ಲೇಹ್: ಲಡಾಖ್ (Ladakh)ಗೆ ರಾಜ್ಯ ಸ್ಥಾನಮಾನ(State status) ನೀಡಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನೆ ಸೆಪ್ಟೆಂಬರ್ 24ರಂದು ಹಿಂಸಾಚಾರಕ್ಕೆ (Violence) ತಿರುಗಿತ್ತು. ಈ ಬಳಿಕ ಸತತ ನಾಲ್ಕನೇ ದಿನವೂ ಲೇಹ್ (Leh)ನಲ್ಲಿ ಕರ್ಫ್ಯೂ ನಿರ್ಬಂಧಗಳನ್ನು ಮುಂದುವರಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam Wangchuk) ಪಾಕಿಸ್ತಾನದೊಂದಿಗೆ (Pakistan) ಸಂಪರ್ಕ ಹೊಂದಿದ್ದು, ಮಾತುಕತೆಗಳ ಹಳಿತಪ್ಪಿಸಲು ಪ್ರಯತ್ನಿಸಿದರು. ಹೀಗಾಗಿ ಅವರನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸುವುದು ಅಗತ್ಯವಾಗಿತ್ತು ಎಂದು ಡಿಜಿಪಿ ಎಸ್‌ಡಿ ಸಿಂಗ್ ಜಮ್ವಾಲ್ (DGP SD Singh Jamwal) ಹೇಳಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಮ್ ವಾಂಗ್‌ಚುಕ್ ಅವರ ಬಂಧನ ಅಗತ್ಯವಾಗಿತ್ತು. ಇದು ಶಾಂತಿಯನ್ನು ಪುನಃಸ್ಥಾಪಿಸಲು ಅಗತ್ಯದ ಹೆಜ್ಜೆ ಎಂದು ತಿಳಿಸಿದ್ದಾರೆ.
ಲಡಾಖ್ ಗುಂಪುಗಳು ಮತ್ತು ಕೇಂದ್ರದ ನಡುವೆ ನಡೆಯುತ್ತಿದ್ದ ಮಾತುಕತೆಗಳನ್ನು ವಾಂಗ್‌ಚುಕ್ ಮತ್ತು ಇತರ ಕಾರ್ಯಕರ್ತರು ಹಳಿತಪ್ಪಿಸಲು ಪ್ರಯತ್ನಿಸಿದರು. ವಾಂಗ್‌ಚುಕ್ ಪಾಕಿಸ್ತಾನ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಅವರು ತಿಳಿಸಿದರು.
ಸೆ. 24ರಂದು ಏನಾಯಿತು?
ಸೆಪ್ಟೆಂಬರ್ 24ರಂದು ಸುಮಾರು 7,000 ಜನರು ಕಟ್ಟಡಗಳು, ಪೊಲೀಸರು ಮತ್ತು ಅರೆಸೈನಿಕ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಸಿಆರ್‌ಪಿಎಫ್ ಜವಾನರನ್ನು ಥಳಿಸಿದರು. ಇದರಲ್ಲಿ ಒಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ. ಕಟ್ಟಡವನ್ನು ಸುಡಲು ಪ್ರಯತ್ನಿಸಿದ್ದು, ಆಗ ಮೂವರು ಮಹಿಳಾ ಸಿಬ್ಬಂದಿ ಒಳಗೆ ಇದ್ದರು ಎಂದು ಡಿಜಿಪಿ ಜಮ್ವಾಲ್ ತಿಳಿಸಿದ್ದಾರೆ.
ಸೋನಮ್ ವಾಂಗ್‌ಚುಕ್ ಮತ್ತು ಇತರರ ಹೇಳಿಕೆಗಳು ಮತ್ತು ಪ್ರಚೋದನಕಾರಿ ಭಾಷಣಗಳನ್ನು ದಾಖಲಿಸಿದ್ದು, ಇವರ ವಿರುದ್ಧ ಕೆಲವು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಗಲಭೆಯಲ್ಲಿ 17 ಸಿಆರ್‌ಪಿಎಫ್ ಮತ್ತು 15 ಲಡಾಖ್ ಪೊಲೀಸ್ ಸಿಬ್ಬಂದಿ ಸೇರಿದಂತೆ 80 ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ರೀತಿಯ ಹಿಂಸಾಚಾರವನ್ನು ಯಾರೂ ಊಹಿಸಿರಲಿಲ್ಲ. ಲಡಾಖ್ ಪೊಲೀಸರು ನಿಮ್ಮ ಭಾಗ. ಆದರೆ ಶಾಂತಿಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವ ಯಾರನ್ನೂ ನಾವು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.
ಸೋನಮ್ ವಾಂಗ್‌ಚುಕ್ ವಿರುದ್ಧ ಆರೋಪಗಳು
ಲಡಾಖ್ ಗುಂಪುಗಳು ಮತ್ತು ಕೇಂದ್ರದ ನಡುವೆ ರಾಜ್ಯತ್ವ ಮತ್ತು ಆರನೇ ವೇಳಾಪಟ್ಟಿಯ ಬೇಡಿಕೆಗಳ ಕುರಿತು ನಡೆಯುತ್ತಿರುವ ಮಾತುಕತೆಗಳ ಹಳಿತಪ್ಪಿಸಲು ಸೋನಮ್ ವಾಂಗ್‌ಚುಕ್ ಮತ್ತು ಇತರ ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ವಾಂಗ್‌ಚುಕ್ ಪ್ರಚೋದನೆಯು ಗಲಭೆಗೆ ಕಾರಣ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ 2010 ರ ಉಲ್ಲಂಘನೆ ಬಗ್ಗೆ ತನಿಖೆ ನಡೆಯುತ್ತಿದೆ. ವಾಂಗ್‌ಚುಕ್ ಅವರು ವರದಿ ಮಾಡುತ್ತಿದ್ದ ಪಾಕಿಸ್ತಾನ ಗುಪ್ತಚರ ಆಪರೇಟಿವ್ (PIO) ಒಬ್ಬನನ್ನು ಸಾಕ್ಷ್ಯದೊಂದಿಗೆ ಬಂಧಿಸಲಾಗಿದೆ.
ವಾಂಗ್‌ಚುಕ್ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು ಮತ್ತು ವಿದೇಶಿ ಹಣಕಾಸು ಸಂಪರ್ಕದ ಸಾಧ್ಯತೆಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಬಂಧನ
ಲೇಹ್ ಗಲಭೆಗೆ ಸಂಬಂಧಿಸಿ 5– 6 ಗುಂಪುಗಳ ನಾಯಕರು ಸೇರಿದಂತೆ 44 ಮಂದಿಯನ್ನು ಬಂಧಿಸಲಾಗಿದೆ. ನಮಗೆ ಮೊದಲೇ ಗುಪ್ತಚರ ಮಾಹಿತಿ ಇದ್ದುದರಿಂದ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಘರ್ಷಣೆಯ ಸಮಯದಲ್ಲಿ ಗುಂಡೇಟಿನಿಂದ ಗಾಯಗೊಂಡವರಲ್ಲಿ ಮೂವರು ನೇಪಾಳಿ ಪ್ರಜೆಗಳು ಸೇರಿದ್ದಾರೆ ಎಂದು ಅವರು ಹೇಳಿದರು.
ನಿರ್ಬಂಧ
ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾರ್ಗಿಲ್ ಸೇರಿದಂತೆ ಕೇಂದ್ರಾಡಳಿತ ಪ್ರದೇಶದ ಇತರ ಪ್ರಮುಖ ಪಟ್ಟಣಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ವಿವಿಧ ಕಾನೂನುಗಳ ಅಡಿಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ.
ಇದನ್ನೂ ಓದಿ: Sonam Wangchuk: ಸೋನಮ್ ವಾಂಗ್‌ಚುಕ್‌ಗೆ ಪಾಕ್ ಗುಪ್ತಚರ ಇಲಾಖೆ ನಂಟು! ಪೊಲೀಸ್ ಅಧಿಕಾರಿ ಹೇಳಿದ್ದೇನು?
ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳ ಗಸ್ತು ಮತ್ತು ತಪಾಸಣೆ ತೀವ್ರಗೊಳಿಸಲಾಗಿದೆ. ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಕೌನ್ಸಿಲರ್ ಸೇರಿದಂತೆ ಪರಾರಿಯಾಗಿರುವ ಗಲಭೆಕೋರರನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.