ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ; ಸದ್ದಿಲ್ಲದೆ ಪಶ್ಚಿಮ ಬಂಗಾಳದಿಂದ ಕಾಲ್ಕಿಳುತ್ತಿದ್ದಾರೆ ಬಾಂಗ್ಲಾದೇಶದ ಅಕ್ರಮ ವಲಸಿಗರು
SIR: ಚುನಾವಣಾ ಆಯೋಗವು ದೇಶಾದ್ಯಂತ ಜಾರಿಗೊಳಿಸಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ಬಾಂಗ್ಲಾದೇಶಿಯರ ಅಕ್ರಮ ವಲಸೆಗೆ ತಡೆಯೊಡ್ಡುತ್ತಿದೆ. ಎಸ್‌ಐಆರ್‌ಗೆ ಹೆದರಿ ನೂರಾರು ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪನಗರ ಬಳಿಯ ಹಕೀಂಪುರ ಚೆಕ್‌ಪೋಸ್ಟ್ ಮೂಲಕ ತಾಯ್ನಾಡಿಗೆ ಮರಳುತ್ತಿದ್ದಾರೆ.
ಬಿಎಸ್ಎಫ್ (ಸಾಂದರ್ಭಿಕ ಚಿತ್ರ). -
ಕೋಲ್ಕತ್ತಾ, ನ. 20: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಗೆ ಹೆದರಿ ತಾಯ್ನಾಡಿಗೆ ತೆರಳುತ್ತಿದ್ದ ಮಕ್ಕಳು, ಮಹಿಳೆಯರು ಸೇರಿ ನೂರಾರು ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪನಗರ ಬಳಿಯ ಹಕೀಂಪುರ ಚೆಕ್‌ಪೋಸ್ಟ್‌ನಲ್ಲಿ ಬಿಎಸ್‌ಎಫ್ (BSF) ಪಡೆಯ ಸಿಬ್ಬಂದಿ ತಡೆದು ನಿಲ್ಲಿಸಿದರು. ಸೂಕ್ತ ದಾಖಲೆಗಳಿಲ್ಲದ ಇವರು ಗಡಿ ದಾಟಲು ಯತ್ನಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಗಡಿಯ ನದಿ ತೀರದಲ್ಲಿ ನಿಗಾ ಇಟ್ಟಿದ್ದ ಬಿಎಸ್‌ಎಫ್‌ನ 143ನೇ ಬೆಟಾಲಿಯನ್ ಸಿಬ್ಬಂದಿ ಇವರ ಚಲನವಲನಗಳನ್ನು ಪತ್ತೆಹಚ್ಚಿ, ವಿಚಾರಣೆಗಾಗಿ ಗುಂಪನ್ನು ವಶಕ್ಕೆ ಪಡೆದರು. ಈ ವರ್ಷ ಬಂಧಿಸಲಾದ ದಾಖಲೆರಹಿತ ಬಾಂಗ್ಲಾದೇಶಿಗಳ ಅತಿದೊಡ್ಡ ಗುಂಪು ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಸ್‌ಐಆರ್ ಘೋಷಣೆಯ ಬಳಿಕ ಉತ್ತರ 24 ಪರಗಣದ ಸರಂಧ್ರ ಗಡಿಯ ಮೂಲಕ ಹಿಮ್ಮುಖ ವಲಸೆಯ ಪ್ರಕರಣದಲ್ಲಿ ಗಮನಾರ್ಹ ಹೆಚ್ಚಳ ಕಂಡುಬರುತ್ತಿದೆ ಎನ್ನುವ ವರದಿಯ ಬೆನ್ನಲ್ಲೇ ಈ ಘಟನೆ ನಡೆದಿದೆ. ಹಕೀಂಪುರ ಗಡಿಯಲ್ಲಿ ಅಧಿಕಾರಿಗಳು ತಡೆದು ನಿಲ್ಲಿಸಿರುವ ಬಾಂಗ್ಲಾದೇಶಿಗಳ ಸಂಖ್ಯೆ 500ಕ್ಕಿಂತ ಹೆಚ್ಚು ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ (ನವೆಂಬರ್ 17) ರಾತ್ರಿಯಿಂದ ಗಡಿ ರೇಖೆಯ ಬಳಿ ಬೀಡುಬಿಟ್ಟಿರುವ ಬಂಧಿತರು, ಕಂಬಳಿಗಳು ಮತ್ತು ಅಗತ್ಯ ವಸ್ತುಗಳನ್ನು ಹೊತ್ತುಕೊಂಡು, ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ, ಸೂಕ್ತ ದಾಖಲೆಗಳಿಲ್ಲದೆ ಕೋಲ್ಕತ್ತಾದ ವಿವಿಧೆಡೆ ವಾಸಿಸುತ್ತಿದ್ದುದಾಗಿ ಹೇಳಿದ್ದಾರೆ. ಯಾರ ಬಳಿಯೂ ಪಾಸ್‌ಪೋರ್ಟ್, ವೀಸಾ ಅಥವಾ ಗುರುತಿನ ಚೀಟಿ ಇರಲಿಲ್ಲ ಎಂದು ಬಿಎಸ್‌ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲವು ವರ್ಷಗಳಿಂದ ವಾಸ
ಇವರು ಪಶ್ಚಿಮ ಬಂಗಾಳದ ಬಿರಾಟಿ, ಮಧ್ಯಮಗ್ರಾಮ್, ರಾಜರ್ಹತ್, ನ್ಯೂ ಟೌನ್ ಮತ್ತು ಸಾಲ್ಟ್ ಲೇಕ್‌ಗಳಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ವಾಸಿಸುತ್ತಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಪೈಕಿ ಬಹುತೇಕರು ಮನೆಕೆಲಸಗಾರರು, ದಿನಗೂಲಿ ಕಾರ್ಮಿಕರು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರು. ಈ ತಿಂಗಳ ಆರಂಭದಲ್ಲಿ, ಹಕೀಂಪುರ ಬಳಿಯ ತರಲಿ ಗಡಿಯ ಮೂಲಕ ಪಲಾಯನ ಮಾಡಲು ಯತ್ನಿಸುತ್ತಿದ್ದ 94 ಬಾಂಗ್ಲಾದೇಶಿಗಳನ್ನು ಬಿಎಸ್‌ಎಫ್ ತಡೆದಿತ್ತು.
ಮಾಧ್ಯಮಗಳ ಜತೆ ಮಾತನಾಡಿದ ಬಂಧಿತರು, ಎಸ್‌ಐಆರ್ ಅಡಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿರುವುದು ಭಯವನ್ನು ಹುಟ್ಟು ಹಾಕಿದೆ ಎಂದಿದ್ದಾರೆ. "ನಾನು 1 ದಶಕಕ್ಕೂ ಹೆಚ್ಚು ಕಾಲ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ನನ್ನ ಬಳಿ ಯಾವುದೇ ದಾಖಲೆಗಳಿಲ್ಲ. ಈಗ ನಾನು ಹುಟ್ಟೂರಾದ ಬಾಂಗ್ಲಾದೇಶದ ಸತ್ಖಿರಾಗೆ ಮರಳಲು ತೀರ್ಮಾನಿಸಿದ್ದೇನೆ" ಎಂದು ತಕ್ಲಿಮಾ ಖತುನ್ ಹೇಳಿದ್ದಾರೆ.
ತಾಯ್ನಾಡಿಗೆ ತೆರಳುತ್ತಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರು:
Bangladeshis leaving West Bengal because of SIR and quite a few arrests by the BSF.
— Abhijit Majumder (@abhijitmajumder) November 16, 2025
Swarupnagar residents are filming these videos. pic.twitter.com/Lk3BEhAGuh
ಅಕ್ರಮ ವಲಸಿಗರನ್ನು ಬಂಧಿಸಿದ ನಂತರ ಅವರ ಗುರುತನ್ನು ಪರಿಶೀಲಿಸಲಾಗುತ್ತಿದೆ ಎಂದು ಬಿಎಸ್ಎಫ್ ಸಿಬ್ಬಂದಿ ತಿಳಿಸಿದ್ದಾರೆ. ಬಾಂಗ್ಲಾದೇಶದ ಅಧಿಕಾರಿಗಳನ್ನು ಸಂಪರ್ಕಿಸುವ ಮುನ್ನ ವಲಸಿಗರ ಬೆರಳಚ್ಚು ಮತ್ತು ಫೋಟೊಗಳನ್ನು ಒಳಗೊಂಡಂತೆ ಅಗತ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಶೇಖ್ ಹಸೀನಾ ಗಡಿಪಾರು ಮಾಡಲು ಇಂಟರ್‌ಪೋಲ್ ಸಹಾಯ ಕೇಳಲು ಮುಂದಾದ ಬಾಂಗ್ಲಾ
ಏನಿದು ಎಸ್‌ಐಆರ್?
ಯಾವುದೇ ಅರ್ಹ ನಾಗರಿಕರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಯಾವುದೇ ಅನರ್ಹ ವ್ಯಕ್ತಿಯನ್ನು ಸೇರಿಸದಂತೆ ನೋಡಿಕೊಳ್ಳುವುದು ಎಸ್‌ಐಆರ್‌ನ ಉದ್ದೇಶ. ಮನೆ-ಮನೆಗೆ ತೆರಳಿ ಗಣತಿ ಮಾಡುವ ಮೂಲಕ ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.