ಇಂದೋರ್ ಕಲುಷಿತ ನೀರು ಪ್ರಕರಣ; 10 ವರ್ಷಗಳ ಹರಕೆಯ ನಂತರ ಹುಟ್ಟಿದ ಮಗು ಕಳೆದುಕೊಂಡ ತಾಯಿಯ ರೋಧನೆ
ಮಧ್ಯ ಪ್ರದೇಶದ ಇಂದೋರ್‌ನ ಭಗೀರಥಪುರ ಪ್ರದೇಶದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಸೇರಿದ ಪರಿಣಾಮ 6 ತಿಂಗಳ ಹಸುಗೂಸು ಮೃತಪಟ್ಟಿದೆ. ಈ ದುರ್ಘಟನೆಯ ಬಳಿಕ ನಗರಪಾಲಿಕೆಯ ನಿರಂತರ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಭೋಪಾಲ್, ಜ. 1: ಮಧ್ಯ ಪ್ರದೇಶ (Madhya Pradesh)ದ ಇಂದೋರ್(Indore)ನ ಭಗೀರಥಪುರ (Bhagirathpura) ಪ್ರದೇಶದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿ ಜನರ ಜೀವಕ್ಕೆ ಕಂಟಕವಾಗಿ ಬದಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ತಿಂಗಳ ಹಸುಗೂಸೊಂದು ಬಲಿಯಾಗಿದೆ. ಈ ದುರಂತದ ಬಳಿಕ ನಗರಪಾಲಿಕೆ ನಿರಂತರ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಮಗುವಿನ ತಾಯಿ ಸಾಧನಾ ಸಾಹು ಅವರ ಪ್ರಕಾರ, "ಹಾಲಿಗೆ ಮನೆಯ ನೀರನ್ನು ಮಿಶ್ರಣ ಮಾಡಿ ಮಗುವಿಗೆ ಕುಡಿಸಿದ ಬಳಿಕ ತೀವ್ರ ವಾಂತಿ, ಅತಿಸಾರ ಕಾಣಿಸಿಕೊಂಡಿತು. ಕೂಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ವೈದ್ಯರು ಈಗಾಗಲೇ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದರು" ಎಂಬುದುದಾಗಿ ವಿವರಿಸಿದ್ದಾರೆ.
“ನನ್ನ ಮಗು ನಮ್ಮಿಂದ ದೂರವಾಗಿದೆ… ಇನ್ನೆಷ್ಟು ಅಮಾಯಕರ ಜೀವ ಕಳೆದುಕೊಳ್ಳುತ್ತಾರೋ ಗೊತ್ತಿಲ್ಲ. 10 ವರ್ಷಗಳ ಪ್ರಾರ್ಥನೆಯ ನಂತರ ಈ ಮಗು ಹುಟ್ಟಿತ್ತು" ಎಂದು ಸಾಧನಾ ಕಣ್ಣೀರಿಟ್ಟಿದ್ದಾರೆ.
ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟ ಮಗು:
#WATCH | Indore, Madhya Pradesh: On his son fell ill allegedly after consuming contaminated water, Sunil Sahu, father of the child, says, "He had diarrhoea and fever. We took him to the doctor. The doctor gave him medicine. We brought him home. Suddenly, at night, he developed a… pic.twitter.com/iM0e5FFttP
— ANI (@ANI) January 1, 2026
ಇದೀಗ ಸಾಧನಾ ಸಾಹು ಅವರ 10 ವರ್ಷದ ಮಗಳಿಗೂ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಇದಕ್ಕೂ ಕಲುಷಿತ ನೀರೇ ಕಾರಣವೆಂದು ಕುಟುಂಬಸ್ಥರು ಶಂಕಿಸಿದ್ದಾರೆ. ಡಿಸೆಂಬರ್ 25ರಂದು ನಗರಪಾಲಿಕೆ ಸರಬರಾಜು ಮಾಡಿದ ನೀರಿನಲ್ಲಿ ದುರ್ವಾಸನೆ ಹಾಗೂ ಅಸಹಜ ರುಚಿ ಇರುವುದಾಗಿ ನಿವಾಸಿಗಳು ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಕಲುಷಿತ ನೀರು ಕುಡಿದು 8 ಮಂದಿ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ. ಅಲ್ಲದೇ ವೃದ್ಧರು, ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 149 ಮಂದಿ ಈ ನೀರಿನಿಂದಾಗಿ ಅಸ್ವಸ್ಥಗೊಂಡಿದ್ದು, ನಗರದಲ್ಲಿನ 27 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ.
ದಟ್ಟ ಮಂಜಿನಲ್ಲಿ ಕಾರಿನ ಬಾನೆಟ್ ಮೇಲೆ ಕುಳಿತು ದಾರಿ ತೋರಿಸಿದ ಯುವಕ
ಈ ಕಲುಷಿತ ನೀರಿನ ಬಗ್ಗ ಎಷ್ಟೇ ದೂರು ನೀಡಿದರೂ ಇಂದೋರ್ ಮಹಾನಗರ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮೋಹನ್ ಯಾದವ್, “ಈ ಸಂಬಂಧ ಪಾಲಿಕೆಯ ವಲಯಾಧಿಕಾರಿ ಸಲಿಗ್ರಾಮ್ ಸಿಟೋಲೆ ಮತ್ತು ಸಹಾಯಕ ಎಂಜಿನಿಯರ್ ಯೋಗೇಶ್ ಜೋಷಿ ಅವರನ್ನು ಅಮಾನತು ಮಾಡಲಾಗಿದೆ. ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ (PHE) ವಿಭಾಗದ ಅಧೀಕ್ಷಕ ಎಂಜಿನಿಯರ್ ಶುಭಂ ಶ್ರೀವಾಸ್ತವ ಅವರನ್ನು ತಕ್ಷಣದಿಂದಲೇ ಕರ್ತವ್ಯದಿಂದ ವಜಾ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಅಲ್ಲದೇ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದು, ಎಲ್ಲ ರೋಗಿಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವುದಾಗಿ ಮೋಹನ್ ಯಾದವ್ ಭರವಸೆ ನೀಡಿದ್ದಾರೆ. ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿ ಕ್ಲೋರಿನೇಷನ್ ಕಾರ್ಯವನ್ನು ಕೈಗೊಂಡಿದ್ದು, ಕುಡಿಯುವ ನೀರಿನ ಪೂರೈಕೆಗೆ ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿದೆ.