ನವದೆಹಲಿ ಅ.13: ಚುನಾವಣಾ ಅಕ್ರಮಗಳು ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಹಲವಾರು ವಿರೋಧ ಪಕ್ಷದ ನಾಯಕರು ಸಲ್ಲಿಸಿದ್ದ ಜಂಟಿ ಅರ್ಜಿಯಲ್ಲಿ 14 ದೋಷಗಳಿವೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ನ್ಯಾಯಾಲಯದ ಶುಲ್ಕದಲ್ಲಿ 220 ರೂ. ಕೊರತೆಯಿರುವುದೂ ಈ ದೋಷಗಳಲ್ಲಿ ಸೇರಿದೆ. ಅರ್ಜಿಯಲ್ಲಿ ಕಂಡುಬಂದ ಇತರ ದೋಷಗಳೆಂದರೆ, ಒಂಬತ್ತು ಅರ್ಜಿದಾರರ ಅನುಮತಿ ಪತ್ರಗಳು ಇಲ್ಲದಿರುವುದು ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಗುರುತಿನ ಚೀಟಿಯ ಫೋಟೊಕಾಪಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.
ಚುನಾವಣಾ ಅಕ್ರಮಗಳ ಆರೋಪದ ಕುರಿತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕೇಂದ್ರ ದೆಹಲಿಯಲ್ಲಿ ಸಾವಿರಾರು ಜನರು ಜಮಾಯಿಸಿ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸುತ್ತಿದ್ದಂತೆ ಇಂದು (ಅ.13) ರಾಹುಲ್ ಗಾಂಧಿ ಅರ್ಜಿ ಸಲ್ಲಿಸಿದರು. ಇಂಡಿಯಾ ಮೈತ್ರಿಕೂಟದ ನಾಯಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರೆ, ಅವರ ಕಾನೂನು ತಂಡವು ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಮತ ಕಳ್ಳತನ ಆರೋಪದಡಿ ಅರ್ಜಿ ಸಲ್ಲಿಸಿತು.
ನ್ಯಾಯಾಲಯ ಉಲ್ಲೇಖಿಸಿರುವ ಆಕ್ಷೇಪಣೆಗಳಲ್ಲಿ, ವಕೀಲರಿಗೆ ಪ್ರಕರಣದ ಪರವಾಗಿ ಹಾಜರಾಗಲು ಅಧಿಕಾರ ನೀಡುವ ಲಿಖಿತ ದಾಖಲೆಗಳನ್ನು ಲಗತ್ತಿಸದಿರುವುದು, ಮಲ್ಲಿಕಾರ್ಜುನ ಖರ್ಗೆ ಅವರ ಗುರುತಿನ ಚೀಟಿಯ ಸ್ಪಷ್ಟ ಪ್ರತಿಯನ್ನು ಸಲ್ಲಿಸಬೇಕೆಂಬ ಸೂಚನೆ ಸೇರಿವೆ. ಕೆಲವು ದಾಖಲೆಗಳಲ್ಲಿನ ಅಕ್ಷರಗಳು ಮಸುಕಾಗಿರುವುದು, ಪುಟಗಳು ಕಾಣೆಯಾಗಿರುವುದು, ಪ್ರಾದೇಶಿಕ ಭಾಷೆಯಲ್ಲಿರುವ ಪುಟಗಳು ಹಾಗೂ ಕೆಲವು ಪುಟಗಳ ಸಂಖ್ಯಾಕ್ರಮದಲ್ಲಿನ ವ್ಯತ್ಯಾಸಗಳ ಬಗ್ಗೆಯೂ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಆಕ್ಷೇಪಣೆ ವ್ಯಕ್ತಪಡಿಸಿದೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್, ಅಖಿಲೇಶ್ ಯಾದವ್, ತೇಜಸ್ವಿ ಪ್ರಸಾದ್ ಯಾದವ್, ಸುಳೆ, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್, ಡಿ. ರಾಜಾ, ಜಾರ್ಖಂಡ್ ಮುಕ್ತಿ ಮೋರ್ಚಾದ ಮಹುವಾ ಮಾಝಿ, ಎಂಎ ಬೇಬಿ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಇಟಿ ಮೊಹಮ್ಮದ್ ಬಷೇರ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯಲ್ಲಿ ಚುನಾವಣಾ ಆಯೋಗ (ಇಸಿಐ), ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಅರ್ಜಿಯನ್ನು ಪಟ್ಟಿ ಮಾಡಬೇಕಾದರೆ, ಅರ್ಜಿದಾರರು ಇದೀಗ ಅದರಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕಾಗಿದೆ.
ಅರ್ಜಿಯಲ್ಲಿ ಏನು ಹೇಳಲಾಗಿದೆ?
ಅರ್ಜಿಯಲ್ಲಿ ಇಂಡಿಯಾ ಮೈತ್ರಿಕೂಟವು ಹತ್ತು ಬೇಡಿಕೆಗಳನ್ನು ಮುಂದಿಟ್ಟಿದೆ. ಅವುಗಳಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡುವುದು, ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವುದು, ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು, ಅರ್ಜಿದಾರರ ಕುಂದುಕೊರತೆಗಳನ್ನು ಪರಿಹರಿಸುವುದು ಹಾಗೂ ಸ್ವತಂತ್ರ ಸಮಿತಿಯಿಂದ ಲೆಕ್ಕಪರಿಶೋಧನೆ ನಡೆಸುವಂತೆ ಕೋರುವುದು ಸೇರಿದಂತೆ ಹಲವು ಬೇಡಿಕೆಗಳು ಸೇರಿವೆ.
ಕಾಂಗ್ರೆಸ್ ಕಾನೂನು ತಂಡವು ಹತ್ತು ರೀತಿಯ ಪರಿಹಾರಗಳನ್ನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ಸೋಮವಾರದ (ಅ.12) ಮೆರವಣಿಗೆಯಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು. ಅವರು ಸುಪ್ರೀಂ ಕೋರ್ಟ್ ಕಡೆಗೆ ತೆರಳುವ ಮೊದಲು ಕೇಂದ್ರ ದೆಹಲಿಯಲ್ಲಿ ಜಮಾಯಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಭೇಟಿಯಾಗಲು ವಿರೋಧ ಪಕ್ಷಗಳು ನಡೆಸಿದ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದರು.