ಲಖನೌ, ಜೂ. 29: ಅಯೋಧ್ಯೆಯ ರಾಮ ಮಂದಿರದ (Ayodhya Ram Mandir) ನಿಧಿ ದುರುಪಯೋಗ ಪ್ರಕರಣದಲ್ಲಿ ಹೊಸ ವಿವರಗಳು ಹೊರಬರುತ್ತಿದ್ದಂತೆ, ಕಳ್ಳತನದ ಶಂಕೆಯ ಮೇರೆಗೆ ದೇವಾಲಯದಲ್ಲಿ ದೇಣಿಗೆ ಎಣಿಕೆ ಮಾಡುವ ಸಿಬ್ಬಂದಿಯನ್ನು ತೆಗೆದುಹಾಕುವಂತೆ ಮೂರು ತಿಂಗಳ ಹಿಂದೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಿಫಾರಸು ಮಾಡಿತ್ತು ಎನ್ನಲಾಗಿದೆ. ಆದರೆ, ದೇವಾಲಯದ ಟ್ರಸ್ಟ್‌ನ ಕೆಲವು ಅಧಿಕಾರಿಗಳು ಎಣಿಕೆ ಸಿಬ್ಬಂದಿಯನ್ನು ವಜಾಗೊಳಿಸದಂತೆ ತಡೆದಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ರಾಮ ಮಂದಿರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಮಾಜಿ ಟ್ರಸ್ಟಿಗಳಾದ ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರಿಗೂ ನೊಟೀಸ್ ಜಾರಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಯ್ ಮತ್ತು ಮಿಶ್ರಾ ಈಗಾಗಲೇ ಟ್ರಸ್ಟ್‌ಗೆ ರಾಜೀನಾಮೆ ನೀಡಿದ್ದರೆ, ರಾವ್ ಕೂಡ ಟ್ರಸ್ಟ್‌ನ ಚಟುವಟಿಕೆಗಳಿಂದ ದೂರ ಸರಿಯಬಹುದು ಎನ್ನಲಾಗಿದೆ. ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಎಣಿಕೆ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ದೇವಾಲಯದ ಹುಂಡಿಗಳಿಂದ ದೋಚಿದ ವಸ್ತುಗಳನ್ನು ಮರುಪಡೆಯಲು ಪ್ರಯತ್ನ ನಡೆಯುತ್ತಿದೆ.
ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ: ಭಕ್ತರ ನಂಬಿಕೆಗೆ ಧಕ್ಕೆ ತಂದವರ ವಿರುದ್ಧ ಕಠಿಣ ಕ್ರಮ – ಸಿಎಂ ಯೋಗಿ
ದೇವಾಲಯದ ಟ್ರಸ್ಟ್‌ನ ಖಾತೆಯನ್ನು ನಿರ್ವಹಿಸುವ ಎಸ್‌ಬಿಐ, ದೇಣಿಗೆ ನಿಧಿಯನ್ನು ಬೇರೆ ಏಜೆನ್ಸಿಗೆ ಎಣಿಸುವ ಕೆಲಸವನ್ನು ಹೊರಗುತ್ತಿಗೆ ನೀಡಿತ್ತು. ಮೂರು ತಿಂಗಳ ಹಿಂದೆಯೇ ದೇವಾಲಯದ ಹುಂಡಿಗಳಿಂದ ಹಣ ದುರುಪಯೋಗವಾಗುತ್ತಿರುವ ಬಗ್ಗೆ ಬ್ಯಾಂಕ್‌ಗೆ ಅನುಮಾನ ಬಂದಿತ್ತು ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ, ಹುಂಡಿ ಹಣ ಎಣಿಸುವ ಕರ್ತವ್ಯದಿಂದ ಸಂಬಂಧಿತ ಸಿಬ್ಬಂದಿಯನ್ನು ತೆಗೆದುಹಾಕುವಂತೆ ಬ್ಯಾಂಕ್ ಶಿಫಾರಸು ಮಾಡಿತ್ತು.
ಟ್ರಸ್ಟ್ ಅಧಿಕಾರಿಗಳು ಶಾಮೀಲು?
ಹೊರಗುತ್ತಿಗೆ ಸಂಸ್ಥೆಯು ಸಿಬ್ಬಂದಿಯನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿತ್ತು. ಆದರೆ ಟ್ರಸ್ಟ್‌ನ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಿಬ್ಬಂದಿಯ ಪರವಾಗಿ ನಿಂತು ಅವರನ್ನು ವಜಾಗೊಳಿಸದಂತೆ ತಡೆದರು ಎಂದು ತಿಳಿದುಬಂದಿದೆ. ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ಪ್ರಭಾವವನ್ನು ಮೀರಲು ಸಾಧ್ಯವಾಗದೆ, ಬ್ಯಾಂಕ್ ಸಿಬ್ಬಂದಿಯನ್ನು ತೆಗೆದುಹಾಕುವಲ್ಲಿ ವಿಫಲವಾಯಿತು ಮತ್ತು ಕಳವು ಅನಿಯಂತ್ರಿತವಾಗಿ ಮುಂದುವರಿಯಿತು ಎನ್ನಲಾಗಿದೆ.
ದೇಣಿಗೆ ಕಳವು ಪ್ರಕರಣದ ತನಿಖೆಯಲ್ಲಿ ಬ್ಯಾಂಕ್‌ನ ಇಬ್ಬರು ಸಿಬ್ಬಂದಿ ರತ್ನೇಶ್ ಮತ್ತು ಗಗನ್‌ದೀಪ್ ಅವರ ಪಾತ್ರವೂ ಬೆಳಕಿಗೆ ಬಂದಿದೆ. ಇಬ್ಬರೂ ಬ್ಯಾಂಕ್‌ನ ವೇತನ ಪಟ್ಟಿಯಲ್ಲಿದ್ದ ಸಿಬ್ಬಂದಿಯಾಗಿದ್ದಾರೆ. ಹುಂಡಿ ಹಣ ಎಣಿಸುವ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಅವರು ನಿಯಮಿತವಾಗಿ ಎಣಿಕೆ ಕೊಠಡಿಗಳಲ್ಲಿ ಹಾಜರಿರುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಅಯೋಧ್ಯೆ ರಾಮ ಜನ್ಮಭೂಮಿ ದೇವಾಲಯದಲ್ಲಿ ಚೀನಾದ ಕೃತಕ ಜ್ಯೋತಿ ಅಳವಡಿಕೆ
ಕ‍್ಳತನದಲ್ಲಿ ಅವರ ಕೂವಾಡವಿರುವ ಬಗ್ಗೆ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ, ಅವರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಯಾವುದೇ ಪೊಲೀಸ್ ಪರಿಶೀಲನೆಗೆ ಒಳಗಾಗದೆ, ಶಿಫಾರಸುಗಳ ಮೂಲಕ ಎಣಿಕೆ ಕರ್ತವ್ಯಕ್ಕೆ ನೇಮಕಾತಿಗಳನ್ನು ಹೇಗೆ ಮಾಡಲಾಗಿದೆ ಎಂಬ ಪ್ರಶ್ನೆಯೂ ಮೂಡಿದೆ.
ಎಂಟು ಆರೋಪಿಗಳಲ್ಲಿ ಅನುಕಲ್ಪ್ ಮಿಶ್ರ, ಲವ್‌ಕುಶ್ ಮಿಶ್ರ, ಮನೀಶ್ ಕುಮಾರ್ ಯಾದವ್, ರಾಮಶಂಕರ್ ಮಿಶ್ರ, ಅವ್ನಿಶ್ ಮತ್ತು ಕರುಣೇಶ್ ಶುಕ್ಲಾ ಅವರನ್ನು ಹೊರಗುತ್ತಿಗೆ ಏಜೆನ್ಸಿಯ ಮೂಲಕ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಅವರೆಲ್ಲರೂ ಟ್ರಸ್ಟ್ ಅಧಿಕಾರಿಗಳ ನಿಕಟವರ್ತಿಗಳಾಗಿದ್ದು, ರತ್ನೇಶ್ ಮತ್ತು ಗಗನ್‌ದೀಪ್ ಅವರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.