ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೊಂದಲಕ್ಕೆ ಕೊನೆಗೂ ತೆರೆ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್‌ಗೆ ಪಟ್ಟ

V. D. Satheesan CM of Keralam: ವಿ.ಡಿ. ಸತೀಶನ್ ಅವರು ಕೇರಳಂನ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ನಂತರ ಕಾಂಗ್ರೆಸ್ ಅಂತಿಮವಾಗಿ ಹಿರಿಯ ನಾಯಕ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಘೋಷಿಸಿತು.

ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ

ವಿ.ಡಿ. ಸತೀಶನ್ (ಸಂಗ್ರಹ ಚಿತ್ರ) -

Priyanka P
Priyanka P May 14, 2026 12:46 PM

ತಿರುವನಂತಪುರಂ, ಮೇ 14: ಕೊನೆಗೂ ಕೇರಳಂನ ಮುಖ್ಯಮಂತ್ರಿ (Keralam CM) ಅಭ್ಯರ್ಥಿ ಯಾರು ಎಂಬ ಗೊಂದಲಕ್ಕೆ ತೆರೆಬಿದ್ದಿದೆ. ವಿ.ಡಿ. ಸತೀಶನ್ (VD Satheesan) ಅವರು ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ನಂತರ ಕಾಂಗ್ರೆಸ್ ಅಂತಿಮವಾಗಿ ಹಿರಿಯ ನಾಯಕ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಘೋಷಿಸಿತು.

ಹಲವು ದಿನಗಳ ಕಾಲ ತೀವ್ರ ಲಾಬಿ, ಸಮಾಲೋಚನೆ ಮತ್ತು ಹೆಚ್ಚುತ್ತಿರುವ ಅನಿಶ್ಚಿತತೆಯ ನಂತರ ಕೊನೆಗೂ ಸತೀಶನ್ ಅವರಿಗೆ ಕೇರಳಂನ ಸಿಎಂ ಪಟ್ಟ ನೀಡಲಾಗಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ ನಡುವೆ ನವದೆಹಲಿಯಲ್ಲಿ ನಡೆದ ಬಿರುಸಿನ ಚರ್ಚೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ (UDF) 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತ್ತು. ಆದರೆ ಮುಖ್ಯಮಂತ್ರಿ ಆಯ್ಕೆ ಬಹಳ ಕಗ್ಗಂಟಾಗಿತ್ತು. ಹೈಕಮಾಂಡ್‌ಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೂ ಈ ಅನಿಶ್ಚಿತತೆಗೆ ತೆರೆ ಎಳೆಯಲಾಗಿದೆ.

ಸಿಎಂ ಹುದ್ದೆ ಬಿಟ್ಟು ಬೇರೆ ಯಾವುದೂ ಬೇಡ: ಕೇರಳಂ ಕಾಂಗ್ರೆಸ್ ನಾಯಕ ಸತೀಶನ್ ಪಟ್ಟು, ಇಕ್ಕಟ್ಟಿನಲ್ಲಿ ಹೈಕಮಾಂಡ್

ತಿರುವನಂತಪುರಂನಲ್ಲಿರುವ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸತೀಶನ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಇದರಿಂದಾಗಿ ಮುಂದಿನ ಸರ್ಕಾರ ರಚಿಸಲು ಹಕ್ಕು ಮಂಡಿಸಲು ಅವರಿಗೆ ದಾರಿ ಸುಗಮವಾಯಿತು. ಸಿಎಲ್‌ಪಿ ಸಭೆಗೆ ಕೆಲವು ಗಂಟೆಗಳ ಮೊದಲು ದೆಹಲಿಯಲ್ಲಿ ಹಲವಾರು ಸುತ್ತಿನ ಸಮಾಲೋಚನೆಗಳು ನಡೆದ ನಂತರ ಈ ಘೋಷಣೆ ಹೊರಬಿದ್ದಿತು.

ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರು ನವದೆಹಲಿಯಲ್ಲಿರುವ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಇಂದು (ಗುರುವಾರ, ಮೇ 12) ಬೆಳಗ್ಗೆ ಆಗಮಿಸಿದ್ದರು. ಇದು ಹೈಕಮಾಂಡ್ ಅಂತಿಮ ಚರ್ಚೆಯಲ್ಲಿ ತೊಡಗಿದೆ ಎಂಬ ಊಹಾಪೋಹಗಳಿಗೆ ಕಾರಣವಾಗಿತ್ತು. ಹಿರಿಯ ನಾಯಕರಾದ ದೀಪಾ ದಾಸ್‌ಮುನ್ಸಿ, ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ಕೂಡ ದೆಹಲಿಯಲ್ಲಿದ್ದರು.

ಇನ್ನು ಅಧಿಕೃತ ಘೋಷಣೆಗೂ ಮೊದಲೇ ಸತೀಶನ್ ಅವರ ಅಲುವಾ ನಿವಾಸದ ಹೊರಗೆ ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಿಸಿದರು. ಅವರು ತಮ್ಮ ಕುಟುಂಬದೊಂದಿಗೆ ತಿರುವನಂತಪುರಂಗೆ ತೆರಳುತ್ತಿದ್ದಂತೆ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸಿಎಲ್‌ಪಿ ಸಭೆಗೂ ಮುನ್ನ ಪಕ್ಷದ ಕಾರ್ಯಕರ್ತರು ಅವರಿಗೆ ಜೈಕಾರ ಹಾಕುತ್ತಾ ಶುಭ ಹಾರೈಸಿದ್ದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ್ದ ಅವರು ಮುಖ್ಯಮಂತ್ರಿ ಹುದ್ದೆ ಸಿಗುವ ಬಗ್ಗೆ ವಿಶ್ವಾಸ ಹೊಂದಿರುವುದಾಗಿ ಹೇಳಿದ್ದರು. ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸತೀಶನ್, ಮುಖ್ಯಮಂತ್ರಿ ಸ್ಪರ್ಧೆಯಲ್ಲಿ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರು. ತನಗೆ ಸಿಎಂ ಪಟ್ಟ ಬಿಟ್ಟು ಬೇರೆ ಯಾವುದೂ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದರು.