ನವದೆಹಲಿ, ಮೇ 28: ಸೌದಿ ಜೈಲಿನಲ್ಲಿ 20 ವರ್ಷಗಳನ್ನು ಕಳೆದ ನಂತರ ಕೇರಳಂನ ಕೋಝಿಕ್ಕೋಡ್ ನಿವಾಸಿ ಅಬ್ದುಲ್ ರಹೀಮ್ (Abdul Raheem) ಕೊನೆಗೂ ಭಾರತಕ್ಕೆ ಮರಳಿದ್ದಾರೆ. ಸೌದಿ ಅರೇಬಿಯಾದಲ್ಲಿ (Saudi Arabia) ಭಾರತದ ಅಧಿಕೃತ ಎಕ್ಸ್ ಖಾತೆಯು ಅವರ ವಿಮಾನ ಹಾರಾಟವನ್ನು ದೃಢಪಡಿಸಿತು. ಈ ಮೂಲಕ ಕಳೆದ 2 ದಶಕಗಳಿಂದ ಕಾದು ಕುಳಿತಿದ್ದ ಅವರ ಕುಟುಂಬಸ್ಥರಿಗೆ ನಿರಾಳ ತಂದಿದೆ. ಸೌದಿಯಲ್ಲಿ ಅಪ್ರಾಪ್ತ ವಯಸ್ಕನ ಕೊಲೆ ಆರೋಪದ ಮೇಲೆ ರಹೀಮ್, 2006ರಿಂದ ಜೈಲಿನಲ್ಲಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.
ಅಬ್ದುಲ್ ರಹೀಮ್‌ನನ್ನು ಇದರಿಂದ ಹೇಗಾದರೂ ಪಾರು ಮಾಡಬೇಕೆಂದು ಕುಟುಂಬ ಶತಪ್ರಯತ್ನ ನಡೆಸಿತ್ತು. ಮೃತನ ಕುಟುಂಬಕ್ಕೆ 1.5 ಮಿಲಿಯನ್ ಸೌದಿ ರಿಯಾಲ್‌ಗಳನ್ನು (ಸುಮಾರು 34 ಕೋಟಿ ರೂ.) ಹಣವನ್ನು ಪರಿಹಾರವಾಗಿ ನೀಡಲಾಗಿತ್ತು. ಇದರಿಂದ 2024 ರಲ್ಲಿ ಅವರ ಜೀವವನ್ನು ಮರಣದಂಡನೆಯಿಂದ ಉಳಿಸಿತು. ಇದನ್ನು ಇಸ್ಲಾಮಿಕ್ ಕಾನೂನಿನಲ್ಲಿ ದಿಯಾ ಎಂದು ಕರೆಯಲಾಗುತ್ತದೆ. ಕೊಲೆಯಂತಹ ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಪಾವತಿಸುವ ಆರ್ಥಿಕ ಪರಿಹಾರ ಇದಾಗಿದೆ.
ಕೆಲವು ವರ್ಷಗಳ ಕಾನೂನು ಮತ್ತು ರಾಜತಾಂತ್ರಿಕ ಪ್ರಯತ್ನಗಳ ನಂತರ, ಸೌದಿ ಅಧಿಕಾರಿಗಳು ಅವರಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿದರು. ಅವರು ಜೈಲಿನಲ್ಲಿದ್ದಾಗ, ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ಅವರ ಪ್ರಕರಣವನ್ನು ಮತ್ತು ಅವರ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಲೇ ಇತ್ತು.
ಇಲ್ಲಿದೆ ಪೋಸ್ಟ್:
ಜೊತೆಗೆ, ಅಬ್ದುಲ್ ರಹೀಮ್ ಅವರ ಕಾನೂನು ಹೋರಾಟವನ್ನು ಬೆಂಬಲಿಸಲು ಕ್ರೌಡ್‌ಫಂಡಿಂಗ್ ಡ್ರೈವ್ ಮೂಲಕ ಹಣವನ್ನು ಸಂಗ್ರಹಿಸುವ ಮೂಲಕ ಭಾರತೀಯ ಸಮುದಾಯವು ದೊಡ್ಡ ಪಾತ್ರವನ್ನು ವಹಿಸಿತು.
ಭಯೋತ್ಪಾದಕ ಸಂಘಟನೆಗೆ ಯುವಕರ ನೇಮಕಾತಿ; ಅಪರಾಧಿ ಹಮ್ರಾಜ್ ವರ್ಶಿದ್ ಶೇಖ್‌ಗೆ 7 ವರ್ಷ ಜೈಲು ಶಿಕ್ಷೆ
“ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದ ಅಬ್ದುಲ್ ರಹೀಂ ಅವರನ್ನು 20 ವರ್ಷಗಳ ಜೈಲುವಾಸದ ನಂತರ ಕ್ಷಮಿಸಿ ಬಿಡುಗಡೆ ಮಾಡಲಾಗಿದೆ. ಈ ಅವಧಿಯಲ್ಲಿ, ರಾಯಭಾರ ಕಚೇರಿಯು ಸೌದಿ ಅಧಿಕಾರಿಗಳೊಂದಿಗೆ ಅವರ ಪ್ರಕರಣವನ್ನು ನಿರಂತರವಾಗಿ ಮುಂದುವರಿಸಿತು. ಅವರ ಯೋಗಕ್ಷೇಮವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿತು. ಭಾರತೀಯ ಸಮುದಾಯದ ಸದಸ್ಯರು ಕ್ರೌಡ್‌ಫಂಡಿಂಗ್ ಅಭಿಯಾನದ ಮೂಲಕ ದೊಡ್ಡ ಬೆಂಬಲವನ್ನು ನೀಡಿದರು” ಎಂದು ಸೌದಿ ಅರೇಬಿಯಾದಲ್ಲಿ ಭಾರತ ಎಂಬ ಎಕ್ಸ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
“ಸಂಬಂಧಿತ ಸೌದಿ ಅಧಿಕಾರಿಗಳ ಸಹಕಾರಕ್ಕೆ ಹಾಗೂ ಅಚಲ ಬೆಂಬಲ, ಐಕ್ಯತೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಮೇಲಿನ ವಿಶ್ವಾಸ ತೋರಿದ ಭಾರತೀಯ ಸಮುದಾಯಕ್ಕೆ ನಾವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ” ಎಂದು ರಾಯಭಾರ ಕಚೇರಿ ತಿಳಿಸಿದೆ.
ಘಟನೆ ಏನಾಯಿತು?
2006 ರಲ್ಲಿ ಸೌದಿ ಅರೇಬಿಯಾ ತಲುಪುವ ಮುನ್ನ ರಹೀಂ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅವರು ಗಲ್ಫ್‌ಗೆ ತೆರಳಿದ್ದರು. ಅದೇ ವರ್ಷ, ಅವರಿಗೆ 15 ವರ್ಷದ ದೈಹಿಕವಾಗಿ ಅಸ್ವಸ್ಥ ಬಾಲಕನ ವೈಯಕ್ತಿಕ ಚಾಲಕ-ಕಮ್-ಕೇರ್‌ಟೇಕರ್ ಕೆಲಸ ಸಿಕ್ಕಿತು. ಆ ಬಾಲಕನಿಗೆ ಕಾಯಿಲೆಯೂ ಇತ್ತು. ತನ್ನ ದೇಹಕ್ಕೆ ಸಂಪರ್ಕಗೊಂಡಿರುವ ಬಾಹ್ಯ ಸಾಧನದ ಮೂಲಕ ಅವನು ಉಸಿರಾಡುತ್ತಿದ್ದ.
ಒಂದು ದಿನ ಕಾರು ಚಾಲನೆ ಮಾಡುವಾಗ ಬಾಲಕ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಆತನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾಗ, ಅವರ ಕೈ ಆಕಸ್ಮಿಕವಾಗಿ ಬಾಲಕನ ಬಾಹ್ಯ ವೈದ್ಯಕೀಯ ಸಾಧನವನ್ನು ಸ್ಪರ್ಶಿಸಿತು. ಸಂಪರ್ಕ ಕಡಿತಗೊಂಡು, ಬಾಲಕ ಮೃತಪಟ್ಟ ಎಂದು ರಹೀಂ ಹೇಳಿದ್ದಾರೆ.
ಸೌದಿ ಅರೇಬಿಯಾದ ನ್ಯಾಯಾಲಯವೊಂದು ರಹೀಂಗೆ ಕೊಲೆ ಶಿಕ್ಷೆ ವಿಧಿಸಿತು. ಮೇಲ್ಮನವಿ ನ್ಯಾಯಾಲಯವೂ 2022 ರಲ್ಲಿ ಈ ತೀರ್ಪನ್ನು ಎತ್ತಿಹಿಡಿಯಿತು. ನಂತರ ಈ ನಿರ್ಧಾರವನ್ನು ದೇಶದ ಸುಪ್ರೀಂ ಕೋರ್ಟ್ ದೃಢಪಡಿಸಿತು. ಕೊನೆಗೆ ಮೃತ ಬಾಲಕನ ಕುಟುಂಬದೊಂದಿಗೆ ಮಾತುಕತೆ ನಡೆಸಿದ ಪರಿಹಾರದ ಮೊತ್ತಕ್ಕೆ ಅವರು ಒಪ್ಪಿದರು.