ಗುವಾಹಟಿ: ಅಸ್ಸಾಂನ ಗುವಾಹಟಿ ಸಮೀಪ ಇಂದು ಮುಂಜಾನೆ ಭೀಕರ ರೈಲು ಅಪಘಾತ ಸಂಭವಿಸಿದೆ. ಮಿಜೋರಾಂನಿಂದ ಕೊಲ್ಕತ್ತಾ ಕಡೆಗೆ ಸಂಚರಿಸುತ್ತಿದ್ದ ಕೊಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್ (Kolkata-Sairang Express) ರೈಲು ಹಳಿ ತಪ್ಪಿದ್ದು, ಇಂಜಿನ್ ಸೇರಿದಂತೆ ಕನಿಷ್ಠ ಆರು ಬೋಗಿಗಳು ಉರುಳಿಬಿದ್ದಿವೆ. ಅಪಘಾತದ ತೀವ್ರತೆಗೆ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇಂದು ಮುಂಜಾನೆ ಸುಮಾರು 6:54 ರ ವೇಳೆಗೆ ಗುವಾಹಟಿ ಬಳಿಯ ದಿಗಾರು ರೈಲ್ವೆ ನಿಲ್ದಾಣದ ಸಮೀಪ ಈ ದುರ್ಘಟನೆ ನಡೆದಿದೆ. ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಅದೇ ಮಾರ್ಗದಲ್ಲಿ ಬರುತ್ತಿದ್ದ ಮತ್ತೊಂದು ರೈಲಿಗೆ ದಾರಿ ಮಾಡಿಕೊಡಲು (ಕ್ರಾಸಿಂಗ್) ಈ ರೈಲು ಯತ್ನಿಸಿತ್ತು. ಈ ಸಂದರ್ಭದಲ್ಲಿ ರೈಲಿನ ವೇಗವನ್ನು ನಿಯಂತ್ರಿಸಲು ಲೋಕೋ ಪೈಲಟ್‌ಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂಜಿನ್ ಹಾಗೂ ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಈಶಾನ್ಯ ಗಡಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಕಪಿಂಜಲ್ ಕಿಶೋರ್ ಶರ್ಮಾ, "ಅಪಘಾತದ ಸುದ್ದಿ ತಿಳಿಯುತ್ತಿದ್ಧಂತೇ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ರೈಲು ಬೋಗಿಗಳು ಹಳಿ ತಪ್ಪಲು ಏನು ಕಾರಣ ಎಂಬುದನ್ನು ತನಿಖೆ ಮಾಡಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆ ನಡೆದ ತಕ್ಷಣವೇ ರೈಲ್ವೆ ಹಿರಿಯ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ರೈಲಿನಲ್ಲಿದ್ದ ಇತರ ಸುರಕ್ಷಿತ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ತಲುಪಿಸಲು ರೈಲ್ವೆ ಇಲಾಖೆಯು ಪರ್ಯಾಯ ರೈಲಿನ ವ್ಯವಸ್ಥೆ ಮಾಡಿದೆ. ಸದ್ಯ ಹಳಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.
ಹೈಸ್ಪೀಡ್ ರೈಲು ಅಪಘಾತದಲ್ಲಿ 68 ಮಂದಿ ಸಾವು: ಹೊತ್ತಿ ಉರಿದ ಸ್ಪೇನ್, ಸರ್ಕಾರದ ವಿರುದ್ಧ ಬೀದಿಗಿಳಿದ ಜನ
ಇತ್ತೀಚೆಗೆ ಭಾರತೀಯ ರೈಲ್ವೇಯ ಗೂಡ್ಸ್ ರೈಲು ಬಿಲಾಸಪುರದಲ್ಲಿ ಹಳಿ ತಪ್ಪಿ ಅಪಘಾತಕ್ಕೀಡಾಗಿತ್ತು. ಗೂಡ್ಸ್ ರೈಲು ಚಲಿಸುತ್ತಿದ್ದಂತೆ ಮೂರು ಬೋಗಿಗಳು ಹಳಿ ತಪ್ಪಿ ಅಪಘಾತ ಸಂಭವಿಸಿದೆ. ಪರಿಣಾಮ ರೈಲು ಹಳಿ, ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಗೆ ಹಾನಿಯಾಗದ ಘಟನೆ ಚತ್ತೀಸಗಢದ ಬಿಲಾಸಪುರ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಠವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.