ಕೋಲ್ಕತ್ತಾ, ಜೂ. 11: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ವಿರುದ್ಧದ ಸಹಿ ಪೋರ್ಜರಿ ಪ್ರಕರಣದಲ್ಲಿ ಕೋಲ್ಕತ್ತಾ ಹೈಕೋರ್ಟ್ (Kolkata High Court) ರಿಲೀಫ್ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಅಭಿಷೇಕ್ ಬ್ಯಾನರ್ಜಿಗೆ ತಾತ್ಕಾಲಿಕ ರಿಲೀಫ್ ನೀಡಿತು. ತನಿಖೆ ನಡೆಯುತ್ತಿರುವ ಅವಧಿಯಲ್ಲಿ ಅವರ ವಿರುದ್ಧ ಬಂಧನ ಅಥವಾ ಇತರ ಕಾನೂನು ಕ್ರಮಗಳನ್ನು ಕೈಗೊಳ್ಳಬಾರದು ಎಂದು ನ್ಯಾಯಾಲಯ ಮಧ್ಯಂತರ ರಕ್ಷಣೆ ನೀಡಿದೆ. ಆದರೆ, ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಮುಂದೆ ಹಾಜರಾಗುವಂತೆ ಆದೇಶಿಸಿದೆ.
ವಾರಾಂತ್ಯದಿಂದ ದೆಹಲಿಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರಿಗೆ ಇಂದು (ಗುರುವಾರ, ಜೂ. 11) ಸಂಜೆ 6 ಗಂಟೆಯೊಳಗೆ ಕೋಲ್ಕತ್ತಾದ ಸಿಐಡಿ ಪ್ರಧಾನ ಕಚೇರಿಯಲ್ಲಿ ಹಾಜರಾಗಿ ತನಿಖಾಧಿಕಾರಿಗಳೊಂದಿಗೆ ಸಹಕರಿಸುವಂತೆ ನ್ಯಾಯಮೂರ್ತಿ ಕೌಸಿಕ್ ಚಂದಾ ಆದೇಶಿಸಿದರು.
ವಿಚಾರಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಬಳಿಕ ಅಭಿಷೇಕ್ ಬ್ಯಾನರ್ಜಿ ಅವರಿಗೆ ತೆರಳಲು ಅನುಮತಿ ನೀಡಬೇಕು. ಜೊತೆಗೆ, ಮುಂದಿನ ಮೂರು ವಾರಗಳ ಕಾಲ ಅವರ ವಿರುದ್ಧ ಯಾವುದೇ ಬಲವಂತದ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದೆ. ಎರಡು ವಾರಗಳಲ್ಲಿ ಈ ವಿಷಯ ಮತ್ತೆ ಚರ್ಚೆಗೆ ಬರಲಿದ್ದು, ಅಷ್ಟರೊಳಗೆ ತನಿಖೆಯ ವರದಿಯನ್ನು ಸಲ್ಲಿಸುವಂತೆ ಸಿಐಡಿಗೆ ಸೂಚಿಸಲಾಗಿದೆ.
ಸಹಿ ಫೋರ್ಜರಿ ಪ್ರಕರಣ: ಮಮತಾ ನಿವಾಸಕ್ಕೆ ಸಿಐಡಿ ಭೇಟಿ, ಅಭಿಷೇಕ್ ಬ್ಯಾನರ್ಜಿ ಕಚೇರಿಯಲ್ಲೂ ಶೋಧ
ಈ ಪ್ರಕರಣವು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಗೆ ಸಂಬಂಧಿಸಿದ ದಾಖಲೆಗಳಲ್ಲಿ ಹಲವಾರು ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪ ಅವರ ಮೇಲಿದೆ. ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಕಲಿಘಾಟ್ ನಿವಾಸದಲ್ಲಿ ನಡೆದಿತ್ತೆಂದು ಹೇಳಲಾಗಿರುವ ಸಭೆ ವಿವಾದದ ಕೇಂದ್ರಬಿಂದುವಾಗಿದೆ. ಆ ಸಭೆಯಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಹುದ್ದೆಗೆ ಸಂಬಂಧಿಸಿದ ಚರ್ಚೆಗಳು ನಡೆದಿದ್ದವು ಎನ್ನಲಾಗಿದೆ.
ನಂತರ, ಆ ಪ್ರಕ್ರಿಯೆಗೆ ಸಂಬಂಧಿಸಿದ ಕೆಲವು ದಾಖಲೆಗಳಲ್ಲಿ ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆ ನಡೆಸುತ್ತಿದೆ. ಈ ಪ್ರಕರಣವು ರಾಜ್ಯದ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಆಡಳಿತ ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನೂ ಬಹಿರಂಗಪಡಿಸಿದೆ.
ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯದ ಪರವಾಗಿ ಹಾಜರಾದ ಹೆಚ್ಚುವರಿ ಅಡ್ವೊಕೇಟ್ ಜನರಲ್ ರಾಜ್‌ದೀಪ್ ಮಜುಂದಾರ್, ಅಭಿಷೇಕ್ ಬ್ಯಾನರ್ಜಿಗೆ ರಕ್ಷಣೆ ನೀಡುವುದನ್ನು ವಿರೋಧಿಸಿದರು. ಅವರಿಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ ಎಂದು ವಾದಿಸಿದರು.
ಆರೋಪಿತ ಸಭೆ ನಡೆದ ದಿನಾಂಕ ಮತ್ತು ನಿರ್ಣಯಕ್ಕೆ ಸಹಿ ಹಾಕಲಾದ ದಿನಾಂಕಗಳ ಕುರಿತು ಹಲವು ಅಸಂಗತತೆಗಳು ಇವೆ ಎಂದು ವಾದಿಸಿದರು. ನಿರ್ಣಯದ ದಾಖಲೆಗಳಲ್ಲಿ ಶಾಸಕರು ಮೇ 6ರಂದು ಸಹಿ ಹಾಕಿರುವುದಾಗಿ ತೋರಿಸಲಾಗಿದೆ. ಆದರೆ ಅಭಿಷೇಕ್ ಬ್ಯಾನರ್ಜಿ ಅವರು ಸ್ಪೀಕರ್‌ಗೆ ಕಳುಹಿಸಿದ ಪತ್ರವನ್ನು ಮೇ 9 ರಂದು ಕಳುಹಿಸಲಾಗಿದೆ ಎಂದು ಮಜುಂದಾರ್ ಹೇಳಿದರು.
ನಂತರ ಸ್ಪೀಕರ್ ಸಭೆಯ ನಡಾವಳಿ ಮತ್ತು ನಿರ್ಣಯವನ್ನು ಕೋರಿದಾಗ, ಟಿಎಂಸಿ ಸಂಸದರು ಮೇ 19 ರಂದು ಸಭೆ ನಡೆಸಿ ಶಾಸಕರು ದಾಖಲೆಗೆ ಸಹಿ ಹಾಕಿದ್ದಾರೆ ಎಂದು ಹೇಳಿದ್ದರು. ಶಾಸಕರು ಮೇ 6 ರಂದು ಯಾವುದೇ ಸಭೆ ನಡೆದಿಲ್ಲ. ಅವರು ಯಾವುದಕ್ಕೂ ಸಹಿ ಹಾಕಿಲ್ಲ ಎಂದು ಹೇಳಿದ್ದಾರೆ ಎಂದು ರಾಜ್ಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಟಿಎಂಸಿ ನಾಯಕರ ಪರ ಹಾಜರಾದ ಹಿರಿಯ ವಕೀಲ ಅಯನ್ ಭಟ್ಟಾಚಾರ್ಯ, ಸಿಐಡಿ ನೋಟಿಸ್‌ನ ಉದ್ದೇಶ ಬಂಧನವಲ್ಲ, ವಿಚಾರಣೆ ಎಂದು ವಾದಿಸಿದರು. ದಾಖಲೆಗಳ ದಿನಾಂಕಗಳಲ್ಲಿ ಅಥವಾ ಪ್ರಕ್ರಿಯೆಯಲ್ಲಿ ದೋಷಗಳಿರುವುದು ಮಾತ್ರದಿಂದಲೇ ಸಹಿಗಳನ್ನು ನಕಲಿ ಮಾಡಲಾಗಿದೆ ಎಂದು ತೀರ್ಮಾನಿಸಲಾಗುವುದಿಲ್ಲ. ಅದನ್ನು ಸಾಬೀತುಪಡಿಸಲು ಸ್ಪಷ್ಟ ಸಾಕ್ಷ್ಯಗಳ ಅಗತ್ಯವಿದೆ ಎಂದು ಅವರು ಹೇಳಿದರು.