ಲಖನೌ, ಜೂ. 18: ಅಯೋಧ್ಯ ರಾಮ ಮಂದಿರದ (Ayodhya Rama Mandir) ದೇಣಿಗೆ ಪೆಟ್ಟಿಗೆಗಳಿಂದ ನಗದು ಮತ್ತು ಆಭರಣ ಕಳವು (Ram Temple Donation Case) ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಮಹತ್ವದ ಸುಳಿವುಗಳನ್ನು ಪತ್ತೆಹಚ್ಚಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ತಿರುಚಿರುವ ಸಾಧ್ಯತೆ ಕಂಡುಬಂದಿದ್ದು, ಪ್ರಕರಣದ ತನಿಖೆ ಮತ್ತಷ್ಟು ವಿಸ್ತರಿಸಿದೆ. ಮಂದಿರ ಸಂಕೀರ್ಣದಲ್ಲಿ ಮೂರನೇ ದಿನವೂ ತೀವ್ರ ತನಿಖೆ ನಡೆಸಿದ ಅಧಿಕಾರಿಗಳು, ಸಿಸಿಟಿವಿ ವ್ಯವಸ್ಥೆ, ದಾಖಲಾಗಿರುವ ದೃಶ್ಯಗಳು ಹಾಗೂ ಭದ್ರತಾ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸಿದರು. ಈ ವೇಳೆ ಸಿಸಿಟಿವಿ ದೃಶ್ಯಗಳಲ್ಲಿ ಹಸ್ತಕ್ಷೇಪ ನಡೆದಿರುವ ಸುಳಿವುಗಳು ಲಭ್ಯವಾಗಿದ್ದು, ಕ್ಯಾಮರಾ ಮೇಲ್ವಿಚಾರಣೆ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಸಿಬ್ಬಂದಿಯ ಮೇಲೆ ತನಿಖೆಯ ಕಣ್ಣು ನೆಟ್ಟಿದೆ.
ಪ್ರಕರಣ ಸಂಬಂಧ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಜತೆಗೆ ಸಿಸಿಟಿವಿ ಮೇಲ್ವಿಚಾರಣೆ, ಗೇಟ್ ತಪಾಸಣೆ ಹಾಗೂ ಭದ್ರತಾ ವ್ಯವಸ್ಥೆಯ ಜವಾಬ್ದಾರಿ ಹೊಂದಿದ್ದ ಸಿಬ್ಬಂದಿಯ ಪಾತ್ರವನ್ನೂ ಪರಿಶೀಲಿಸಲಾಗುತ್ತಿದೆ.
SIT ಪರಿಶೀಲಿಸಿದ ದಾಖಲೆಗಳ ಪ್ರಕಾರ, ಕಳೆದ 11 ತಿಂಗಳಲ್ಲಿ ಮಂದಿರದ ಭದ್ರತಾ ವ್ಯವಸ್ಥೆಗಾಗಿ ಸುಮಾರು 10 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಇಷ್ಟೊಂದು ಭದ್ರತಾ ವೆಚ್ಚದ ನಡುವೆಯೂ ದೇಣಿಗೆ ಪೆಟ್ಟಿಗೆಗಳಿಂದ ನಗದು ಮತ್ತು ಆಭರಣಗಳು ಕಳುವಾಗಿರುವ ಆರೋಪ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದೇಣಿಗೆ ಹಣ ಎಣಿಕೆ ಪ್ರಕ್ರಿಯೆ ಹಾಗೂ ಸಂಬಂಧಿತ ಬ್ಯಾಂಕಿನ ಪಾತ್ರವನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ದೇಣಿಗೆ ಎಣಿಕೆ ವೇಳೆ ಟ್ರಸ್ಟ್ ಸಿಬ್ಬಂದಿಗಿಂತ ಬ್ಯಾಂಕ್ ಸಿಬ್ಬಂದಿಯೇ ಹೆಚ್ಚು ಸಂಖ್ಯೆಯಲ್ಲಿ ಇದ್ದರೆಂಬ ಮಾಹಿತಿಯ ಹಿನ್ನೆಲೆ, ನಿರ್ಲಕ್ಷ್ಯ ಅಥವಾ ಅಕ್ರಮ ನಡೆದಿದೆಯೇ ಎಂಬ ಅನುಮಾನವೂ ತನಿಖೆಯಲ್ಲಿದೆ.
ಇದಲ್ಲದೆ, ಟ್ರಸ್ಟ್‌ನ ಹಿರಿಯ ಅಧಿಕಾರಿಗಳಿಗೆ ನೇರವಾಗಿ ವರದಿ ಮಾಡುತ್ತಿದ್ದ ಕೆಲ ಸಿಬ್ಬಂದಿಯೂ ತನಿಖಾ ವ್ಯಾಪ್ತಿಗೆ ಬಂದಿದ್ದಾರೆ. ಸಿಸಿಟಿವಿ ನಿರ್ವಹಣೆ, ಭದ್ರತಾ ಮೇಲ್ವಿಚಾರಣೆ, ಸಂದರ್ಶಕರ ಪ್ರವೇಶ ನಿಯಂತ್ರಣ ಹಾಗೂ ಪಾಸ್ ವಿತರಣೆಯ ಜವಾಬ್ದಾರಿ ಹೊಂದಿದ್ದ ಸಿಬ್ಬಂದಿಯ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಭಕ್ತರ ಮನಸೆಳೆಯುತ್ತಿದೆ ಅಯೋಧ್ಯ ಶ್ರೀ ರಾಮ ಮಂದಿರ ಪ್ರದರ್ಶನ
ಭದ್ರತಾ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ನಿರ್ಲಕ್ಷ್ಯ ಅಥವಾ ಒಳಸಂಚು ನಡೆದಿದೆಯೇ ಎಂಬುದನ್ನೂ SIT ಪರಿಶೀಲಿಸುತ್ತಿದೆ. ಸಿಸಿಟಿವಿ ಹಾಗೂ ಭದ್ರತಾ ನಿರ್ವಹಣೆಗೆ ಸಂಬಂಧಿಸಿದ ಕೆಲವು ಸಿಬ್ಬಂದಿಯ ಸೇವಾ ದಾಖಲೆಗಳನ್ನು ಸಹ ಸಂಗ್ರಹಿಸಲಾಗುತ್ತಿದೆ.
200 ಮಂದಿಯ ವಿಚಾರಣೆ
ಈ ಪ್ರಕರಣದಲ್ಲಿ ಸುಮಾರು 200 ಮಂದಿಯನ್ನು ವಿಚಾರಣೆಗೆ ಒಳಪಡಿಸಲು SIT ಪಟ್ಟಿ ಸಿದ್ಧಪಡಿಸಿದೆ. ಈಗಾಗಲೇ 125ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದ್ದು, ಕೆಲವರನ್ನು ಹಲವು ಬಾರಿ ಪ್ರಶ್ನಿಸಲಾಗಿದೆ. ಕಳ್ಳತನ ಹೇಗೆ ನಡೆಯಿತು ಹಾಗೂ ಇದರ ಹಿಂದೆ ದೊಡ್ಡ ಜಾಲವಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ತನಿಖೆ ಮಧ್ಯೆ ರಾಮಮಂದಿರದ ದೇಣಿಗೆ ಹಣ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಫೋಟೊವೊಂದು ಕೂಡ ಹೊರಬಂದಿದೆ. ವಿಡಿಯೊದಿಂದ ತೆಗೆದಿರುವುದಾಗಿ ಹೇಳಲಾಗಿರುವ ಈ ಚಿತ್ರದಲ್ಲಿ, ಭಕ್ತರು ನೀಡಿದ ನಗದು ದೇಣಿಗೆಯನ್ನು ಮಂದಿರ ಸಿಬ್ಬಂದಿ ಮೇಜುಗಳ ಮೇಲೆ ಇಟ್ಟು ಎಣಿಸುತ್ತಿರುವುದು ಕಂಡುಬಂದಿದೆ. ಈ ದೃಶ್ಯವು ದೇಣಿಗೆ ಹಣ ನಿರ್ವಹಣೆ ಹಾಗೂ ಎಣಿಕೆ ಪ್ರಕ್ರಿಯೆಯ ಒಳನೋಟವನ್ನು ನೀಡಿದೆ.