ಮುಂಬೈ, ಜೂ.18: ದೆಹಲಿ ಕಡೆಗೆ ತಡರಾತ್ರಿ ವಿಮಾನ ಪ್ರಯಾಣ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರೊಂದಿಗೆ ರಹಸ್ಯ ಸಭೆ ಹಾಗೂ ಲೋಕಸಭಾ ಸ್ಪೀಕರ್‌ಗೆ ಪತ್ರ ಸಲ್ಲಿಕೆ, ಈ ಎಲ್ಲ ಬೆಳವಣಿಗೆಗಳು ಶಿವಸೇನೆಯ ಆರು ಸಂಸದರ ಬಂಡಾಯವು ಅತ್ಯಂತ ಸಂಯೋಜಿತವಾಗಿ ಮತ್ತು ಸಾರ್ವಜನಿಕ ಗಮನದಿಂದ ದೂರವೇ ನಡೆದಿರುವುದನ್ನು ಸೂಚಿಸುತ್ತವೆ. ಜೂನ್ 16 ರ ಮಧ್ಯರಾತ್ರಿಯ ನಂತರ ಉದ್ಧವ್ ಠಾಕ್ರೆ (Uddhav Thackeray) ಅವರ ಶಿವಸೇನೆ ಬಣದಲ್ಲಿ ಎರಡನೇ ವಿಭಜನೆ ರೂಪುಗೊಳ್ಳಲು ಪ್ರಾರಂಭಿಸಿತು ಎನ್ನಲಾಗಿದೆ. ಈಗ ಈ ವಿಭಜನೆ ಬಹುತೇಕ ಅನಿವಾರ್ಯ ಎನ್ನುವಂತಾಗಿದೆ. ಪಕ್ಷದ ಒಂಬತ್ತು ಲೋಕಸಭಾ ಸಂಸದರ ಪೈಕಿ ಕೇವಲ ಮೂವರು ಮಾತ್ರ ಪಕ್ಷದ ವಿಪ್ ಇದ್ದರೂ ಗುರುವಾರ (ಜೂ.17) ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರು.
ಬಂಡಾಯ ಎದ್ದಿರುವ ಸಂಸದರಾದ ಸಂಜಯ್ ಜಾಧವ್, ಸಂಜಯ್ ದೇಶಮುಖ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ, ನಾಗೇಶ್ ಪಾಟೀಲ್ ಅಷ್ಟಿಕರ್ ಮತ್ತು ಸಂಜಯ್ ದಿನಾ ಪಾಟೀಲ್, ಈಗಾಗಲೇ ಜೂನ್ 14 ರಂದು ಸಭೆಯಿಂದ ಹೊರಗುಳಿದಿದ್ದರು. ಇದಕ್ಕೂ ಮುನ್ನ ಅವರು ಆದಿತ್ಯ ಠಾಕ್ರೆ ಅವರ ಜನ್ಮದಿನದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲೂ ಭಾಗವಹಿಸಿರಲಿಲ್ಲ.
ಜೂನ್ 16 ರಂದು ದೆಹಲಿ ತಲುಪಿದ ಮೊದಲ ಸಂಸದ ನಾಗೇಶ್ ಅಶ್ಟಿಕರ್ ಅವರು ಬೆಳಗಿನ ಜಾವ 1.30 ರ ಸುಮಾರಿಗೆ ನಾಂದೇಡ್‌ನಿಂದ ಖಾಸಗಿ ಜೆಟ್ ಮೂಲಕ ತೆರಳಿದರು. ಕೆಲವು ಗಂಟೆಗಳ ನಂತರ, ಸಂಜಯ್ ದೇಶಮುಖ್ ಮತ್ತು ಸಂಜಯ್ ಜಾಧವ್ ಕೂಡ ಪ್ರತ್ಯೇಕ ಖಾಸಗಿ ಜೆಟ್‌ನಲ್ಲಿ ನಾಂದೇಡ್ ನಿಂದ ದೆಹಲಿ ತಲುಪಿದರು.
Kunal Kamra: ಏಕನಾಥ್ ಶಿಂಧೆ ಪ್ರಕರಣ; ಕುನಾಲ್ ಕಮ್ರಾಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
ವಕ್ಚೌರೆ ಹೈದರಾಬಾದ್‌ನಿಂದ ಖಾಸಗಿ ಜೆಟ್ ಮೂಲಕ ಆಗಮಿಸಿದರೆ, ಸಂಜಯ್ ದಿನಾ ಪಾಟೀಲ್ ಮತ್ತು ಮಹಾರಾಷ್ಟ್ರ ಸಚಿವ ಪ್ರತಾಪ್ ಸರ್ನಾಯಕ್ ಆ ರಾತ್ರಿ ನಂತರ ದೆಹಲಿ ತಲುಪಿದರು. ಶಿವಸೇನಾ ಮುಖ್ಯಸ್ಥ ಏಕನಾಥ್ ಶಿಂಧೆ ಜೂನ್ 16 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೆಹಲಿಗೆ ಆಗಮಿಸುವ ಮೊದಲು ಮುಂಬೈನಿಂದ ಜೈಪುರಕ್ಕೆ ವಿಮಾನದಲ್ಲಿ ತೆರಳಿದರು ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಸಂಸದ ಮತ್ತು ಶಿಂಧೆ ಅವರ ಪುತ್ರ ಶ್ರೀಕಾಂತ್ ಬೆಳಗಿನ ಜಾವ 4.30 ರ ಸುಮಾರಿಗೆ ಆಗಮಿಸಿದರು. ನಂತರ ಪುಣೆಯಿಂದ ಓಂರಾಜೆ ನಿಂಬಾಳ್ಕರ್ ಆಗಮಿಸಿದರು. ನಂತರ ಬಂಡಾಯ ಸಂಸದರಿಗೆ ನೋಯ್ಡಾದ ಹೋಟೆಲ್‌ನಲ್ಲಿ ವಸತಿ ಕಲ್ಪಿಸಲಾಯಿತು ಎನ್ನಲಾಗಿದೆ.
ಜೂನ್ 17 ರಂದು, ಶ್ರೀಕಾಂತ್ ಮತ್ತು ನಿಂಬಾಳ್ಕರ್ ಅವರು ಬೆಳಗ್ಗೆ 7 ಗಂಟೆ ಸುಮಾರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದರು. ಬೆಳಗ್ಗೆ 10.20 ರ ಸುಮಾರಿಗೆ, ಇತರ ಐದು ಸಂಸದರು ಸ್ಪೀಕರ್ ಅವರನ್ನು ಭೇಟಿ ಮಾಡಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ವಿಲೀನಗೊಳ್ಳುತ್ತಿರುವುದಾಗಿ ಮತ್ತು ಸದನದಲ್ಲಿ ತಮ್ಮ ಆಸನವನ್ನು ಬದಲಾಯಿಸುವಂತೆ ವಿನಂತಿಸುವುದಾಗಿ ಪತ್ರವನ್ನು ಸಲ್ಲಿಸಿದರು.