೈಲುಗಳು ಪ್ರಾರಂಭಗೊಳ್ಳಲಿದ್ದು, 6 ರೈಲುಗಳು ದೆಹಲಿ ಮೂಲಕ ಹಾದು ಹೋಗಲಿವೆ.
- ಅಕ್ಟೋಬರ್ 24 ರಂದು ದೆಹಲಿ ಪ್ರದೇಶದ ನಿಲ್ದಾಣಗಳಿಂದ 17 ವಿಶೇಷ ರೈಲುಗಳು ಸಂಚರಿಸಲಿವೆ.
- ಹಬ್ಬದ ಕಾಲದ ಪ್ರಯಾಣದ ಒತ್ತಡವನ್ನು ನಿಭಾಯಿಸಲು ಸಮಗ್ರ ವಿಶೇಷ ರೈಲು ವೇಳಾಪಟ್ಟಿ ರೂಪಿಸಲಾಗಿದೆ.
- 2025ರ ಅಕ್ಟೋಬರ್ 1ರಿಂದ ನವೆಂಬರ್ 30ರವರೆಗೆ ಭಾರತದೆಲ್ಲೆಡೆ ಸಂಚರಿಸಲಿರುವ 12,000ಕ್ಕೂ ಹೆಚ್ಚು ವಿಶೇಷ ರೈಲುಗಳಲ್ಲಿ, 2,220 ರೈಲುಗಳು ಬಿಹಾರ ರಾಜ್ಯದ ಪ್ರಯಾಣ ಬೇಡಿಕೆಯನ್ನು ಪೂರೈಸಲಿವೆ.
ಪ್ರಯಾಣಿಕರಿಂದ ಮೆಚ್ಚುಗೆ
ಬಿಹಾರಕ್ಕೆ ಪ್ರಯಾಣಿಸುತ್ತಿರುವ ಪ್ರಯಾಣಿಕರು ರೈಲ್ವೆ ಇಲಾಖೆಯ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷ ರೈಲುಗಳ ಸ್ವಚ್ಛತೆ ಮತ್ತು ಸುಗಮ ಪ್ರಯಾಣದ ಅನುಭವವನ್ನು ಅವರು ಶ್ಲಾಘಿಸಿದ್ದಾರೆ.