ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾಗೆ ಸುಪ್ರೀಂ ಕೋರ್ಟ್‌ನಿಂದ ವಿಚ್ಛೇದನ ಮಂಜೂರು

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೆ ಸುಪ್ರೀಂ ಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ. ಪತ್ನಿ ಪಾಯಲ್ ಅಬ್ದುಲ್ಲಾ ಅವರೊಂದಿಗೆ ಮಧ್ಯಸ್ಥಿಕೆ ಮೂಲಕ ಎಲ್ಲ ವಿವಾದಗಳು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಯಿತು. 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿಯ ವೈವಾಹಿಕ ಸಂಬಂಧಕ್ಕೆ ಇದೀಗ ಕಾನೂನುಬದ್ಧ ಅಂತ್ಯ ದೊರೆತಿದೆ.

ಜಮ್ಮು - ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ (Jammu & Kashmir) ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (CM Omar Abdullah) ಅವರಿಗೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ವಿಚ್ಛೇದನ (Divorce) ಮಂಜೂರು ಮಾಡಿದೆ. ಪತ್ನಿ ಪಾಯಲ್ ಅಬ್ದುಲ್ಲಾ (Payal Abdullah) ಅವರೊಂದಿಗೆ ಮಧ್ಯಸ್ಥಿಕೆ ಮೂಲಕ ಎಲ್ಲ ವಿವಾದಗಳು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ ಬಳಿಕ, ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

ಒಮರ್ ಅಬ್ದುಲ್ಲಾ ಪರ ಹಿರಿಯ ವಕೀಲ ಕಪಿಲ್ ಸಿಬಲ್, "ಇಬ್ಬರ ನಡುವಿನ ಎಲ್ಲ ವಿವಾದಗಳು ಸೌಹಾರ್ದಯುತವಾಗಿ ಬಗೆಹರಿದಿವೆ. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ ತಮ್ಮ ಜೀವನವನ್ನು ಸ್ವತಂತ್ರವಾಗಿ ಮುಂದುವರಿಸಲು ನಿರ್ಧರಿಸಿದ್ದಾರೆ. ವಿಚ್ಛೇದನ ಮಂಜೂರು ಮಾಡಬಹುದು. ಉಳಿದಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ" ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, "ಇದು ಒಳ್ಳೆಯ ಬೆಳವಣಿಗೆ. ಈ ಷರತ್ತುಗಳ ಆಧಾರದ ಮೇಲೆ ಪ್ರಕರಣವನ್ನು ವಿಲೇವಾರಿ ಮಾಡುತ್ತೇವೆ" ಎಂದು ಹೇಳಿ ಮೇಲ್ಮನವಿಯನ್ನು ಅಂತ್ಯಗೊಳಿಸಿತು.

15 ವರ್ಷಗಳಿಂದ ಪ್ರತ್ಯೇಕ ಜೀವನ

ಈ ಹಿಂದೆ 2024ರ ಜುಲೈನಲ್ಲಿ ಒಮರ್ ಅಬ್ದುಲ್ಲಾ, ತಾವು ಮತ್ತು ಪಾಯಲ್ ಅಬ್ದುಲ್ಲಾ ಕಳೆದ 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ವೈವಾಹಿಕ ಜೀವನ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ವಿವಾಹವನ್ನು ರದ್ದುಪಡಿಸಲು ಸಂವಿಧಾನದ 142ನೇ ವಿಧಿ ಅಡಿಯಲ್ಲಿ ವಿಶೇಷ ಅಧಿಕಾರ ಬಳಸುವಂತೆ ಕೋರಿದ್ದರು.

ಜಮ್ಮು-ಕಾಶ್ಮೀರದಲ್ಲಿ ನೆಲ ಬಾಂಬ್‌ ಸ್ಫೋಟ; ಇಬ್ಬರು ಯೋಧರಿಗೆ ಗಾಯ

ಒಮರ್ ಅಬ್ದುಲ್ಲಾ ಮತ್ತು ಪಾಯಲ್ ಅಬ್ದುಲ್ಲಾ ಅವರು 1994ರ ಸೆಪ್ಟೆಂಬರ್ 1ರಂದು ವಿವಾಹವಾಗಿದ್ದು, 2009ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರರಿದ್ದಾರೆ.

ದೆಹಲಿ ಹೈಕೋರ್ಟ್‌ನಲ್ಲಿ ಸೋಲು

ಪತ್ನಿಯಿಂದ ಕ್ರೌರ್ಯ (Cruelty) ನಡೆದಿದೆ ಎಂಬ ಆಧಾರದ ಮೇಲೆ ವಿಚ್ಛೇದನ ಕೋರಿ ಒಮರ್ ಅಬ್ದುಲ್ಲಾ ಸಲ್ಲಿಸಿದ್ದ ಅರ್ಜಿಯನ್ನು 2023ರ ಡಿಸೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಅದಕ್ಕೂ ಮೊದಲು 2016ರಲ್ಲಿ ಕುಟುಂಬ ನ್ಯಾಯಾಲಯವೂ, ಕ್ರೌರ್ಯ ಅಥವಾ ಪರಿತ್ಯಾಗದ ಆರೋಪಗಳನ್ನು ಸಮರ್ಪಕವಾಗಿ ಸಾಬೀತುಪಡಿಸಲಾಗಿಲ್ಲ ಎಂದು ಹೇಳಿ ವಿಚ್ಛೇದನ ನೀಡಲು ನಿರಾಕರಿಸಿತ್ತು. ನಂತರ ಹೈಕೋರ್ಟ್ ಕೂಡ ಕುಟುಂಬ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಒಮರ್ ಅಬ್ದುಲ್ಲಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಯುತ್ತಿರುವ ವೇಳೆ ಮಧ್ಯಸ್ಥಿಕೆ ಮೂಲಕ ಇಬ್ಬರ ನಡುವೆ ಒಪ್ಪಂದ ಸಾಧ್ಯವಾಗಿದ್ದು, ಅದರ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಈಗ ವಿಚ್ಛೇದನಕ್ಕೆ ಅನುಮತಿ ನೀಡಿದೆ. ಒಮರ್ ಮತ್ತು ಪಾಯಲ್ ಅಬ್ದುಲ್ಲಾ ತಮ್ಮ ಇಬ್ಬರು ಪುತ್ರರ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ಜಂಟಿಯಾಗಿ ನಿರ್ವಹಿಸುತ್ತಿದ್ದಾರೆ.