ಕೊನೆ ಕ್ಷಣದಲ್ಲಿ ಪ್ಲಾನ್ ಚೇಂಜ್; ಸಲ್ಮಾನ್ ಖಾನ್ ಮನೆ ಟಾರ್ಗೆಟ್ ಮಾಡಿದ್ದ ಹಂತಕರು ಟೈಗರ್ ಶ್ರಾಫ್ ಕಡೆ ತಿರುಗಿದ್ದೇಕೆ?
ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಕ್ರೈಮ್ ಬ್ರಾಂಚ್ ನಡೆಸಿದ ತನಿಖೆಯಲ್ಲಿ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಬಿಷ್ಣೋಯ್ ಗ್ಯಾಂಗ್ನ ಟಾರ್ಗೆಟ್ ಟೈಗರ್ ಶ್ರಾಫ್ ಅಲ್ಲ ಬದಲಿಗೆ ಸಲ್ಮಾನ್ ಖಾನ್ ಆಗಿತ್ತು ಎಂದು ತಿಳಿದು ಬಂದಿದೆ.
ಸಂಗ್ರಹ ಚಿತ್ರ -
ಮುಂಬೈ: ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಕ್ರೈಮ್ ಬ್ರಾಂಚ್ ನಡೆಸಿದ ತನಿಖೆಯಲ್ಲಿ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ದಾಳಿಯ ಅಸಲಿ ಗುರಿ ನಟ ಟೈಗರ್ ಶ್ರಾಫ್ ಆಗಿರಲಿಲ್ಲ, ಬದಲಿಗೆ ಸೂಪರ್ಸ್ಟಾರ್ ಸಲ್ಮಾನ್ ಖಾನ್ (Salman Khan) ಆಗಿದ್ದರು ಎಂದು ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಶೂಟರ್ಗಳು ಮೊದಲು ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದರು. ಇದಕ್ಕಾಗಿ ಆರೋಪಿಗಳು ಸಲ್ಮಾನ್ ಖಾನ್ ಅವರ ನಿವಾಸದ ಸುತ್ತಮುತ್ತ ಸುದೀರ್ಘವಾಗಿ ರೆಕ್ಕಿ (ಪೂರ್ವ ಪರಿಶೀಲನೆ) ಕೂಡ ನಡೆಸಿದ್ದರು. ಏಪ್ರಿಲ್ 2024ರಲ್ಲಿ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದಿದ್ದ ಶೂಟೌಟ್ ಬಳಿಕ, ಅವರಿಗೆ ಮುಂಬೈ ಪೊಲೀಸರು ಕಟ್ಟುನಿಟ್ಟಾದ Y+ ಭದ್ರತೆ ಒದಗಿಸಿದ್ದಾರೆ.
ಕಮಾಂಡೋಗಳು, ಪೊಲೀಸ್ ಬೆಂಗಾವಲು ವಾಹನಗಳು ಮತ್ತು ಕಟ್ಟುನಿಟ್ಟಿನ ಕಣ್ಗಾವಲನ್ನು ಕಂಡು ಹೆದರಿದ ಶೂಟರ್ಗಳು, ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸುವುದು ಅತ್ಯಂತ ಅಪಾಯಕಾರಿ ಮತ್ತು ಅಸಾಧ್ಯ ಎಂದು ಅರಿತುಕೊಂಡರು. ಹೀಗಾಗಿ ಅವರು ಕೊನೆ ಕ್ಷಣದಲ್ಲಿ ತಮ್ಮ ಯೋಜನೆಯನ್ನು ಕೈಬಿಟ್ಟರು ಎಂದು ತಿಳಿದು ಬಂದಿದೆ. ಭಾನುವಾರ ಸಂಜೆ ಜುಹುನಲ್ಲಿ ಟೈಗರ್ ಶ್ರಾಫ್ ಫುಟ್ಬಾಲ್ ಆಡಿ ತಮ್ಮ ಕಾರಿನಲ್ಲಿ ಹೊರಡುವಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು 3 ರಿಂದ 4 ಸುತ್ತು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರೂ, ಅವರ ಚಾಲಕನಿಗೆ ಗಾಯಗಳಾಗಿವೆ.
ದಾಳಿಯ ಬೆನ್ನಲ್ಲೇ ಬಿಷ್ಣೋಯ್ ಗ್ಯಾಂಗ್ನ ವಿದೇಶಿ ಆಪರೇಟಿವ್ ಎನ್ನಲಾದ ಅನಿಲ್ ಪಂಡಿತ್ ಎಂಬಾತ ಸಾಮಾಜಿಕ ಮಾಧ್ಯಮದಲ್ಲಿ ಆಡಿಯೋ ಸಂದೇಶ ಹಂಚಿಕೊಂಡು ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವ ಅಥವಾ ಅವರಿಗೆ ಬೆಂಬಲ ನೀಡುವ ಬಾಲಿವುಡ್ನ ಪ್ರತಿಯೊಬ್ಬರಿಗೂ ಇದೇ ಗತಿ ಎಂದು ಗ್ಯಾಂಗ್ ಬಹಿರಂಗವಾಗಿ ಬೆದರಿಕೆ ಹಾಕಿದೆ.