ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮಸೂದೆಗೆ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP-SP) ಅಧಿಕೃತವಾಗಿ ಬೆಂಬಲ ಘೋಷಿಸಿದೆ. ವಿರೋಧ ಪಕ್ಷಗಳ ಮೈತ್ರಿಕೂಟವಾದ 'ಇಂಡಿಯಾ' (INDIA) ಬ್ಲಾಕ್‌ನ ಪ್ರಮುಖ ಮಿತ್ರಪಕ್ಷವೇ ಕೇಂದ್ರದ ಮಸೂದೆಯ ಪರ ನಿಂತಿರುವುದು, ಮೈತ್ರಿಕೂಟದ ಒಗ್ಗಟ್ಟಿಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ಬಳಿಕ, ಎನ್‌ಸಿಪಿ (ಎಸ್‌ಪಿ) ರಾಷ್ಟ್ರೀಯ ವಕ್ತಾರ ಜಿತೇಂದ್ರ ಅವ್ಹಾದ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. "ಸಂವಿಧಾನದ ನಿಯಮಗಳ ಪ್ರಕಾರ ಕ್ಷೇತ್ರ ಪುನರ್ವಿಂಗಡಣೆ ನಡೆಯಬೇಕಿದೆ. ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಮತ್ತು ಸಂಸದರು ಚರ್ಚಿಸಿ ತೆಗೆದುಕೊಂಡ ನಿರ್ಧಾರದಂತೆ ನಾವು ಈ ಮಸೂದೆಯನ್ನು ಬೆಂಬಲಿಸುತ್ತಿದ್ದೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಆತಂಕವಿತ್ತು. ಈ ಹಿನ್ನೆಲೆಯಲ್ಲಿ, ದೇಶದ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳಲ್ಲಿ ಏಕರೂಪವಾಗಿ ಶೇ. 50 ರಷ್ಟು ಹೆಚ್ಚಳ ಮಾಡಬೇಕು ಎಂಬ ಷರತ್ತನ್ನು ಸುಪ್ರಿಯಾ ಸುಳೆ ಈ ಹಿಂದೆ ಮುಂದಿಟ್ಟಿದ್ದರು. ನವೆಂಬರ್ 27 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ದೇಶಾದ್ಯಂತ ಲೋಕಸಭಾ ಸ್ಥಾನಗಳನ್ನು ಶೇ. 50 ರಷ್ಟು ಹೆಚ್ಚಿಸುವ ಮಸೂದೆಗೆ ಅನುಮೋದನೆ ನೀಡಲಾಗಿದೆ. ತಮ್ಮ ಬೇಡಿಕೆಗೆ ಪೂರಕವಾಗಿ ಮಸೂದೆ ಸಿದ್ಧವಾಗಿರುವುದರಿಂದ ಪವಾರ್ ಬಣವು ಬೆಂಬಲ ಸೂಚಿಸಿದೆ.
ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ, ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಶರದ್ ಪವಾರ್ ಬಣವು ತನ್ನ ಎಲ್ಲಾ 8 ಲೋಕಸಭಾ ಸಂಸದರಿಗೆ ಈಗಾಗಲೇ 'ಮೂರು ಸಾಲಿನ ವಿಪ್' ಜಾರಿ ಮಾಡಿದೆ.
ಇಂಡಿಯಾ ಮೈತ್ರಿಕೂಟದಲ್ಲಿ ಅಸಮಾಧಾನ
ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಬಹುತೇಕ ಪಕ್ಷಗಳು ಈ ಮಸೂದೆಯನ್ನು ವಿರೋಧಿಸುತ್ತಿವೆ. ಮಸೂದೆಯ ವಿರುದ್ಧದ ಕಾರ್ಯತಂತ್ರ ರೂಪಿಸಲು ನವೆಂಬರ್ 28 ರಂದು ಇಂಡಿಯಾ ಬ್ಲಾಕ್ ಸಭೆ ಕರೆಯಲಾಗಿದ್ದು, ಅದಕ್ಕೂ ಮುನ್ನವೇ ಪವಾರ್ ಬಣವು ಸರ್ಕಾರದ ಪರ ನಿಲುವು ತಳೆದಿರುವುದು ಮಿತ್ರಪಕ್ಷಗಳಲ್ಲಿ ಅಸಮಾಧಾನ ಮೂಡಿಸಿದೆ. ಈ ನಡುವೆ, "ಎನ್‌ಡಿಎ ಮಸೂದೆಯನ್ನು ಬೆಂಬಲಿಸುವ ಯಾವುದೇ ಪಕ್ಷವು ಮೈತ್ರಿಕೂಟಕ್ಕೆ ದ್ರೋಹ ಬಗೆದಂತಾಗುತ್ತದೆ" ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಎಚ್ಚರಿಕೆ ನೀಡಿದ್ದಾರೆ.