ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣ: ಐವರ ಬಂಧನದ ಬಳಿಕ ಸ್ಪೋಟಕ ಸತ್ಯ ಬಹಿರಂಗ
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ತೃಣಮೂಲ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಟಿಎಂಸಿಯ ಮಾಜಿ ಶಾಸಕಿಯ ಜೊತೆ ನಂಟು ಹೊಂದಿದ್ದವರಿಂದಲೇ ನಡೆದಿದೆ ಎನ್ನುವ ಸ್ಪೋಟಕ ಸತ್ಯವೊಂದು ಈಗ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದ್ದು, ಅವರು ಯಾರು ಗೊತ್ತೇ?
ಸಂಗ್ರಹ ಚಿತ್ರ -
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (Trinamool Congress) ನಾಯಕ ಅಭಿಷೇಕ್ ಬ್ಯಾನರ್ಜಿ (Abhishek Banerjee) ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಇವರು ತೃಣಮೂಲ ಕಾಂಗ್ರೆಸ್ ನ ಮಾಜಿ ಶಾಸಕಿ (Sonarpur former MLA) ಜೊತೆ ನಂಟು ಹೊಂದಿದ್ದವರು ಎನ್ನುವ ಸ್ಪೋಟಕ ಸತ್ಯವೊಂದು ಈಗ ಬಹಿರಂಗವಾಗಿದೆ. ವಿಧಾನ ಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಉಂಟಾದ ಹಿಂಸಾಚಾರದಲ್ಲಿ ಸಂತ್ರಸ್ತರಾದವರನ್ನು ಭೇಟಿ ಮಾಡಲು ದಕ್ಷಿಣ 24 ಪರಗಣದ ಸೋನಾರ್‌ಪುರಕ್ಕೆ ತೆರಳಿದ್ದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಹಲ್ಲೆ ನಡೆಸಿದ ಆರೋಪದ ಮೇಲೆ ಐವರ ಬಂಧನದ ಬಳಿಕ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ. ಬಂಧಿತ ಐವರು ಟಿಎಂಸಿಯ ಮಾಜಿ ಶಾಸಕಿ ಲವ್ಲಿ ಮೈತ್ರಾ ಜೊತೆ ನಂಟು ಹೊಂದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದು ಈಗ ತನಿಖೆಯ ದಿಕ್ಕನ್ನೇ ಬದಲಿಸಿದೆ.
ಸೋದರಳಿಯನ ಮೇಲಿನ ದಾಳಿ ಖಂಡಿಸಿ ಮಮತಾ ಬ್ಯಾನರ್ಜಿ ಬೆಂಬಲಕ್ಕೆ ನಿಂತ ʼಇಂಡಿಯಾʼ ಒಕ್ಕೂಟ
ಬಂಧಿತರು ಯಾರು?
ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆಯು ಹಿಂಸಾಚಾರದ ಕೃತ್ಯವೇ ಅಥವಾ ಪಕ್ಷದೊಳಗಿನ ಉದ್ವಿಗ್ನತೆಯ ಸೂಚನೆಯೇ ಎಂಬುದನ್ನು ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ತಪನ್ ಮೈಟಿ (ಜಾಯ್), ಆಕಾಶ್ ಗ್ಯಾನ್ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಲ್ಲಿ ತಪನ್ ಮೈಟಿ ಮತ್ತು ನಿರ್ಮಲ್ಯ ಸೇನ್‌ಗುಪ್ತಾ ಅವರು ಟಿಎಂಸಿ ಮಾಜಿ ಶಾಸಕಿ ಲವ್ಲಿ ಮೈತ್ರಾ ಅವರ ಆಪ್ತರಾಗಿದ್ದಾರೆ. ಇನ್ನು ಕಾಜಲ್ ದಾಸ್ ಮತ್ತು ದೇಬಾಶಿಶ್ ದತ್ತಾ ಕೂಡ ಅವರೊಂದಿಗೆ ನಂಟು ಹೊಂದಿದ್ದರು.
ಬಂಧಿತರು ಯಾರು?
ಆಕಾಶ್ ಗ್ಯಾನ್
ಸೋನಾಪುರದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಆಕಾಶ್ ಗ್ಯಾನ್ ತಾಯಿ ಪಕ್ಷದೊಂದಿಗೆ ಆಕಾಶ್ ಗೆ ಸಂಬಂಧ ಹೊಂದಿದ್ದಾಗಿ ಹೇಳಿದ್ದಾರೆ. ಆತ ಚುನಾವಣೆಯ ಸಮಯದಲ್ಲಿ ಟಿಎಂಸಿ ಬೂತ್‌ಗಳಲ್ಲಿ ಕೆಲಸ ಮಾಡುತ್ತಿದ್ದನು. ಅವನಿಗೆ ಅಭಿಷೇಕ್ ಬ್ಯಾನರ್ಜಿ ಮೇಲೆ ಯಾವುದೇ ದ್ವೇಷವಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಘಟನೆಯ ಬಳಿಕ ಆಕಾಶ್ ಶುಕ್ರವಾರ ಮಧ್ಯಾಹ್ನ ಮನೆಗೆ ಬಂದಿದ್ದು, ಬಳಿಕ ಫುಟ್ಬಾಲ್ ಆಡಲು ಹತ್ತಿರದ ಮೈದಾನಕ್ಕೆ ಹೋಗಿದ್ದಾನೆ. ಅಲ್ಲಿಂದ ಆತನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಆತನ ಬಂಧನದ ಹಿಂದಿನ ನಿಖರವಾದ ಕಾರಣವನ್ನು ಕುಟುಂಬಕ್ಕೆ ತಿಳಿಸಲಾಗಿಲ್ಲ. ಆಕಾಶ್ ತಂದೆ ವ್ಯಾನ್ ರಿಕ್ಷಾ ಚಾಲಕರಾಗಿದ್ದಾರೆ. ಆಕಾಶ್ ನಿರುದ್ಯೋಗಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಜಾಯ್ ಸೇನ್‌ಗುಪ್ತಾ
ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಮತ್ತೊಬ್ಬ ಆರೋಪಿ ಜಾಯ್ ಸೇನ್‌ಗುಪ್ತಾ, ತೃಣಮೂಲ ಕಾಂಗ್ರೆಸ್ ಜೊತೆಗೆ ದೀರ್ಘಕಾಲದ ಸಂಬಂಧ ಹೊಂದಿದ್ದು, ಸ್ಥಳೀಯ ನಾಯಕನಾಗಿ ಗುರುತಿಸಿಕೊಂಡಿದ್ದಾನೆ. ಅಭಿಷೇಕ್ ಮೇಲಿನ ಹಲ್ಲೆಯಲ್ಲಿ ಆತನ ಪಾತ್ರವನ್ನು ಕುಟುಂಬ ನಿರಾಕರಿಸಿದೆ. ಉದ್ವಿಗ್ನ ಪರಿಸ್ಥಿತಿಯ ಕಾರಣದಿಂದ ಇಲ್ಲಿಗೆ ಬರಬೇಡಿ ಎಂದು ಅಭಿಷೇಕ್ ಗೆ ಸೇನ್‌ಗುಪ್ತಾ ಸಲಹೆ ನೀಡಿದ್ದ ಎನ್ನಲಾಗಿದೆ.
ಅಭಿಷೇಕ್ ಬ್ಯಾನರ್ಜಿ ನಂತರ ಮತ್ತೋರ್ವ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ
ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆಗೆ ಸಂಬಂಧಿಸಿ ಬಂಧಿತರಾಗಿರುವವರ ಹಿನ್ನಲೆ ಮತ್ತು ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ದಾಳಿಗೆ ಬಿಜೆಪಿ ಕಾರಣ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಬಿಜೆಪಿ ಇದನ್ನು ತಿರಸ್ಕರಿಸಿದೆ. ದಾಳಿಯ ಬಳಿಕ ಅಭಿಷೇಕ್ ಬ್ಯಾನರ್ಜಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗದಂತೆ ಮಾಡಲಾಗುತ್ತಿದೆ ಎಂಬುದಾಗಿ ಕೂಡ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.