ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʼʼಬಿಜೆಪಿ ಬಜೆಟ್‌ ಪುತ್ರನಿದ್ದಂತೆ, ಕಾಂಗ್ರೆಸ್‌ ಬಜೆಟ್‌ ಪುತ್ರಿಯಿದ್ದಂತೆʼʼ; ಲಿಂಗ ತಾರತಮ್ಯದ ಹೇಳಿಕೆ ಮೂಲಕ ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕ

Bahadur Singh Koli: ಕಾಂಗ್ರೆಸ್‌ ಬಜೆಟ್‌ ಅನ್ನು ಹೆಣ್ಣು ಮಕ್ಕಳಿಗೆ ಹೋಲಿಸುವ ಮೂಲಕ ರಾಜಸ್ಥಾನದ ಬಿಜೆಪಿ ಶಾಸಕ ಬಹದ್ದೂರ್‌ ಸಿಂಗ್‌ ಕೋಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿಯ ಬಜೆಟ್‌ಗಳನ್ನು ಪುತ್ರನಿಗೆ ಹೋಲಿಸಿ ಯೌವ್ವನದ ಪ್ರತಿಬಿಂಬವೆಂದು ಹೇಳಿ, ಕಾಂಗ್ರೆಸ್‌ನ ಬಜೆಟ್‌ ಪ್ರತಿ ಎಂದು ಕರೆದು ವೃದ್ಧಾಪ್ಯದ ಪ್ರತಿಬಿಂಬವೆಂದು ಚಿತ್ರಿಸಿದ್ದಾರೆ.

ಬಹದ್ದೂರ್‌ ಸಿಂಗ್‌ ಕೋಲಿ

ಜೈಪುರ, ಫೆ. 18: ಬಜೆಟ್‌ಗೂ ಹುಟ್ಟುವ ಮಕ್ಕಳಿಗೂ ಸಂಬಂಧವಿದೆಯಾ? ಮೇಲ್ನೋಟಕ್ಕೆ ಯಾವುದೇ ಸಂಬಂಧವಿಲ್ಲ. ಆದರೆ ಬಿಜೆಪಿ (BJP) ಶಾಸಕರೊಬ್ಬರು ಇವೆರಡಕ್ಕೆ ಸಂಬಂಧ ಕಲ್ಪಿಸಲು ಹೋಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸದ್ಯ ಅವರ ಈ ಹೇಳಿಕೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ವಿಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದೆ. ಅಷ್ಟಕ್ಕೂ ಯಾರು ಈ ಬಿಜೆಪಿ ಶಾಸಕ? ಅವರು ಹೇಳಿದ್ದಾದರೂ ಏನು? ಯಾಯೆ ಈ ವಿಚಾರ ಇಷ್ಟೊಂದು ಸದ್ದು ಮಾಡುತ್ತಿದೆ? ನಿಮ್ಮೆಲ್ಲ ಪ್ರಶ್ನೆಗೆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ವಿವಾದ ಎದ್ದಿರುವುದು ನಮ್ಮ ರಾಜ್ಯದಲ್ಲಲ್ಲ. ಬದಲಾಗಿ ರಾಜಸ್ಥಾನದಲ್ಲಿ. ರಾಜಸ್ಥಾನ ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆ ನಡೆಯುವಾಗ ಆಡಳಿತರೂಢ ಬಿಜೆಪಿ ಶಾಸಕ ಬಹದ್ದೂರ್‌ ಸಿಂಗ್‌ ಕೋಲಿ (Bahadur Singh Koli) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಬಜೆಟ್‌ ಅನ್ನು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಹೋಲಿಸಿದ್ದಾರೆ.

ಬಹದ್ದೂರ್‌ ಸಿಂಗ್‌ ಕೋಲಿ ಅವರ ವಿವಾದಾತ್ಮಕ ಹೇಳಿಕೆ:



ಬಹದ್ದೂರ್‌ ಸಿಂಗ್‌ ಕೋಲಿ ಹೇಳಿದ್ದೇನು?

ಬಿಜೆಪಿ ಸರ್ಕಾರದ ಬಜೆಟ್‌ ಅನ್ನು ಹೊಗಳುವ ಭರದಲ್ಲಿ ಬಹದ್ದೂರ್‌ ಸಿಂಗ್‌ ಕೋಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಅವರು ಹೆಣ್ಣು ಮಕ್ಕಳಿಗೆ ಅವಮಾನ ಎಸಗಿದ್ದಾರೆ ಎನ್ನುವ ಕೂಗು ಎದ್ದಿದೆ. ʼʼಬಿಜೆಪಿ ಸರ್ಕಾರದ ಬಜೆಟ್‌ ಎಂದರೆ ಅದು ಗಂಡು ಮಗುವಿಗೆ ಜನ್ಮ ನೀಡಿದಂತೆ. ಕೊನೆಯ ಬಾರಿ ಕಾಂಗ್ರೆಸ್‌ ಮುಂದಿಟ್ಟ ಬಜೆಟ್‌ ಹೆಣ್ಣು ಮಗುವಿಗೆ ಜನ್ಮ ನೀಡಿದಂತೆ. ಬಿಜೆಪಿ ಬಜೆಟ್‌ ತಾರುಣ್ಯದಿಂದ ಕೂಡಿದ್ದರೆ ಕಾಂಗ್ರೆಸ್‌ ಬಜೆಟ್‌ ವೃದ್ಧಾಪ್ಯದ ಸಂಕೇತʼʼ ಎಂದಿದ್ದಾರೆ.

ಅಪರಾಧಿಗಳೊಂದಿಗೆ ಮದುವೆ ಸಂಭ್ರಮ; ರಾಜಸ್ಥಾನ ಕಾನ್ಸ್‌ಟೇಬಲ್ ಸೇವೆಯಿಂದ ವಜಾ

ʼʼನಮ್ಮ ಮೊದಲ, ದ್ವಿತೀಯ ಮತ್ತು ತೃತೀಯ ಬಜೆಟ್‌ ಅನ್ನು ಇಡೀ ರಾಜಸ್ಥಾನವೇ ಹೊಗಳಿದೆ. ನಮ್ಮ ಸರ್ಕಾರ ಮೂರೂ ಬಜೆಟ್‌ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದೆ. ಗಂಡು ಮಗುವಿಗೆ ಜನ್ಮ ನೀಡುವುದು ಯಾವತ್ತೂ ಉಪಯುಕ್ತʼʼ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಕಳೆದ ಕಾಂಗ್ರೆಸ್‌ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮುಂದಿಟ್ಟ ಬಜೆಟ್‌ ಅನ್ನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಹೋಲಿಸಿದ್ದಾರೆ. ʼʼಅಶೋಕ್‌ ಆಡಳಿತದಲ್ಲಿ ಹೆಣ್ಣು ಮಗು ಜನಿಸಿದೆ. ಇದೇ ಕಾರಣಕ್ಕ ಇಂದು ಕಾಂಗ್ರೆಸ್‌ ಆಡಳಿತದಿಂದ ದೂರವಾಗಿ ವಿಪಕ್ಷ ಸ್ಥಾನದಲ್ಲಿದೆʼʼ ಎಂದು ನಾಲಗೆ ಹರಿಯಬಿಟ್ಟಿದ್ದಾರೆ.

ಕಾಂಗ್ರೆಸ್‌ನಿಂದ ವಾಗ್ದಾಳಿ

ಸದ್ಯ ಕೋಲಿ ಅವರ ಈ ಹೇಳಿಕೆಯನ್ನು ಕಾಂಗ್ರೆಸ್‌ ಖಂಡಿಸಿದೆ. ವಿಪಕ್ಷ ನಾಯಕ ಟಿಕಾ ರಾಮ್ ಜಲ್ಲಿ ಈ ಹೇಳಿಕೆಯನ್ನು ಟೀಕಿಸಿ, ಇದು ತಾರತಮ್ಯ ಮತ್ತು ಅನುಚಿತ ಎಂದು ಕರೆದಿದ್ದಾರೆ. "ಫೆಬ್ರವರಿ 16ರಂದು ಬಿಜೆಪಿ ಶಾಸಕರು ಬಜೆಟ್ ಕುರಿತು ಮಾತನಾಡುವಾಗ ಪುತ್ರ ಮತ್ತು ಪುತ್ರಿಯ ನಡುವೆ ತಾರತಮ್ಯ ಮಾಡುವ ಹೇಳಿಕೆ ನೀಡಿದರು. ಇದನ್ನು ಖಂಡಿಸುವ ಬದಲು ಬಿಜೆಪಿ ಶಾಸಕರು ನಗುತ್ತಿದ್ದರು. ಇಂದಿಗೂ ಅಂತಹ ಚಿಂತನೆ ಮುಂದುವರಿದಿದೆ ಎಂದು ನನಗೆ ನಾಚಿಕೆಯಾಗುತ್ತದೆ" ಎಂದು ಜಲ್ಲಿ ಹೇಳಿದ್ದಾರೆ. ಬಜೆಟ್ ಮೇಲಿನ ಗಂಭೀರ ಚರ್ಚೆಯಲ್ಲಿ ಲಿಂಗ ಆಧಾರಿತ ಹೋಲಿಕೆಗಳಿಗೆ ಸ್ಥಾನವಿಲ್ಲ ಎಂದು ಪ್ರತಿಪಾದಿಸಿದ ಜಲ್ಲಿ, ಆಡಳಿತ ಪಕ್ಷವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು. ಅದಾಗ್ಯೂ ಕೋಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಬಿಜೆಪಿ ಈ ಕುರಿತು ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author