ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೇಣುಗೋಪಾಲ್, ರಮೇಶ್ ಚೆನ್ನಿತ್ತಲರನ್ನು ಹಾಡಿ ಹೊಗಳಿದ ಕೇರಳಂ ಮುಖ್ಯಮಂತ್ರಿ ಸತೀಶನ್

Satheesan Chosen as Keralam CM: ಕೇರಳಂನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಅವರು ಒಗ್ಗಟ್ಟಿನ ಮಂತ್ರವನ್ನು ಪ್ರತಿಪಾದಿಸಿದರು. ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷದೊಳಗೆ ತೀವ್ರ ಲಾಬಿ ಮತ್ತು ಬಣ ತಂತ್ರದ ನಡುವೆಯೂ, ಕೇರಳದಲ್ಲಿ ಎಐಸಿಸಿಯ ಪ್ರಯತ್ನಗಳನ್ನು ಪ್ರತಿದಿನ ಸಂಘಟಿಸಿದ್ದಕ್ಕಾಗಿ ವೇಣುಗೋಪಾಲ್ ಅವರನ್ನು ಸತೀಶನ್ ಶ್ಲಾಘಿಸಿದರು.

ಸಾಂದರ್ಭಿಕ ಚಿತ್ರ

ತಿರುವನಂತಪುರಂ, ಮೇ 14: ಕೇರಳಂನ ಮುಖ್ಯಮಂತ್ರಿಯಾಗಿ (Keralam CM) ಆಯ್ಕೆಯಾದ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ (VD Satheesan) ಅವರು ಒಗ್ಗಟ್ಟಿನ ಮಂತ್ರವನ್ನು ಪ್ರತಿಪಾದಿಸಿದರು. ಮುಖ್ಯಮಂತ್ರಿ ಸ್ಥಾನದ ಇತರ ಪ್ರಬಲ ಆಕಾಂಕ್ಷಿಗಳಾಗಿದ್ದ ಕೆ.ಸಿ. ವೇಣುಗೋಪಾಲ್ (Venugopal) ಮತ್ತು ರಮೇಶ್ ಚೆನ್ನಿತ್ತಲ (Ramesh Chennithala) ಅವರ ಹೆಸರನ್ನು ಉಲ್ಲೇಖಿಸಿದ ಅವರು, ಚುನಾವಣಾ ಗೆಲುವಿನಲ್ಲಿ ಅವರ ಶ್ರಮ ಮತ್ತು ಪಾತ್ರ ಬಹಳ ದೊಡ್ಡದು ಎಂದು ಸ್ಮರಿಸಿದರು.

ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷದೊಳಗೆ ತೀವ್ರ ಲಾಬಿ ಮತ್ತು ಬಣ ತಂತ್ರದ ನಡುವೆಯೂ, ಕೇರಳದಲ್ಲಿ ಎಐಸಿಸಿಯ ಪ್ರಯತ್ನಗಳನ್ನು ಪ್ರತಿದಿನ ಸಂಘಟಿಸಿದ್ದಕ್ಕಾಗಿ ವೇಣುಗೋಪಾಲ್ ಅವರನ್ನು ಸತೀಶನ್ ಶ್ಲಾಘಿಸಿದರು. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಚೆನ್ನಿತ್ತಲ ಅವರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದರು. ಪಕ್ಷವು ಅಧಿಕಾರಕ್ಕೆ ಮರಳುವಲ್ಲಿ ಇಬ್ಬರೂ ನಾಯಕರು ನಿರ್ಣಾಯಕ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಇದನ್ನು ನಾನು ವೈಯಕ್ತಿಕ ಸಾಧನೆಯಾಗಿ ನೋಡುವುದಿಲ್ಲ. ಈ ಗೆಲುವಿಗೆ ಅಸಂಖ್ಯಾತ ಜನರ ಪರಿಶ್ರಮವಿದೆ. ಈ ಗೆಲುವಿನಲ್ಲಿ ಎಐಸಿಸಿ (AICC) ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ವಿಶೇಷವಾಗಿ ಕೆ.ಸಿ. ವೇಣುಗೋಪಾಲ್ ಅವರು ಪ್ರತಿದಿನ ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ನಮಗೆ ನಿರ್ದೇಶನಗಳನ್ನು ನೀಡುತ್ತಾ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು ಎಂದು ಆಯ್ಕೆಯಾದ ಮುಖ್ಯಮಂತ್ರಿ ಹೇಳಿದರು.

ಸಿಎಂ ಹುದ್ದೆ ಬಿಟ್ಟು ಬೇರೆ ಯಾವುದೂ ಬೇಡ: ಕೇರಳಂ ಕಾಂಗ್ರೆಸ್ ನಾಯಕ ಸತೀಶನ್ ಪಟ್ಟು, ಇಕ್ಕಟ್ಟಿನಲ್ಲಿ ಹೈಕಮಾಂಡ್

ಹಾಗೆಯೇ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರಮೇಶ್ ಚೆನ್ನಿತ್ತಲ ಕೂಡ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ನನ್ನ ನಾಯಕ ಮತ್ತು ಆತ್ಮೀಯ ಸಹೋದ್ಯೋಗಿ. ಇನ್ನೂ ಮುಂದುವರೆದು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಾನು ಎಲ್ಲರನ್ನೂ ಜೊತೆಗೂಡಿಸಿಕೊಂಡು, ಅವರ ವಿಶ್ವಾಸ ಮತ್ತು ಬೆಂಬಲದೊಂದಿಗೆ ಮುನ್ನಡೆಯುತ್ತೇನೆ ಎಂದು ಹೇಳಿದರು.

140 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 102 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬಂದ ನಂತರ, 10 ದಿನಗಳ ಸಸ್ಪೆನ್ಸ್ ಮತ್ತು ತೀವ್ರ ಚರ್ಚೆಗಳಿಗೆ ಅಂತ್ಯ ಹಾಡಿರುವ ಕಾಂಗ್ರೆಸ್, ವಿ.ಡಿ. ಸತೀಶನ್ ಅವರನ್ನು ಕೇರಳಂನ ಮುಂದಿನ ಮುಖ್ಯಮಂತ್ರಿಯನ್ನಾಗಿ ನೇಮಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ, ಆಯಾ ನಾಯಕರ ಬೆಂಬಲಿಗರು ತೀವ್ರವಾದ ಬಣ ರಾಜಕೀಯ ಹಾಗೂ ಪೈಪೋಟಿಯಲ್ಲಿ ತೊಡಗಿದ್ದರು. ಕೊನೆಗೂ ಸತೀಶನ್ ಅವರಿಗೆ ಪಟ್ಟ ಕೊಡ ಹೈಕಮಾಂಡ್ ಸಸ್ಪೆನ್ಸ್‌ಗೆ ತೆರೆ ಎಳೆದಿದೆ.

ಈ ಮಧ್ಯೆ, ವೇಣುಗೋಪಾಲ್ ಅವರು ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿದರು. ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸತೀಶನ್ ಅವರಿಗೆ ತಮ್ಮ ಬೆಂಬಲ ನೀಡಿದರು. ಅಂತಿಮ ನಿರ್ಧಾರ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ವಿ.ಡಿ. ಸತೀಶನ್ ಅವರನ್ನು ಕೇರಳಂನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಪಕ್ಷದ ಈ ನಿರ್ಧಾರವನ್ನು ನಾನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇನೆ. ಇದಕ್ಕಾಗಿ ನಾನು ವಿ.ಡಿ. ಸತೀಶನ್ ಅವರನ್ನು ಅಭಿನಂದಿಸುತ್ತೇನೆ ಎಂದು ವೇಣುಗೋಪಾಲನ್ ಹೇಳಿದರು.

ಇನ್ನು ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದ ಊಹಾಪೋಹಗಳನ್ನು ವೇಣುಗೋಪಾಲ್ ತಳ್ಳಿಹಾಕಿದರು. ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದರು. ಅಲ್ಲದೆ, ಪಕ್ಷ ಮತ್ತು ಅದರ ಕಾರ್ಯಕರ್ತರೇ ತಮಗೆ ಸರ್ವೋಚ್ಚ ಎಂದು ಪ್ರತಿಪಾದಿಸಿದರು.