ನವದೆಹಲಿ: ಜೈಲಿನಲ್ಲಿರುವ ಕಾಕ್ರೋಚ್ ಜನತಾ ಪಕ್ಷದ (Cockroach Janta Party) ನಾಯಕರಾದ ಅಶುತೋಷ್ ರಂಕಾ (Ashutosh Ranka) ಮತ್ತು ಸೌರವ್ ದಾಸ್ (Saurav Das) ಅವರಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ (Abhijeet Dipke), ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥ (Election Commission of India chief ) ಜ್ಞಾನೇಶ್ ಕುಮಾರ್ (Gyanesh Kumar) ಮತ್ತು ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಾತ್ಕಾಲಿಕ ವಿರಾಮವನ್ನು ಘೋಷಿಸಿದರು. ಶಾಂತಿ, ಸಹಾನುಭೂತಿ ಮತ್ತು ಪ್ರೀತಿಯೇ ನಮ್ಮ ಚಳವಳಿಯ ನಿಜವಾದ ಶಕ್ತಿ. ಯಾರ ದ್ವೇಷಕ್ಕೂ ಬಲಿಯಾಗದಿರಿ ಎಂದು ಹೇಳಿದರು.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು 16 ನಿಮಿಷಗಳ ವಿಡಿಯೊ ಸಂದೇಶ ಪೋಸ್ಟ್ ಮಾಡಿರುವ ಅವರು, ಪ್ರತಿಭಟನೆಗಳಿಗೆ ಸದ್ಯ ತಾತ್ಕಾಲಿಕ ವಿರಾಮ ನೀಡಲಾಗಿದೆ. ಹಬ್ಬದ ದಿನಗಳಲ್ಲಿ ತಮ್ಮ ಆಪ್ತರೊಂದಿಗೆ ಸಮಯ ಕಳೆಯುವಂತೆ ಬೆಂಬಲಿಗರಿಗೆ ಮನವಿ ಮಾಡಿದ ಅವರು, ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರು ಚಳುವಳಿಯ ನಿಜವಾದ ನಾಯಕರು ಎಂದು ಕರೆದರು.
Tiger Shroff: ಟೈಗರ್ ಶ್ರಾಫ್ ಪ್ರಕರಣ: ಇಬ್ಬರು ಮಹಿಳೆಯರು ಸೇರಿದಂತೆ ಇನ್ನೂ ನಾಲ್ವರು ಬಂಧನ
ನೇಪಾಳ, ಬಾಂಗ್ಲಾದೇಶ ಮತ್ತು ಫ್ರಾನ್ಸ್ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ತಮ್ಮ ಪ್ರತಿಭಟನೆಯನ್ನು ಹೋಲಿಸಿದವರ ವಿರುದ್ಧ ವಾಗ್ದಾಳಿ ನಡೆಸಿದ ಅಭಿಜೀತ್ ದಿಪ್ಕೆ, ಚಳುವಳಿಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳನ್ನು ಖಂಡಿಸಿ, ಅವರ ರಾಜೀನಾಮೆಗೆ ಆಗ್ರಹಿಸಿ ಈ ಪ್ರತಿಭಟನೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಕಳೆದ ಅಕ್ಟೋಬರ್ 10ರಂದು ಸಿಜೆಪಿ ವತಿಯಿಂದ ಆಯೋಜಿಸಲಾದ ಪ್ರತಿಭಟನೆಯನ್ನು ತಡೆಯಲು ಜಂತರ್ ಮಂತರ್ನಲ್ಲಿ ಭಾರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಈ ವೇಳೆ ಅಭಿಜೀತ್ ದಿಪ್ಕೆ, ಸೌರವ್ ದಾಸ್, ಅಶುತೋಷ್ ರಂಕಾ ಸೇರಿದಂತೆ ಸಾವಿರಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಶಾಂತಿ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಸಿಜೆಪಿ ವಕ್ತಾರರಾದ ಸೌರವ್ ದಾಸ್, ಅಶುತೋಷ್ ರಂಕಾ ಅವರನ್ನು ಬಂಧಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದರ ಬಳಿಕ ವಿಡಿಯೊ ಸಂದೇಶ ಹಂಚಿಕೊಂಡ ಅಭಿಜೀತ್ ದಿಪ್ಕೆ ಅವರು, ಸೌರವ್ ದಾಸ್, ಅಶುತೋಷ್ ರಂಕಾ ಅವರ ಕುಟುಂಬದವರೊಂದಿಗೆ ತಾನು ಮಾತನಾಡಿದ್ದೇನೆ. ಸಿಜೆಪಿ ಬೆಂಬಲಿಗರು ಆತಂಕಪಡುವ ಅಗತ್ಯವಿಲ್ಲ. ಸೌರವ್ ಮತ್ತು ಆಶು ಅವರಿಗೆ ಪರಿಸ್ಥಿತಿ ಎಷ್ಟು ಕಷ್ಟಕರವಾಗಿದೆಯೋ, ನಿಮಗೂ ಅಷ್ಟೇ ಕಷ್ಟಕರವಾಗಿರುತ್ತದೆ ಎನ್ನುವ ಖಾತ್ರಿ ಇದೆ. ಬೀದಿಗಳಲ್ಲಿ ಅನೇಕ ಸ್ವಯಂಸೇವಕರು ಹಲ್ಲೆಗೊಳಗಾಗಿರುವುದನ್ನು ಮತ್ತು ಬಂಧನಕ್ಕೊಳಗಾಗಿರುವುದನ್ನು ನಾನು ನೋಡಿದ್ದೇನೆ. ನಮಗಿಂತ ನಮ್ಮ ಕುಟುಂಬಗಳಿಗೆ ಇದು ಹೆಚ್ಚು ಕಷ್ಟಕರವಾಗಿದೆ. ಆದ್ದರಿಂದ ಎಲ್ಲರೂ ದಯವಿಟ್ಟು ಕೆಲವು ದಿನಗಳ ಕಾಲ ನಿಮ್ಮ ಕುಟುಂಬದವರೊಂದಿಗೆ ಸಮಯ ಕಳೆಯಿರಿ ಎಂದು ತಿಳಿಸಿದರು.
ನಾವು ಈಗ ದ್ವೇಷದ ವಿರುದ್ಧ ಹೋರಾಡುತ್ತಿದ್ದೇವೆ. ಅದೇ ದ್ವೇಷ ನಮ್ಮೊಳಗೆ ಪ್ರವೇಶಿಸದಂತೆ ನಾವು ಎಚ್ಚರಿಕೆ ವಹಿಸಬೇಕು. ನಮ್ಮ ಅತಿದೊಡ್ಡ ಶಕ್ತಿಯೆಂದರೆ ನಮ್ಮ ಸಹಾನುಭೂತಿ, ಪರಸ್ಪರರ ಮೇಲಿರುವ ಪ್ರೀತಿ ಮತ್ತು ನಮ್ಮ ದಯೆ ಎಂದು ಅವರು ತಿಳಿಸಿದರು.
ಸೌರವ್ ದಾಸ್ ಮೃದು ಸ್ವಭಾವದವರು. ಇವತ್ತು ಅವರೇ ಜೈಲಿನಲ್ಲಿದ್ದಾರೆ. ನ್ಯಾಯಾಲಯದಲ್ಲಿ ಯಾವಾಗಲೂ ನಗುತ್ತಲೇ ಕಾಣಿಸಿಕೊಂಡರು. ಅವರಲ್ಲಿ ಯಾವುದೇ ಭಯವಿಲ್ಲ. ಈ ಚಳುವಳಿಯನ್ನು ನಿಜವಾಗಿಯೂ ರೂಪಿಸಿದವರು ಆಶು ಮತ್ತು ಸೌರವ್. ಅವರು ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ. ನಾನು ಕೇವಲ ಅವರ ಆದೇಶಗಳನ್ನು ಪಾಲಿಸುತ್ತಿದ್ದೆ ಅಷ್ಟೇ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವರ ಸೂಚನೆಗಳನ್ನು ಅನುಸರಿಸುವುದು ಮಾತ್ರ ನನ್ನ ಕೆಲಸವಾಗಿತ್ತು ಎಂದು ಅಭಿಜೀತ್ ದಿಪ್ಕೆ ತಿಳಿಸಿದರು.
ಭಾರತಕ್ಕೆ ಮಾರ್ಕೊ ರೂಬಿಯೊ ಭೇಟಿ: ಜೈಶಂಕರ್, ಯುಎಇ ವಿದೇಶಾಂಗ ಸಚಿವರೊಂದಿಗೆ ಸಭೆ
ಹೊರಗಿನವರಿಗೆ ನಾನು ನಾಯಕನಾಗಿ ಕಂಡಿರಬಹುದು. ಆದರೆ ನನಗೆ ಸೌರವ್ ಮತ್ತು ಆಶು ಅವರೇ ನಾಯಕರು. ಅವರ ಸಾಮರ್ಥ್ಯಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲಗಳು ನನಗಿಂತ ಉತ್ತಮವಾಗಿವೆ. ನಾನು ಅವರ ಬಗ್ಗೆ ಕಾಳಜಿ ವಹಿಸಿರುವುದರಿಂದ ಈಗ ಭಾವುಕನಾಗುತ್ತಿದ್ದೇನೆ, ಭಯದಿಂದಲ್ಲ. ಭಾವನೆಗಳೇ ನಮ್ಮ ಶಕ್ತಿ ಎಂದು ಹೇಳಿದರು.