ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sabarimala temple: ಶಬರಿಮಲೆ ದೇವಸ್ಥಾನ ಚಿನ್ನ ಕಳವು ವಿವಾದ- ವಿಜಯ್ ಮಲ್ಯ ಹೆಸರು ಕೇಳಿ ಬಂದಿದ್ದು ಏಕೆ?

Sabarimala temple gold theft controversy: ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನ ವಿವಾದವು ಕೇರಳದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದರಲ್ಲಿ ಖ್ಯಾತ ಉದ್ಯಮಿ ವಿಜಯ್ ಮಲ್ಯ ಹೆಸರು ಕೂಡ ಕೇಳಿ ಬಂದಿದೆ. ಅವರಿಗೂ ಇದಕ್ಕೂ ಏನು ಸಂಬಂಧ, ಇದರ ತನಿಖೆಗೆ ಕೇರಳ ಹೈಕೋರ್ಟ್ ವಿಶೇಷ ತನಿಖಾ ತಂಡ ರಚಿಸಲು ಕಾರಣ ಏನು ಎಂಬ ಕುರಿತು ಇಲ್ಲಿದೆ ಮಾಹಿತಿ.

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ( Sabarimala Ayyappa temple ) ದ್ವಾರಪಾಲಕ ವಿಗ್ರಹಗಳ ಚಿನ್ನದ ಲೇಪನದಲ್ಲಿ ನಡೆದಿರುವ ಅಕ್ರಮಗಳ (Sabarimala temple gold theft controversy) ಬಗ್ಗೆ ವಿಜಿಲೆನ್ಸ್ ತನಿಖೆ ನಡೆದ ಬಳಿಕ ಇದು ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಈ ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಕೇಂದ್ರೀಯ ಬ್ಯೂರೋ ತನಿಖೆಗೆ ಒತ್ತಾಯಗಳು ಕೇಳಿ ಬಂದಿತ್ತು. ಭಾರಿ ಪ್ರತಿಭಟನೆಗಳೂ ನಡೆದಿದ್ದು, ಬಳಿಕ ಇದು ತಿರುವಾಂಕೂರು ದೇವಸ್ವಂ ಮಂಡಳಿ (TDB), ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಇದೀಗ ಈ ನಿಟ್ಟಿನಲ್ಲಿ ಮಧ್ಯಪ್ರವೇಶಿಸಿರುವ ಕೇರಳ ಹೈಕೋರ್ಟ್ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆಗೆ ಆದೇಶಿಸಿದೆ.

ಶಬರಿಮಲೆ ದೇಗುಲಕ್ಕೆ ಕೈಗಾರಿಕೋದ್ಯಮಿ ವಿಜಯ್ ಮಲ್ಯ ಅವರು 1998ರಲ್ಲಿ ದಾನವಾಗಿ ನೀಡಿದ್ದ 30.3 ಕಿಲೋಗ್ರಾಂಗಳಷ್ಟು ಚಿನ್ನ ನಾಪತ್ತೆ ಪ್ರಕರಣ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಹಗರಣವಾಗಿ ಗುರುತಿಸಲ್ಪಟ್ಟಿತ್ತು. ವಿಜಯ್ ಮಲ್ಯ ಅವರು ದೇವಾಲಯದ ಗರ್ಭಗುಡಿ ಮತ್ತು ಮರದ ಕೆತ್ತನೆಗಳಿಗಾಗಿ 30.3 ಕೆಜಿ ಚಿನ್ನ ಮತ್ತು 1,900 ಕೆಜಿ ತಾಮ್ರವನ್ನು ದಾನವಾಗಿ ನೀಡಿದ್ದು, ಕೇರಳ ಹೈಕೋರ್ಟ್ ಪರಿಶೀಲನೆ ನಡೆಸಿದ ವೇಳೆ ಇದರಲ್ಲಿ ಭಾರಿ ಪ್ರಮಾಣದಲ್ಲಿ ನಷ್ಟವಾಗಿರುವುದು ಕಂಡು ಬಂದಿದೆ. ಇದು ತಿರುವಾಂಕೂರು ದೇವಸ್ವಂ ಮಂಡಳಿಯ ಬಗ್ಗೆ ಅನುಮಾನಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: Road Accident: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ; 9 ವರ್ಷದ ಬಾಲಕಿ ಸಾವು

ಮಂಡಳಿ ಹೇಳಿದ್ದೇನು?

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಡಿಬಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್, ಒಂಬತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದು ನಡೆದಿದ್ದು, ಇದಕ್ಕೆ ಸಂಬಂಧಿಸಿ ಈಗಾಗಲೇ ಉಪ ದೇವಸ್ವಂ ಆಯುಕ್ತ ಬಿ. ಮುರಾರಿ ಬಾಬು ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಉಳಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮುಂದಿನ 14 ರಂದು ನಡೆಯುವ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ಆರೋಪಿಗಳ ಪಟ್ಟಿಯಲ್ಲಿ ಟಿಡಿಬಿ ಕಾರ್ಯದರ್ಶಿ ಜಯಶ್ರೀ, ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್, ಆಡಳಿತ ಅಧಿಕಾರಿ ಶ್ರೀಕುಮಾರ್ ಮತ್ತು ಮಾಜಿ ತಿರುವಾಭರಣ ಆಯುಕ್ತ ಕೆ.ಎಸ್. ಬೈಜು ಹೆಸರುಗಳಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಪ್ರಶಾಂತ್ ತಿಳಿಸಿದ್ದಾರೆ. ಈ ಘಟನೆ 2019ರಲ್ಲಿ ನಡೆದಿದ್ದು, ಪ್ರಸ್ತುತ ಮಂಡಳಿಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇರಳ ಸರ್ಕಾರ ಹೇಳುವುದೇನು?

ನ್ಯಾಯಾಂಗ ತನಿಖೆ ಬಗ್ಗೆ ವಿಶ್ವಾಸವಿದೆ. ಅಪರಾಧ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ದೇವಸ್ವಂ ಸಚಿವ ವಿ.ಎನ್. ವಾಸವನ್ ಹೇಳಿದ್ದಾರೆ. ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ತಿಳಿಸಿದ್ದಾರೆ.

ಸಿಬಿಐ ತನಿಖೆಗೆ ಕಾಂಗ್ರೆಸ್ ಒತ್ತಾಯ

ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಘಟನೆಯ ಕುರಿತು ಸಿಬಿಐ ತನಿಖೆ ನಡೆಸುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಒತ್ತಾಯಿಸಿದ್ದಾರೆ. ಶಬರಿಮಲೆ ಭಾರತದ ಪವಿತ್ರ ದೇವಾಲಯ. ಇಲ್ಲಿ ನಡೆದಿರುವ ಅಕ್ರಮವನ್ನು ಮರೆಮಾಚಲು ಕೇರಳ ಸರ್ಕಾರ ಮತ್ತು ದೇವಸ್ವಂ ಮಂಡಳಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಬಿಜೆಪಿ ವಾಗ್ದಾಳಿ

ಪ್ರಕರಣಕ್ಕೆ ಸಂಬಂಧಿಸಿ ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಬಿಜೆಪಿ ಸಚಿವ ವಿ. ಮುರಳೀಧರನ್, ಆಡಳಿತಾರೂಢ ಎಡಪಂಥೀಯ ಸರ್ಕಾರದ ಮೇಲೆ ಬಲವಾದ ದಾಳಿಯಾಗಿದೆ. ಇದು ಹಗಲು ದರೋಡೆ. ದೇವಸ್ವಂ ಮಂಡಳಿ ಅಥವಾ ಸರ್ಕಾರವನ್ನು ಹೈಕೋರ್ಟ್ ನಂಬುವುದಿಲ್ಲ ಎಂದು ಹೇಳಿದ್ದಾರೆ. ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಪವಿತ್ರ ದೇವಾಲಯಗಳ ಲೂಟಿ 10- 20 ವರ್ಷಗಳಿಂದ ನಡೆಯುತ್ತಿದೆ. ಶಬರಿಮಲೆ ಮಾತ್ರವಲ್ಲ ಕೇರಳದ ಹಲವು ದೇವಾಲಯಗಳಲ್ಲೂ ಲೂಟಿ ಮಾಡಲಾಗಿದೆ. ಇದರ ಹಿಂದೆ ಪ್ರಭಾವಿ ವ್ಯಕ್ತಿಗಳಿದ್ದಾರೆ ಎಂದು ಆರೋಪಿಸಿದರು.

ನ್ಯಾಯಾಲಯ ತನಿಖೆಗೆ ಆದೇಶಿಸಿರುವುದನ್ನು ಸ್ವಾಗತಿಸಿರುವ ದೇವಾಲಯದ ಪ್ರಧಾನ ಅರ್ಚಕ ತಂತ್ರಿ ಕಂದರರು ರಾಜೀವ ಅವರು, ಭಕ್ತರಿಗೆ ಇದು ತುಂಬಾ ನೋವಿನ ಸಂಗತಿ. ತನಿಖೆ ನಡೆಯಲಿ. ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ಟಿಡಿಬಿಯ ಮಾಜಿ ಅಧ್ಯಕ್ಷ ಎ ಪದ್ಮಕುಮಾರ್ ಅವರು ಇದು ಗಂಭೀರ ಆರೋಪ. ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.

ಹೈಕೋರ್ಟ್ ಹೇಳಿದ್ದೇನು?

ಶಬರಿಮಲೆ ಚಿನ್ನ ಕಳ್ಳತನಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಆದೇಶಿಸಿರುವ ಕೇರಳ ಹೈಕೋರ್ಟ್ ಆರು ವಾರಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದೆ. ತನಿಖೆಯನ್ನು ಗೌಪ್ಯವಾಗಿ ನಡೆಸಿ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿದೆ.

ತನಿಖೆ ಮುಖ್ಯ ಏಕೆ?

ವರ್ಷದಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುವ ದೇವಾಲಯ ಇದಾಗಿದ್ದು, ಇದು ಹೊಣೆಗಾರಿಕೆ, ನಂಬಿಕೆಯ ಪ್ರಶ್ನೆಯಾಗಿದೆ. ಮತ್ತು ರಾಜಕೀಯ ಸಮಗ್ರತೆಯ ಪರೀಕ್ಷೆಯಾಗಿದೆ. ಈ ನಡುವೆಯೇ ವಾರ್ಷಿಕ ತೀರ್ಥಯಾತ್ರೆ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ಎಸ್ ಐಟಿ ತನಿಖೆ ವರದಿ ಹಾಗೂ ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ವಿದ್ಯಾ ಇರ್ವತ್ತೂರು

View all posts by this author