ಭಯೋತ್ಪಾದಕ ಸಂಘಟನೆಗೆ ಯುವಕರ ನೇಮಕಾತಿ; ಅಪರಾಧಿ ಹಮ್ರಾಜ್ ವರ್ಶಿದ್ ಶೇಖ್‌ಗೆ 7 ವರ್ಷ ಜೈಲು ಶಿಕ್ಷೆ
ಮಹಾರಾಷ್ಟ್ರದ ಹಮ್ರಾಜ್ ವರ್ಶಿದ್ ಶೇಖ್ ಆನ್‌ಲೈನ್ ಮೂಲಕ ಯುವಕರನ್ನು ಸೆಳೆದು ಭಯೋತ್ಪಾದಕ ಸಂಘಟನೆಗೆ ನೇಮಕ ಮಾಡುತ್ತಿದ್ದ. ನಿಷೇಧಿತ ತಾಲಿಬಾನ್ ಮತ್ತು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ ಭಯೋತ್ಪಾದಕ ಸಂಘಟನೆಗೆ ಯುವಕರನ್ನು ನೇಮಿಸಲು ಯತ್ನಿಸಿರುವುದು ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಈತನಿಗೆ ಶಿಕ್ಷೆ ಪ್ರಕಟಿಸಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಭಯೋತ್ಪಾದಕ ಸಂಘಟನೆಗೆ ಯುವಕರ ನೇಮಕ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಹಮ್ರಾಜ್ ವರ್ಶಿದ್ ಶೇಖ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ಹಾಗೂ 63,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಮಹಾರಾಷ್ಟ್ರದ ಹಮ್ರಾಜ್ ವರ್ಶಿದ್ ಶೇಖ್ ಆನ್‌ಲೈನ್ ಮೂಲಕ ಯುವಕರನ್ನು ಸೆಳೆದು ಭಯೋತ್ಪಾದಕ ಸಂಘಟನೆಗೆ ನೇಮಕ ಮಾಡುತ್ತಿದ್ದ. ಶೇಖ್, ನಿಷೇಧಿತ ತಾಲಿಬಾನ್ ಮತ್ತು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಭಯೋತ್ಪಾದಕ ಸಂಘಟನೆಗೆ ಯುವಕರನ್ನು ನೇಮಿಸಲು ಯತ್ನಿಸಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ.
2019 ರಿಂದ 2022ರವರೆಗೂ ಸೌದಿ ಅರೇಬಿಯಾದಲ್ಲಿದ್ದ ಹಮ್ರಾಜ್, ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ ಮೂಲದ ಕೆಲವರ ಸಂಪರ್ಕದಿಂದ ತಾಲಿಬಾನ್ ಮತ್ತು ಟಿಟಿಪಿ ಸಿದ್ಧಾಂತದಿಂದ ಪ್ರಚೋದನೆಗೊಂಡಿದ್ದ. ಈತನ ವಿಚಾರಣೆಯಲ್ಲಿ ಉಗ್ರ ಸಂಘಟನೆಗಳ ಹಂಝಲಾ ಎಂಬ ಆನ್‌ಲೈನ್ ಹ್ಯಾಂಡ್ಲರ್ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಈ ಹಂಝಲಾ ಎಂಬಾತ ಕಾಶ್ಮೀರ ಪೇಜ್ ಎಂಬ ಇನ್‌ಸ್ಟಾಗ್ರಾಂ ಖಾತೆ ಮೂಲಕ ಯುವಕರನ್ನು ಪ್ರಚೋದಿಸಿ ಮೂಲಭೂತವಾದಿಗಳನ್ನಾಗಿ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಭಾರತಕ್ಕೆ ವಾಪಸ್ ಬಂದ ಬಳಿಕ ಹಮ್ರಾಜ್, ತನ್ನ ಸ್ನೇಹಿತ ಹಾಗೂ ಮೊಹಮ್ಮದ್ ಆರೀಫ್ ಜೊತೆ ಸೇರಿ ತಾಲಿಬಾನ್ ಮತ್ತು ಟಿಟಿಪಿ ಉಗ್ರ ಸಂಘಟನೆ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದ. ಆರ್ಥಿಕ ಮತ್ತು ಇತರೆ ಸಂಕಷ್ಟದಲ್ಲಿ ಸಿಲುಕಿದ್ದ ಯುವಕರನ್ನು ಸಂಘಟನೆ ಪರವಾಗಿ ಕೆಲಸ ಮಾಡಲು ಪ್ರಚೋದಿಸಿ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದರು. ಇಬ್ಬರು ಭಾರತದ ವಿರುದ್ಧ ಜಿಹಾದ್ ಯುದ್ಧ ನಡೆಸಲು ಟಿಟಿಪಿ ಸೇರುವ ಉದ್ದೇಶದಿಂದ ತಮ್ಮದೇ ತಂಡ ಕಟ್ಟುವ ಸಿದ್ಧತೆಯಲ್ಲಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್‌ಐಎ ತಿಳಿಸಿದೆ.
Shivam Associates Scam: ಬಹುಕೋಟಿ ವಂಚನೆ ಆರೋಪ; ಶಿವಾನಂದ ನೀಲಣ್ಣವರ್ ವಿರುದ್ಧ ಕಾಗವಾಡದಲ್ಲಿ ಕೇಸ್ ದಾಖಲು
ವಿಚಾರಣೆ ವೇಳೆ ಶೇಖ್ ತಪ್ಪೊಪ್ಪಿಗೆ ಮಾಡಿಕೊಂಡಿದ್ದ. ಈ ಹಿನ್ನೆಲೆ ಅಪರಾಧಿಗೆ ಎನ್‌ಐಎ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಹಾಗೂ 63 ಸಾವಿರ ದಂಡ ವಿಧಿಸಿ ಆದೇಶಿಸಿದೆ.