ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Safest City in India: ಮಹಿಳೆಯರಿಗೆ ಭಾರತದ ಸುರಕ್ಷಿತ ಮತ್ತು ಅಸುರಕ್ಷಿತ ನಗರಗಳು ಯಾವುವು ಗೊತ್ತೇ?

ಭಾರತದಲ್ಲಿ ಮಹಿಳೆಯರಿಗೆ ಅತ್ಯಂತ ಸುರಕ್ಷಿತವಾದ ನಗರಗಳು ಮತ್ತು ಅಸುರಕ್ಷಿತ ನಗರಗಳು ಯಾವುದು ಎನ್ನುವ ಕುರಿತು ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಮಹಿಳಾ ಸುರಕ್ಷತೆಯ ಸೂಚ್ಯಂಕ ಬಹಿರಂಗಪಡಿಸಿದೆ. ಈ ಅಧ್ಯಯನವು ಮಹಿಳೆಯರ ಸುರಕ್ಷತೆಯ ಕುರಿತಾದ ಸಾಕಷ್ಟು ವಿಚಾರಗಳನ್ನು ಬೆಳಕಿಗೆ ತಂದಿದೆ. ಅವುಗಳು ಇಂತಿವೆ.

ಭಾರತದ ಈ ನಗರಗಳು ಮಹಿಳೆಯರಿಗೆ ಮೋಸ್ಟ್‌ ಸೇಫ್‌!

-

ನವದೆಹಲಿ: ಕಾನೂನು ಎಷ್ಟೇ ಕಠಿಣವಾಗಿದ್ದರೂ ದೇಶದ ಕೆಲವೆಡೆ ಮಹಿಳೆಯರ ಸುರಕ್ಷತೆ (safest city for women) ಕೆಲವೆಡೆ ಸವಾಲಾಗಿ ಪರಿಣಮಿಸಿದೆ. ಯಾಕೆಂದರೆ ಅಧ್ಯಯನವೊಂದರ ಪ್ರಕಾರ ನಾಲ್ಕು ಮಹಿಳೆಯರಲ್ಲಿ ಒಬ್ಬರು ಮಾತ್ರ ತಮ್ಮ ಸುರಕ್ಷತಾ ದೂರುಗಳ ಮೇಲೆ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಈ ಅಧ್ಯಯನವು (NARI 2025 report) ಭಾರತೀಯ ಮಹಿಳೆಯರಿಗೆ ಸುರಕ್ಷಿತ ನಗರಗಳ (Safest City in India) ಬಗ್ಗೆ ಆಘಾತಕಾರಿ ಅಂಶವನ್ನು ಬಹಿರಂಗ ಪಡಿಸಿದೆ. ದೇಶದ ಸುರಕ್ಷಿತ ಮತ್ತು ಅಸುರಕ್ಷಿತ ನಗರಗಳ (Safest and most unsafe cities in India) ಪಟ್ಟಿಯನ್ನು ಇದರಲ್ಲಿ ಮಾಡಲಾಗಿದೆ.

ದೇಶದ ಸುಮಾರು ಶೇ. 40ರಷ್ಟು ಮಹಿಳೆಯರು ದೇಶದ ಕೆಲವೊಂದು ನಗರಗಳನ್ನು ಅಸುರಕ್ಷಿತ ಎಂದು ಭಾವಿಸಿದ್ದಾರೆ ಎಂಬುದಾಗಿ ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಮಹಿಳಾ ಸುರಕ್ಷತೆಯ ಸೂಚ್ಯಂಕ (NARI 2025) ಹೇಳಿದೆ. ಈ ಅಧ್ಯಯನದಲ್ಲಿ ದೇಶಾದ್ಯಂತ ಮಹಿಳೆಯರು ಎದುರಿಸುತ್ತಿರುವ ಹಲವು ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಿದೆ.

ಈ ವರದಿಗೆ ಎಲ್ಲಾ ರಾಜ್ಯಗಳ 31 ನಗರಗಳಲ್ಲಿ 12,770 ಮಹಿಳೆಯರನ್ನು ಸಮೀಕ್ಷೆ ಮಾಡಲಾಗಿದೆ. ಈ ಸಮೀಕ್ಷೆಯ ಪ್ರಕಾರ ಕಿರುಕುಳವನ್ನು ಎದುರಿಸುವ ಮೂರು ಮಹಿಳೆಯರಲ್ಲಿ ಒಬ್ಬರು ಮಾತ್ರ ಈ ಬಗ್ಗೆ ದೂರು ನೀಡುತ್ತಾರೆ ಎಂದಿದೆ. ಇದರರ್ಥ ಎನ್ ಸಿಆರ್ ಬಿ ನಂತಹ ಸಂಸ್ಥೆಗಳಿಂದ ಅಧಿಕೃತ ಅಪರಾಧ ದಾಖಲೆಗಳಲ್ಲಿ ಹೆಚ್ಚಿನ ದೂರುಗಳು ದಾಖಲಾಗುವುದೇ ಇಲ್ಲ.

ವಿವಿಧ ಸುರಕ್ಷತಾ ಮಾಪನಗಳ ಆಧಾರದ ಮೇಲೆ ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ ಮತ್ತು ಮುಂಬೈನಂತಹ ನಗರಗಳನ್ನು ಮಹಿಳೆಯರು ಸುರಕ್ಷಿತ ನಗರಗಳೆಂದು ಗುರುತಿಸಿದ್ದಾರೆ. ಇದರಲ್ಲಿ ಬಲವಾದ ಲಿಂಗ ಸಮಾನತೆ, ಸುಧಾರಿತ ಮೂಲಸೌಕರ್ಯ ಮತ್ತು ಹೆಚ್ಚು ಪರಿಣಾಮಕಾರಿ ಪೊಲೀಸ್ ವ್ಯವಸ್ಥೆಯ ಅಂಶಗಳನ್ನು ಪರಿಗಣಿಸಲಾಗಿದೆ.

ಇನ್ನು ರಾಂಚಿ, ಶ್ರೀನಗರ, ಕೋಲ್ಕತ್ತಾ, ದೆಹಲಿ ಮತ್ತು ಪಾಟ್ನಾದಂತಹ ನಗರಗಳು ಅಸುರಕ್ಷಿತ ಎಂದು ಮಹಿಳೆಯರು ಭಾವಿಸಿದ್ದರೆ. ಇದಕ್ಕೆ ಮುಖ್ಯ ಕಾರಣ ಅಸಮರ್ಪಕ ಸಾರ್ವಜನಿಕ ಮೂಲಸೌಕರ್ಯ, ದುರ್ಬಲ ಸ್ಪಂದನೆ,ಪಿತೃಪ್ರಧಾನ ನಿಯಮಗಳು ಸೇರಿವೆ.

ಇನ್ನು ದಿನದ ಆಧಾರದಲ್ಲಿ ಹಗಲು ಹೊತ್ತಿನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 86ರಷ್ಟು ಮಹಿಳೆಯರು ಸುರಕ್ಷಿತ ಭಾವನೆ ಹೊಂದಿದ್ದಾರೆ. ರಾತ್ರಿಯಲ್ಲಿ, ವಿಶೇಷವಾಗಿ ಸಾರ್ವಜನಿಕ ಸಾರಿಗೆ, ಮನರಂಜನಾ ಪ್ರದೇಶಗಳಲ್ಲಿ ಅಭದ್ರತೆ ಹೆಚ್ಚಿನ ಮಹಿಳೆಯರನ್ನು ಕಾಡುತ್ತಿದೆ. ಇದರಲ್ಲಿ ನಾಲ್ಕು ಮಹಿಳೆಯರಲ್ಲಿ ಒಬ್ಬರ ದೂರಿಗೆ ಮಾತ್ರ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತದೆ. ದೇಶದ ಶೇ. 53ರಷ್ಟು ಜನರಿಗೆ ತಮ್ಮ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (POSH) ನೀತಿ ಜಾರಿಯಲ್ಲಿರುವುದು ತಿಳಿದೇ ಇಲ್ಲ.

ಇದನ್ನೂ ಓದಿ: Honour Killings: ಮರ್ಯಾದೆ ಹತ್ಯೆ ಸಂಬಂಧಿಸಿ ವಿಶೇಷ ಕಾನೂನು: ಸುಪ್ರೀಂಗೆ ನಟ ವಿಜಯ್ ಪಕ್ಷದಿಂದ ಮನವಿ

ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್, ಸುರಕ್ಷತೆಯು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲ. ಬದಲಾಗಿ ಮಹಿಳೆಯ ಜೀವನದ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರುತ್ತದೆ. ಈ ಅಧ್ಯಯನವು ಸರ್ಕಾರ, ನಿಗಮ ಮತ್ತು ಸಮುದಾಯಗಳಿಗೆ ಮಹಿಳೆಯರ ಸುರಕ್ಷತೆಗೆ ಕ್ರಮಕೈಗೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದ್ದಾರೆ.