ರಾಜಾ ರಘುವಂಶಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು
Raja Raghuvanshi murder: ಗಂಡ ರಘುವಂಶಿಯನ್ನು ಕೊಂದ ಮರುದಿನ ಸೋನಂ ಹಾಗೂ ಆಕೆಯ ಪ್ರೇಮಿ ರಾಜ್ ಒಟ್ಟಿಗೆ ಇಂದೋರ್‌ಗೆ ಪ್ರಯಾಣ ಬೆಳೆಸಿದ್ದರು. ಆ ಬಳಿಕ ಒಟ್ಟಿಗೇ ವಾಸವಿದ್ದರು. ಪೊಲೀಸರು ಬಲೆ ಬೀಸಿದ ಬಳಿಕ ರಾಜ್ ಸೋನಂಳನ್ನು ತನ್ನ ಸ್ವಂತ ಊರು ಉತ್ತರ ಪ್ರದೇಶದ ಗಾಝಿಪುರಕ್ಕೆ ಕಳಿಸಿದ್ದ.


ನವದೆಹಲಿ: ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಮೇಘಾಲಯದ ‘ಮಧುಚಂದ್ರ ಕೊಲೆ’ ಪ್ರಕರಣಕ್ಕೆ(Raja Raghuvanshi murder) ಸಂಬಂಧಿಸಿದಂತೆ ಹತ್ಯೆಯ ಇಬ್ಬರು ಸಹ ಆರೋಪಿಗಳಾದ ಲೋಕೇಂದ್ರ ಸಿಂಗ್ ತೋಮರ್ ಮತ್ತು ಬಾಬಿರ್ ಅಹಿರ್ವಾರ್ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣದ ಪ್ರಮುಖ ಐವರು ಆರೋಪಿಗಳಾದ ಸೋನಂ(Sonam),ರಾಜ್, ಆನಂದ್ ಕುರ್ಮಿ, ವಿಶಾಲ್ ಮತ್ತು ಆಕಾಶ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ತೋಮರ್ ಮತ್ತು ಅಹಿರ್ವಾರ್ ಸೋನಮ್ ಇಂದೋರ್‌ನಲ್ಲಿ ತಂಗಿದ್ದ ಫ್ಲಾಟ್‌ನ ಭದ್ರತಾ ಸಿಬ್ಬಂದಿಯಾಗಿದ್ದರು. ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ ಕಾರಣ ಇವರಿಗೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜಾಮೀನು ನೀಡಿದ್ದಾರೆ. ಉದ್ಯಮಿ ರಾಜಾ ರಘುವಂಶಿ ಹತ್ಯೆಯ ನಂತರ ಸೋನಮ್ ಮತ್ತು ಆಕೆಯ ಗೆಳೆಯ ರಾಜ್ ಕುಶ್ವಾಹ ಈ ಫ್ಲಾಟ್‌ವೊಂದರಲ್ಲಿ ತಂಗಿದ್ದರು.
ಇಂದೋರ್ ಮೂಲಕ ಉದ್ಯಮಿ ರಾಜಾ ರಘುವಂಶಿ, ಪತ್ನಿ ಸೋನಮ್ ಜತೆ ಮೇಘಾಲಯಕ್ಕೆ ಮಧುಚಂದ್ರಕ್ಕೆ ಬಂದಿದ್ದಾಗ ಮೇ 23ರಂದು ಕೊಲೆಯಾಗಿದ್ದರು. ಮೇ 11ರಂದು ಸೋನಂ ಹಾಗೂ ರಾಜಾ ರಘುವಂಶಿ ಮದುವೆಯಾಗಿದ್ದರು. ಇಬ್ಬರು ಮೇ 20ರಂದು ಮೇಘಾಲಯಕ್ಕೆ ಮಧುಚಂದ್ರಕ್ಕೆ ತೆರಳಿದ್ದರು. ಮೇ 23ರಂದು ಫೋಟೋ ಶೂಟ್ ಮಾಡೋಣ ಎಂದು ಸೋನಂ ಗಂಡನನ್ನು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದಳು. ಆ ವೇಳೆ ಆಕೆ ಸುಪಾರಿ ಕೊಟ್ಟಿದ್ದ ಮೂವರು ಹಂತಕರು ಹಿಂಬಾಲಿಸಿ ಬಂದು, ರಘುವಂಶಿಯನ್ನು ಮಾತಾಡಿಸಿದರು. ತನಗೆ ಬಹಳ ಸುಸ್ತಾಗಿದೆ ಎಂದು ನಾಟಕ ಆರಂಭಿಸಿದ ಸೋನಂ ಗಂಡ ಮತ್ತು ಹಂತಕರ ಹಿಂದೆ ನಿಧಾನಕ್ಕೆ ಹೆಜ್ಜೆ ಹಾಕತೊಡಗಿದಳು. ಐವರೂ ನಿರ್ಜನ ಸ್ಥಳಕ್ಕೆ ತೆರಳಿದ ಬಳಿಕ ‘ಅವನನ್ನು ಕೊಲ್ಲಿ’ ಎಂದು ಹಂತಕರಿಗೆ ಕೂಗಿ ಹೇಳಿದ್ದಳು.
ಗಂಡ ರಘುವಂಶಿಯನ್ನು ಕೊಂದ ಮರುದಿನ ಸೋನಂ ಹಾಗೂ ಆಕೆಯ ಪ್ರೇಮಿ ರಾಜ್ ಒಟ್ಟಿಗೆ ಇಂದೋರ್‌ಗೆ ಪ್ರಯಾಣ ಬೆಳೆಸಿದ್ದರು. ಆ ಬಳಿಕ ಒಟ್ಟಿಗೇ ವಾಸವಿದ್ದರು. ಪೊಲೀಸರು ಬಲೆ ಬೀಸಿದ ಬಳಿಕ ರಾಜ್ ಸೋನಂಳನ್ನು ತನ್ನ ಸ್ವಂತ ಊರು ಉತ್ತರ ಪ್ರದೇಶದ ಗಾಝಿಪುರಕ್ಕೆ ಕಳಿಸಿದ್ದ.