ನವದೆಹಲಿ: ಹಿಂದೆಂದೂ ನೋಡಿರದ ಭಾರತದ (India) ಅಪರೂಪದ ವಿಡಿಯೊವನ್ನು (Space video) ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Indian astronaut Shubhanshu Shukla ) ಅವರು ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station) ಇತ್ತೀಚೆಗೆ ಹೋಗಿ ಬಂದಿರುವ ಅವರು ಈ ವೇಳೆ ಸೆರೆ ಹಿಡಿದಿರುವ ಭಾರತದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಜೀವನದ ಜೊತೆಗೆ ವಿಶಿಷ್ಟ ದೃಷ್ಟಿಕೋನವನ್ನು ತೋರುವ ನೈಸರ್ಗಿಕ ಅದ್ಭುತಗಳನ್ನು ಒಳಗೊಂಡಿರುವ ವಿಡಿಯೊವನ್ನು ಶುಕ್ಲಾ ಹಂಚಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಶುಕ್ಲಾ, ಕಕ್ಷೆಯಲ್ಲಿ ನಾನು ಪ್ರಯಾಣಿಸುತ್ತಿದ್ದಾಗ ಎಲ್ಲರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವಂತೆ ಚಿತ್ರಗಳು ಮತ್ತು ವಿಡಿಯೊಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.
ಭಾರತ ಮತ್ತು ಶ್ರೀಲಂಕಾವನ್ನು ದಾಟಿ ಹಿಂದೂ ಮಹಾಸಾಗರದಾದ್ಯಂತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾನ ಹೋಗುತ್ತಿರುವ ದೃಶ್ಯಗಳೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ದೇಶದ ಪೂರ್ವ ಕರಾವಳಿಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಚಲಿಸುವಾಗ ಆಕಾಶದಲ್ಲಿ ನೇರಳೆ ಬಣ್ಣದ ಹೊಳಪನ್ನು ಕಾಣಬಹುದು. ಇದರಲ್ಲಿ ಭಾರತದಾದ್ಯಂತ ಬಿರುಗಾಳಿ, ಮಿಂಚುಗಳು ಕೂಡ ಕಂಡು ಬಂದಿವೆ.
ಮಳೆಗಾಲದ ಕಾರಣದಿಂದಾಗಿ ಹೆಚ್ಚಾಗಿ ಮೋಡ ಕವಿದಿತ್ತು. ಆದರೂ ನಾನು ಭಾರತದ ಕೆಲವು ಚಿತ್ರಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದೇನೆ. ಆ ಕ್ಷಣ ವೀಕ್ಷಕರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಳಗೆ ಕುಳಿತು ಕಿಟಕಿಯಲ್ಲಿ ವೀಕ್ಷಿಸಿದಂತೆ ಕಾಣುತ್ತದೆ.
ಈ ವಿಡಿಯೊ ಈಗಾಗಲೇ ಸಾಮಾಜಿಕ ವೇದಿಕೆಗಳಲ್ಲಿ ಭಾರಿ ವೈರಲ್ ಆಗಿದೆ. ಅನೇಕರು ಇದು ಬಾಹ್ಯಾಕಾಶದಿಂದ ಭಾರತಕ್ಕೆ ವೈಜ್ಞಾನಿಕ ಮತ್ತು ಭಾವನಾತ್ಮಕ ಗೌರವ ಎಂದು ಶ್ಲಾಘಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತ ತನ್ನ ಪಾತ್ರವನ್ನು ರೂಪಿಸುತ್ತಲೇ ಇರುವುದರಿಂದ, ಶುಕ್ಲಾ ಅವರ ಚಿತ್ರಣವು ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವ ಕುತೂಹಲವು ಹೇಗೆ ಸಂಯೋಜಿಸಿ ಸಾಮೂಹಿಕ ಅದ್ಭುತದ ಕ್ಷಣಗಳನ್ನು ಸೃಷ್ಟಿಸಬಹುದು ಎಂಬುದನ್ನು ತೋರಿಸಿದೆ.
ಇದನ್ನೂ ಓದಿ: KSRTC Bus: ಗೌರಿ- ಗಣೇಶ ಹಬ್ಬಕ್ಕೆ ಬೆಂಗಳೂರಿನಿಂದ ರಾಜ್ಯ, ಹೊರ ರಾಜ್ಯಗಳಿಗೆ 1500 ಹೆಚ್ಚುವರಿ ಬಸ್
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಶುಕ್ಲಾ, ನಾನು ಬಾಹ್ಯಾಕಾಶದಿಂದ ಮಕ್ಕಳೊಂದಿಗೆ ಮಾತನಾಡಿದಾಗ ಅವರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಉತ್ಸಾಹವು ಸ್ಪಷ್ಟವಾಗಿತ್ತು. ನಾನು ಗಗನಯಾತ್ರಿಯಾಗುವುದು ಹೇಗೆ? ಎಂದು ಕೇಳುವ ಒಬ್ಬ ಮಗು ಯಾವಾಗಲೂ ಇರುತ್ತಿತ್ತು. ಅದು ದೊಡ್ಡ ಗೆಲುವು. ಇಸ್ರೋ ಸಿದ್ಧವಾಗಿದೆ,; ಭಾರತ ಈ ಕನಸನ್ನು ನನಸಾಗಿಸಲು ಸಿದ್ಧವಾಗಿದೆ ಎಂದರು.