ಬಿಹಾರದಲ್ಲಿ ಅಧಿಕಾರಕ್ಕೆ ಬರಲು ಎನ್‌ಡಿಎ ಅಡ್ಡ ದಾರಿ ಹಿಡಿಯಿತಾ? ವಿಶ್ವ ಬ್ಯಾಂಕ್‌ನ 14,000 ಕೋಟಿ ರೂ. ದುರ್ಬಳಕೆ ಆರೋಪ
Pavan Verma: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಂದಿದ್ದು ಎನ್‌ಡಿಎ 202 ಕ್ಷೇತ್ರಗಳಲ್ಲಿ ಬರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಮರಳಿದೆ. ಈ ಮಧ್ಯೆ ಕಾಂಗ್ರೆಸ್ ವೋಟ್ ಚೋರಿ ಆರೋಪ ಮಾಡಿದೆ. ಇತ್ತ ಜನ ಸುರಾಜ್ ಪಾರ್ಟಿ ವಿಶ್ವ ಬ್ಯಾಂಕ್ ಅನುದಾನವನ್ನು ಕೇಂದ್ರ ಬಳಸಿದೆ ಎಂದು ದೂರಿದೆ.
ಕೇಂದ್ರ ಸರ್ಕಾರದಿಂದ 14,000 ಕೋಟಿ ರೂ. ದುರ್ಬಳಕೆ ಆರೋಪ ಹೊರಿಸಿದ ಜನ ಸುರಾಜ್ ಪಾರ್ಟಿ (ಸಂಗ್ರಹ ಚಿತ್ರ) -
ಪಾಟ್ನಾ, ನ. 16: ಬಿಹಾರ ವಿಧಾನಸಭಾ ಚುನಾವಣೆಯ (Bihar Assembly Election Results 2025) ಫಲಿತಾಂಶ ಹೊರ ಬಂದಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. 243 ಕ್ಷೇತ್ರಗಳ ಪೈಕಿ ಎನ್‌ಡಿಎ 202 ಕಡೆಗಳಲ್ಲಿ ಜಯ ಗಳಿಸಿ ಇತಿಹಾಸ ಬರೆದಿದೆ. ಅಚ್ಚರಿ ಎಂಬಂತೆ ಭಾರಿ ನಿರೀಕ್ಷೆ ಮೂಡಿಸಿದ್ದ, ರಾಜಕೀಯ ನಿಪುಣ ಎಂದೇ ಜನಪ್ರಿಯರಾಗಿರುವ ಪ್ರಶಾಂತ್ ಕಿಶೋರ್ (Prashant Kishore) ಅವರ ಜನ ಸುರಾಜ್ ಪಾರ್ಟಿ (Jan Suraaj Party) ಒಂದೇ ಒಂದು ಸೀಟ್ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಪ್ರಶಾಂತ್ ಕಿಶೋರ್ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ 240 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಆದರೆ ಒಂದು ಕಡೆಯೂ ಗೆಲುವು ಸಾಧಿಸಿಲ್ಲ. ಇದೀಗ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾದ ಪವನ್ ವರ್ಮ (Pavan Verma) ಕೇಂದ್ರ ಸರ್ಕಾರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಿಶ್ವ ಬ್ಯಾಂಕ್‌ನ 14,000 ಕೋಟಿ ರೂ. ಅನುದಾನವನ್ನು ಬಿಹಾರ ಚುನಾವಣೆಗೆ ಬಳಸಲಾಗಿದೆ ಎಂದಿದ್ದಾರೆ.
ವಿಶ್ವ ಬ್ಯಾಂಕ್‌ನಿಂದ ರಿಲೀಸ್ ಆದ ಅನುದಾನವನ್ನು ಬಿಜೆಪಿ ನೇತೃತ್ವದ ಕೆಂದ್ರ ಸರ್ಕಾರ ಮಹಿಳೆಯರಿಗೆ ಹಂಚಿದೆ ಎಂದು ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್‌ನ ವೋಟ್ ಚೋರಿ ಆರೋಪಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದೆ.
ಬಿಹಾರ ಚುನಾವಣೆ ಕುರಿತು ಜನ ಸುರಾಜ್ ಪಾರ್ಟಿಯ ಪವನ್ ವರ್ಮ ಹೇಳಿಕೆ:
#WATCH | Delhi | Jan Suraaj spokesperson Pavan Verma says, "The Prime Minister himself criticised the 'Rewari'... And now what happened in Bihar?... Currently, Bihar's public debt is approximately Rs 4,06,000 crores. Its daily interest is Rs 63 crores... We have information,… pic.twitter.com/kcqOno1ZTE
— ANI (@ANI) November 16, 2025
ಪವನ್ ವರ್ಮ ಹೇಳಿದ್ದೇನು?
ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ 1.25 ಕೋಟಿ ಮಹಿಳಾ ಮತದಾರರ ಖಾತೆಗೆ 10,000 ರೂ.ಗಳನ್ನು ವರ್ಗಾಯಿಸಿದ ಎನ್‌ಡಿಎಯ ಭರವಸೆಯನ್ನು ಉಲ್ಲೇಖಿಸಿ ಈ ಆರೋಪ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಅವರು, ʼʼರಾಜ್ಯದ ಮಹಿಳೆಯರಿಗೆ ನೀಡಲಾಗುವ 10,000 ರೂ.ಗೆ ವಿಶ್ವ ಬ್ಯಾಂಕ್‌ನಿಂದ ಬೇರೆ ಯಾವುದೋ ಯೋಜನೆಗಾಗಿ ಬಂದ 21,000 ಕೋಟಿ ರೂ. ಬಳಸಲಾಗಿದೆ ಎಂಬ ಮಾಹಿತಿ ಇದೆ. ವಿಶ್ವ ಬ್ಯಾಂಕ್‌ನಿಂದ ಬಂದ 14,000 ಕೋಟಿ ರೂ.ಗಳನ್ನು ನೀತಿ ಸಂಹಿತೆ ಜಾರಿಗೆ ಮುನ್ನ ಹೊರತೆಗೆದು ರಾಜ್ಯದ 1.25 ಕೋಟಿ ಮಹಿಳೆಯರಿಗೆ ವಿತರಿಸಲಾಗಿದೆ" ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಕಾಂಗ್ರೆಸ್ ಎಂದರೆ ಎಂಎಂಸಿ-ಮುಸ್ಲಿಂ ಲೀಗ್ ಮಾವೋಯಿಸ್ಟ್ ಕಾಂಗ್ರೆಸ್: ಬಿಹಾರ ವಿಧಾನಸಭೆ ಫಲಿತಾಂಶ ಬೆನ್ನಲ್ಲೇ ಮೋದಿ ಹೊಸ ವ್ಯಾಖ್ಯಾನ
"ಬಿಹಾರದಲ್ಲಿ ಸಾರ್ವಜನಿಕ ಸಾಲವು ಪ್ರಸ್ತುತ 4,06,000 ಕೋಟಿ ರೂ.ಗೆ ತಲುಪಿದೆ. ದಿನಕ್ಕೆ ಬಡ್ಡಿ 63 ಕೋಟಿ ರೂ. ಪಾವತಿಸಬೇಕಾಗಿದೆ. ಹೀಗಾಗಿ ಖಜಾನೆ ಖಾಲಿಯಾಗಿದೆ. ರಾಜ್ಯದ ಮಹಿಳೆಯರಿಗೆ ನೀಡಲಾಗುವ 10,000 ರೂ.ಗಳನ್ನು ವಿಶ್ವ ಬ್ಯಾಂಕ್‌ನಿಂದ ಬೇರೆ ಯಾವುದೋ ಯೋಜನೆಗಾಗಿ ಬಂದ 21,000 ಕೋಟಿ ರೂ.ಯಿಂದ ತೆಗೆಯಲಾಗಿದೆ" ಎಂದಿದ್ದಾರೆ.
"ನಾನು ಹೇಳಿದಂತೆ ಇದು ನಮಗೆ ದೊರೆತ ಮಾಹಿತಿ. ಇದು ತಪ್ಪಾಗಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ. ಆದರೆ ಅದು ನಿಜವಾಗಿದ್ದರೆ ಖಂಡನಾರ್ಹ. ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆಗಳಿವೆʼʼ ಎಂದು ಹೇಳಿದ್ದಾರೆ.
“ಬಿಹಾರದಲ್ಲಿ 4 ಕೋಟಿ ಮಹಿಳಾ ಮತದಾರರಿದ್ದಾರೆ ಮತ್ತು 2.5 ಕೋಟಿ ಜನರಿಗೆ ಈ ಮೊತ್ತ ಇನ್ನೂ ಬಂದಿಲ್ಲ. ಎನ್‌ಡಿಎ ಅಧಿಕಾರಕ್ಕೆ ಬರದಿದ್ದರೆ ನಮಗೆ ಲಾಭ ಸಿಗುವುದಿಲ್ಲ ಎಂದು ಉಳಿದ ಮಹಿಳೆಯರು ಭಾವಿಸಿದ್ದರು. ಹೀಗಾಗಿ ಅವರು ಎನ್‌ಡಿಎ ಪರವಾಗಿ ಮತ ಚಲಾಯಿಸಿದ್ದರುʼʼ ಎಂದು ತಿಳಿಸಿದ್ದಾರೆ. ಸದ್ಯ ಈ ಆರೋಪ ರಾಜಕೀಯವಾಗಿ ದೊಡ್ಡ ಕೋಲಾಹಲ ಉಂಟು ಮಾಡಿದೆ.