Crime News: ರಕ್ಷಕನೇ ಭಕ್ಷಕನಾದ! ಎಸ್‌ಐ ವಿರುದ್ಧ ಅತ್ಯಾಚಾರ ಆರೋಪ; ಅಂಗೈನಲ್ಲಿ ಡೆತ್‌ನೋಟ್ ಬರೆದಿಟ್ಟು ವೈದ್ಯೆ ಸೂಸೈಡ್
Physical assault Case: ಪೊಲೀಸರು ಅತ್ಯಾಚಾರ ಹಾಗೂ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ವೈದ್ಯೆಯೊಬ್ಬರು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂಗೈಯಲ್ಲಿ ಆತ್ಮಹತ್ಯಾ ಪತ್ರ ಬರೆದು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
-
Priyanka P
Oct 24, 2025 4:10 PM
ಮುಂಬೈ: ಪೊಲೀಸರ ಮೇಲೆ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಹೊರಿಸಿ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಸತಾರಾದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಕೈಯಲ್ಲಿ ಆತ್ಮಹತ್ಯಾ ಪತ್ರ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ (Crime News).
ಗುರುವಾರ ತಡರಾತ್ರಿ ಫಾಲ್ಟನ್‌ನ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ವೈದ್ಯೆಯ ಶವ ಪತ್ತೆಯಾಗಿದೆ. ಈ ಸಂಬಧ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆತ್ಮಹತ್ಯೆ ಮಾಡಿಕೊಂಡ ವೈದ್ಯೆಯು ಬೀಡ್ ಜಿಲ್ಲೆಯವರು. ಫಾಲ್ಟನ್ ತಹಸಿಲ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ತನ್ನ ಕೈಯಲ್ಲಿ ಆತ್ಮಹತ್ಯೆ ಪತ್ರ ಬರೆದಿಟ್ಟು, ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಅತ್ಯಾಚಾರ ಮತ್ತು ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ.
ತನ್ನ ಅಂಗೈಯಲ್ಲಿ ಬರೆದಿಟ್ಟಿರುವ ಆತ್ಮಹತ್ಯೆ ಪತ್ರದಲ್ಲಿ, ಕಳೆದ ಐದು ತಿಂಗಳಿನಿಂದ ಇಬ್ಬರು ಪೊಲೀಸ್ ಅಧಿಕಾರಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬದನೆ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಮತ್ತೊಬ್ಬ ಸಿಬ್ಬಂದಿ ಪ್ರಶಾಂತ್ ಬಂಕರ್ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: Crime News: ಗೆಳತಿಯನ್ನು ಕೊಂದ 48 ವರ್ಷಗಳ ನಂತರ ಆರೋಪಿ ಅರೆಸ್ಟ್; 23ನೇ ಹರೆಯದಲ್ಲಿ ಕೊಲೆ, 71ನೇ ವಯಸ್ಸಿನಲ್ಲಿ ಬಂಧನ
ಇನ್ನು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ವೈದ್ಯೆಯ ಕೈಯಲ್ಲಿರುವ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾದ ಆರೋಪಗಳ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಸತಾರಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ ಹಾಗೂ ಪೊಲೀಸ್ ಅಧಿಕಾರಿಯ ವಿರುದ್ಧ ಹೊರಿಸಲಾದ ಗಂಭೀರ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಈ ವಿಷಯವನ್ನು ನಾವು ಗಮನಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸತಾರ ಪೊಲೀಸರಿಗೆ ಆದೇಶಿಸಿದ್ದೇವೆ. ಆರೋಪಿಗಳ ವಿರುದ್ಧ ಕಾರ್ಯಾಚರಣೆಗೆ ತಂಡಗಳನ್ನು ನಿಯೋಜಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಹೆಡೆಮುರಿ ಕಟ್ಟದೆ ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ಚಕಂಕರ್ ಹೇಳಿದ್ದಾರೆ.
ಇನ್ನು ವೈದ್ಯೆಯ ಆತ್ಮಹತ್ಯೆ ಕುರಿತು ರಾಜ್ಯ ಕಾಂಗ್ರೆಸ್ ನಾಯಕ ವಿಜಯ್ ನಾಮದೇವರಾವ್ ವಡೆಟ್ಟಿವಾರ್ ಆಡಳಿತಾರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರ ಕರ್ತವ್ಯ ರಕ್ಷಣೆ ನೀಡುವುದು. ಆದರೆ, ಅವರೇ ಮಹಿಳಾ ವೈದ್ಯರನ್ನು ಶೋಷಿಸುತ್ತಿದ್ದರೆ, ನ್ಯಾಯ ಹೇಗೆ ಸಿಗುತ್ತದೆ? ಈ ಹಿಂದೆ ದೂರು ನೀಡಿದ್ದರೂ ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ? ಸರ್ಕಾರವು ಪೊಲೀಸರನ್ನು ಪದೇ ಪದೇ ರಕ್ಷಿಸುತ್ತದೆ, ಇದು ಪೊಲೀಸ್ ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಕೇವಲ ತನಿಖೆಗೆ ಆದೇಶಿಸಿದರೆ ಸಾಲದು. ಈ ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಅವರು ತನಿಖೆಯ ಮೇಲೆ ಒತ್ತಡ ಹೇರಬಹುದು. ಆಕೆ ಈ ಹಿಂದೆ ದೂರು ನೀಡಿದ್ದಾಗ ಏಕೆ ಗಂಭೀರವಾಗಿ ಪರಿಗಣಿಸಲಿಲ್ಲ? ಅದನ್ನು ನಿರ್ಲಕ್ಷಿಸಿದವರು ಮತ್ತು ಈ ಪೊಲೀಸ್ ಅಧಿಕಾರಿಗಳನ್ನು ರಕ್ಷಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.