ದಕ್ಷಿಣ ರಾಜ್ಯಗಳ ಒತ್ತಡಕ್ಕೆ ಮಣಿದ ಸರ್ಕಾರ; ಲೋಕಸಭಾ ಸ್ಥಾನ ಶೇ. 50ಕ್ಕೆ ಏರಿಕೆ, ಕ್ಷೇತ್ರ ಪುನರ್ವಿಂಗಡಣೆ 2051 ರವರೆಗೆ ಸ್ಥಗಿತ
Delimitation Bill: ದಕ್ಷಿಣ ಭಾರತದ ರಾಜ್ಯಗಳ ತೀವ್ರ ವಿರೋಧ ಹಾಗೂ ರಾಜಕೀಯ ಒಮ್ಮತದ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದ್ದ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಜಾರಿ ಪ್ರಕ್ರಿಯೆಗೆ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ತಿದ್ದುಪಡಿ ಮಸೂದೆಯ ಪ್ರಮುಖ ಬದಲಾವಣೆಗಳಿಗೆ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಸ್ಥಗಿತ 2051 ರವರೆಗೆ ಸ್ಥಗಿತ -
ನವದೆಹಲಿ: ದಕ್ಷಿಣ ಭಾರತದ ರಾಜ್ಯಗಳ ತೀವ್ರ ವಿರೋಧ ಹಾಗೂ ರಾಜಕೀಯ ಒಮ್ಮತದ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದ್ದ ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮತ್ತು ಮಹಿಳಾ ಮೀಸಲಾತಿ ಜಾರಿ ಪ್ರಕ್ರಿಯೆಗೆ ಪ್ರಧಾನಿ ಮೋದಿ (Narendra Modi) ನೇತೃತ್ವದ ಎನ್ಡಿಎ ಸರ್ಕಾರ ತಿದ್ದುಪಡಿ ಮಸೂದೆಯ ಪ್ರಮುಖ ಬದಲಾವಣೆಗಳಿಗೆ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಹೊಸ ಆದೇಶದ ಪ್ರಕಾರ ದೇಶದ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಏಕರೂಪವಾಗಿ ಶೇ. 50 ರಷ್ಟು ಹೆಚ್ಚಿಸಲಾಗುವುದು ಮತ್ತು ರಾಜ್ಯವಾರು ಸ್ಥಾನ ಹಂಚಿಕೆಯ ಅನುಪಾತವನ್ನು 2051 ರವರೆಗೆ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗುವುದು. ಇದರಿಂದ ಪ್ರಸ್ತುತ 543 ಇರುವ ಲೋಕಸಭೆಯ ಸದಸ್ಯ ಬಲವು ಅಂದಾಜು 815 ಕ್ಕೆ ಏರಿಕೆಯಾಗಲಿದೆ. ರಾಜ್ಯವಾರು ಸ್ಥಾನಗಳ ಹಂಚಿಕೆಯ ಅನುಪಾತವನ್ನು ಮುಂದಿನ 25 ವರ್ಷಗಳ ಕಾಲ ಅಂದರೆ 2051ರವರೆಗೆ ಸ್ಥಗಿತಗೊಳಿಸಲಾಗುವುದು.
ಅನುಮೋದಿಸಿ ತಿದ್ದುಪಡಿಯಲ್ಲೇನಿದೆ?
ಎಲ್ಲಾ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಇರುವ 1971ರ ಜನಗಣತಿಯ ಅನುಪಾತವನ್ನೇ ಆಧಾರವಾಗಿಟ್ಟುಕೊಂಡು, ದೇಶದ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಲೋಕಸಭೆಯ ಒಟ್ಟು ಸದಸ್ಯ ಬಲ 543 ರಿಂದ ಸುಮಾರು 815ಕ್ಕೆ ಏರಿಕೆ ಮಾಡಲಾಗುವುದು.
ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಿದರೆ ಉತ್ತರ ಭಾರತದ ರಾಜ್ಯಗಳ ಸ್ಥಾನಗಳು ಹೆಚ್ಚಾಗಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕುಸಿಯುತ್ತದೆ ಎಂಬ ಆತಂಕವಿತ್ತು. ಇದನ್ನು ನಿವಾರಿಸಲು ಅಂತಾರಾಜ್ಯ ಸ್ಥಾನ ಹಂಚಿಕೆಯನ್ನು ಹೊಸ ಜನಗಣತಿಯಿಂದ ಪ್ರತ್ಯೇಕಿಸಲಾಗಿದ್ದು, ರಾಜ್ಯದ ಒಳಗಿನ ಕ್ಷೇತ್ರಗಳ ಗಡಿ ಮರುನಿರ್ಣಯಕ್ಕೆ ಮಾತ್ರ 2011ರ ಜನಗಣತಿಯನ್ನು ಬಳಸುವ ಪ್ರಸ್ತಾಪವಿದೆ. ಅರ್ಥಾತ್, ಕರ್ನಾಟಕದ ಒಟ್ಟು ಲೋಕಸಭಾ ಸ್ಥಾನಗಳು 28 ರಿಂದ 42ಕ್ಕೆ ಹೆಚ್ಚಾಗುತ್ತವೆಯಾದರೂ, ಆ 42 ಕ್ಷೇತ್ರಗಳ ಗಡಿಗಳನ್ನು (ಭೌಗೋಳಿಕ ವ್ಯಾಪ್ತಿ) ಈಗಿನ ಜನಸಂಖ್ಯೆಗೆ ಅನುಗುಣವಾಗಿ ಹೊಸದಾಗಿ ಗುರುತಿಸಲಾಗುತ್ತದೆ.
ಜನಸಂಖ್ಯಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಹೊಸ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆದರೆ ಸಂಸತ್ತಿನಲ್ಲಿ ತಮ್ಮ ಪ್ರಾತಿನಿಧ್ಯ ಕುಸಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದವು. ಕಳೆದ ಏಪ್ರಿಲ್ನಲ್ಲಿ ಸರ್ಕಾರ ಮಂಡಿಸಿದ್ದ ಮೂಲ ಮಸೂದೆಯು ಪ್ರಾದೇಶಿಕ ಪಕ್ಷಗಳ ವಿರೋಧದಿಂದಾಗಿ ಸಂಸತ್ತಿನಲ್ಲಿ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಇದೀಗ 1971ರ ಜನಗಣತಿಯ ಅನುಪಾತವನ್ನೇ ಆಧಾರವಾಗಿಟ್ಟುಕೊಂಡು ಎಲ್ಲಾ ರಾಜ್ಯಗಳಿಗೆ ಏಕರೂಪವಾಗಿ ಶೇ. 50 ರಷ್ಟು ಸ್ಥಾನಗಳನ್ನು ಹೆಚ್ಚಿಸಲು ನಿರ್ಧರಿಸಿರುವುದರಿಂದ ದಕ್ಷಿಣದ ರಾಜ್ಯಗಳ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ.
ನವೆಂಬರ್ 30ರಿಂದ ಸಂಸತ್ ವಿಶೇಷ ಕಲಾಪ: ಡಿಲಿಮಿಟೇಷನ್, ಮಹಿಳಾ ಮೀಸಲಾತಿ ಮಸೂದೆ ಮಂಡನೆ ಸಾಧ್ಯತೆ
ಈ ತಿದ್ದುಪಡಿ ಮಸೂದೆಗೆ ಸಂಸತ್ತಿನ ಅಂಗೀಕಾರ ದೊರೆತರೆ, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಜೋಡಣೆಯಾಗಿರುವ ಶೇ. 33 ರಷ್ಟು ಮಹಿಳಾ ಮೀಸಲಾತಿ ಕಾಯ್ದೆಯನ್ನು 2029 ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ಜಾರಿಗೊಳಿಸಲು ಹಾದಿ ಸುಗಮವಾಗಲಿದೆ. ಈ ಪರಿಷ್ಕೃತ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯುವ ಸಲುವಾಗಿ ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನಾಲ್ಕು ದಿನಗಳ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.