Sam Pitroda: ಪಾಕಿಸ್ತಾನಕ್ಕೆ ಹೋದರೆ ಮನೆಯಂತೆ ಭಾಸವಾಯಿತು; ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾನಿಂದ ಮತ್ತೊಂದು ವಿವಾದ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆಪ್ತ ಸ್ಯಾಮ್ ಪಿತ್ರೋಡಾ ಮತ್ತೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಭಾರತದ ವಿದೇಶಾಂಗ ಇಲಾಖೆಯ ಕುರಿತು ಮಾತನಾಡಿದ ಅವರು, ವಿದೇಶಾಂಗ ನೀತಿಯಲ್ಲಿ ಬದಲಾವಣೆ ತಂದು ನೆರೆಹೊರೆಯ ಮೇಲೆ ಮೊದಲು ಗಮನಹರಿಸಬೇಕೆಂದು ಹೇಳಿದ್ದಾರೆ.

-

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi) ಆಪ್ತ ಸ್ಯಾಮ್ ಪಿತ್ರೋಡಾ (Sam Pitroda) ಮತ್ತೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಭಾರತದ ವಿದೇಶಾಂಗ ಇಲಾಖೆಯ ಕುರಿತು ಮಾತನಾಡಿದ ಅವರು, ವಿದೇಶಾಂಗ ನೀತಿಯಲ್ಲಿ ಬದಲಾವಣೆ ತಂದು ನೆರೆಹೊರೆಯ ಮೇಲೆ ಮೊದಲು ಗಮನಹರಿಸಬೇಕೆಂದು ಹೇಳಿದ್ದಾರೆ. ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಯಾಮ್ ಪಿತ್ರೋಡಾ ಅವರು ಭಾರತದ ವಿದೇಶಾಂಗ ನೀತಿ ಮತ್ತು ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧಗಳ ಕುರಿತು ಮಾತನಾಡಿದ್ದು, ಅವರ ಹೇಳಿಕೆಗಳು ವಿವಾದ ಹುಟ್ಟುಹಾಕಿದೆ.
ರಾಜತಾಂತ್ರಿಕತೆಗೆ ಆದ್ಯತೆ ನೀಡುವ ಕುರಿತು ಮಾತನಾಡಿದ ಸ್ಯಾಮ್ ಪಿತ್ರೋಡಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಂತಹ ದೇಶಗಳಿಗೆ ಭೇಟಿ ನೀಡಿದ್ದೆ. ಈ ವೇಳೆ ನನಗೆ ನನ್ನ ತಾಯ್ನಾಡಿನಲ್ಲೇ ಇದ್ದೇನೆಂಬ ಭಾವನೆ ಮೂಡಿಸಿತ್ತು ಎಂದು ಹೇಳಿದ್ದಾರೆ. ನಮ್ಮ ವಿದೇಶಾಂಗ ನೀತಿಯು ಮೊದಲು ನಮ್ಮ ನೆರೆಹೊರೆಯ ಮೇಲೆ ಕೇಂದ್ರೀಕರಿಸಬೇಕು. ನಮ್ಮ ನೆರೆಹೊರೆಯವರೊಂದಿಗೆ ನಾವು ನಿಜವಾಗಿಯೂ ಸಂಬಂಧವನ್ನು ಗಣನೀಯವಾಗಿ ಸುಧಾರಿಸಬಹುದೇ? ಎಂಬುದರ ಕುರಿತು ಗಮನ ಹರಿಸಬೇಕು. ಅವರೆಲ್ಲರೂ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಅವರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಗಳಿಗೆ ನೀಡಿದ ಭೇಟಿಗಳನ್ನು ನೆನಪಿಸಿಕೊಂಡ ಪಿತ್ರೋಡಾ, ಅಂತಹ ಪ್ರವಾಸಗಳ ಸಮಯದಲ್ಲಿ ತಾವು ಯಾವಾಗಲೂ ಮನೆಯಲ್ಲಿರುವಂತೆ ಭಾಸವಾಗುತ್ತಿತ್ತು ಎಂದು ಹೇಳಿದರು. ಪಾಕಿಸ್ತಾನದ ಕುರಿತು ಮಾತನಾಡಿ, ನಾನು ಮನೆಯಲ್ಲಿರುವಂತೆ ಭಾಸವಾಯಿತು. ನಾನು ಬಾಂಗ್ಲಾದೇಶ, ನೇಪಾಳಕ್ಕೆ ಹೋಗಿದ್ದೇನೆ ಮತ್ತು ನಾನು ಮನೆಯಲ್ಲಿರುವಂತೆ ಭಾಸವಾಗುತ್ತದೆ. ನಾನು ವಿದೇಶದಲ್ಲಿದ್ದೇನೆ ಎಂದು ನನಗೆ ಅನಿಸುವುದಿಲ್ಲ. ಅವರು ನನ್ನಂತೆ ಕಾಣುತ್ತಾರೆ, ಅವರು ನನ್ನಂತೆ ಮಾತನಾಡುತ್ತಾರೆ, ಅವರು ನನ್ನ ಹಾಡುಗಳನ್ನು ಇಷ್ಟಪಡುತ್ತಾರೆ, ಅವರು ನನ್ನ ಆಹಾರವನ್ನು ತಿನ್ನುತ್ತಾರೆ. ನಾವು ಅವರೊಂದಿಗೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕಲು ಕಲಿಯಬೇಕು" ಎಂದು ಅವರು ಹೇಳಿದರು.
Watch: Indian Overseas Congress chief Sam Pitroda says, "Our foreign policy, according to me, must first focus on our neighbourhood. Can we really substantially improve relationships with our neighbours?... I've been to Pakistan, and I must tell you, I felt at home. I've been to… pic.twitter.com/DINq138mvW
— IANS (@ians_india) September 19, 2025
ಸ್ಯಾಮ್ ಪಿತ್ರೋಡಾ ಅವರ ಈ ಹೇಳಿಕೆಗೆ ಬಿಜೆಪಿ ಕಿಡಿ ಕಾರಿದೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಿತ್ರೋಡಾ ಅವರು ಪಾಕಿಸ್ತಾನದಲ್ಲಿ ನಾನು ನನ್ನ ಮನೆಯಲ್ಲಿದ್ದೇನೆಂಬ ಭಾವನೆ ಮೂಡಿಸಿತು ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ 26/11ರ ದಾಳಿಯ ನಂತರವೂ ಯುಪಿಎ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯ ತರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿಯನ್ನೂ ಓದಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತಗಳ್ಳತನದ ಮೂಲಕ ಬಿಜೆಪಿ ಬುಡಮೇಲುಗೊಳಿಸಿದೆ; ರಾಹುಲ್ ಗಾಂಧಿ ಆರೋಪಕ್ಕೆ ಸಿದ್ದರಾಮಯ್ಯ ಸಮರ್ಥನೆ
ಲೋಕಸಭಾ ಚುನಾವಣೆಗೂ ಮುನ್ನ, ಪೂರ್ವದಲ್ಲಿರುವ ಭಾರತೀಯರು ಚೀನಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣದಲ್ಲಿರುವವರು ಆಫ್ರಿಕನ್ನರಂತೆ ಕಾಣುತ್ತಾರೆ ಎಂದು ಪಿತ್ರೋಡಾ ಹೇಳಿಕೆ ನೀಡಿ ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಭಾರತದಲ್ಲಿ ಪಿತ್ರಾರ್ಜಿತ ತೆರಿಗೆ ಕಾನೂನನ್ನು ಜಾರಿಗೆ ತರಬೇಕೆಂದು ಪ್ರತಿಪಾದಿಸುವ ಅವರ ಹೇಳಿಕೆಯು ವ್ಯಾಪಕ ಖಂಡನೆಗೆ ಗುರಿಯಾಗಿತ್ತು.