Rahul Gandhi: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ತಡೆಯಾಜ್ಞೆ!
2018 ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಜಾರ್ಖಂಡ್ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸುಪ್ರೀಂ ಕೋರ್ಟ್ ರಾಹುಲ್ ವಿಚಾರಣೆಗೆ ಇಂದು(ಜ.20) ತಡೆಯಾಜ್ಞೆ ನೀಡಿದೆ
ನವದೆಹಲಿ: ಕೇಂದ್ರ ಗೃಹ ಸಚಿವ, ಬಿಜೆಪಿಯ ಮಾಜಿ ಅಧ್ಯಕ್ಷ ಅಮಿತ್ ಶಾ(Amit Shah) ಅವರನ್ನು ಕೊಲೆ ಆರೋಪಿ ಎಂದು ಕರೆದಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್(Supreme Court) ಸೋಮವಾರ(ಜ.20) ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಗಾಂಧಿ ಸಲ್ಲಿಸಿದ ಮನವಿ ಸಂಬಂಧ ಜಾರ್ಖಂಡ್ ಸರ್ಕಾರ ಮತ್ತು ದೂರುದಾರರ ಪ್ರತಿಕ್ರಿಯೆಯನ್ನು ಕೇಳಿತು.
#BREAKING The Supreme Court heard Lok Sabha Leader of Opposition Rahul Gandhi's challenge against the Jharkhand High Court's decision, which dismissed his plea to quash a defamation case filed by BJP worker Navin Jha. Gandhi was accused of calling Union Home Minister Amit Shah a… pic.twitter.com/WGlVD26tQq
— IANS (@ians_india) January 20, 2025
ಇಂದಿನ ವಿಚಾರಣೆಯ ಸಂದರ್ಭದಲ್ಲಿ, ರಾಹುಲ್ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಪ್ರಕರಣದಲ್ಲಿ ಮೂರನೇ ವ್ಯಕ್ತಿಯಿಂದ ದೂರು ದಾಖಲಿಸಲಾಗಿದೆ. ಮಾನನಷ್ಟ ಅಪರಾಧದ ವಿಷಯದಲ್ಲಿ ಈ ರೀತಿ ಮೂರನೇ ವ್ಯಕ್ತಿ ದೂರು ದಾಖಲಿಸುವುದನ್ನು ಅನುಮತಿಸಲಾಗದು ಎಂದು ವಾದ ಮಂಡಿಸಿದರು. "ನೀವು ಬಾಧಿತ ವ್ಯಕ್ತಿಯಲ್ಲದಿದ್ದರೆ, ನೀವು ಹೇಗೆ ಪ್ರಾಕ್ಸಿ ದೂರು ಸಲ್ಲಿಸಬಹುದು?" ಎಂದು ಸಿಂಘ್ವಿ ಪ್ರಶ್ನಿಸಿದರು.
ಅಂತಿಮವಾಗಿ ನ್ಯಾಯಾಲಯವು, "ಜಾರ್ಖಂಡ್ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ನೀಡಿ. ಮುಂದಿನ ಆದೇಶದವರೆಗೆ ವಿಚಾರಣೆಯಲ್ಲಿನ ಎಲ್ಲಾ ಪ್ರಕ್ರಿಯೆಗಳು ತಡೆಹಿಡಿಯಲ್ಪಡುತ್ತವೆ" ಎಂದು ಆದೇಶಿಸಿತು.
ಏನಿದು ಘಟನೆ?
ಜಾರ್ಖಂಡ್‌ನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಮಾರ್ಚ್ 18, 2018 ರಂದು ಬಿಜೆಪಿಯನ್ನು ಟೀಕಿಸುವ ಭಾಷಣವನ್ನು ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಭಾಷಣದ ವೇಳೆ ಅಂದಿನ ಗೃಹ ಸಚಿವ ಅಮಿತ್ ಶಾ ಅವರು ಕೊಲೆಯಲ್ಲಿ ಭಾಗಿಯಾಗಿದ್ದಾರೆ ರಾಹುಲ್ ಹೇಳಿದ್ದರು ಎಂದು ಬಿಜೆಪಿ ಮುಖಂಡ ನವೀನ್ ಝಾ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು.
ಈ ಸುದ್ದಿಯನ್ನೂ ಓದಿ:Vachanananda swamiji: ಪ್ರಯಾಗರಾಜ್ ಮಹಾ ಕುಂಭಮೇಳ: ಮಹಾ ಧಾರ್ಮಿಕ ಸಮ್ಮೇಳನ
ಆರಂಭದಲ್ಲಿ, ರಾಂಚಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಝಾ ಅವರ ದೂರನ್ನು ವಜಾಗೊಳಿಸಿತ್ತು. ಆದರೆ ಮುಂದೆ, ರಾಂಚಿಯ ನ್ಯಾಯಾಂಗ ಆಯುಕ್ತರು ಸೆಪ್ಟೆಂಬರ್ 15, 2018 ರಂದು ದೂರಿನ ಅರ್ಜಿಯನ್ನು ವಜಾಗೊಳಿಸಿದ ಆದೇಶವನ್ನು ರದ್ದುಗೊಳಿಸಿ ಹೊಸದಾಗಿ ಪರಿಶೀಲಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಿಂತಿರುಗಿಸಿತ್ತು.
ಮ್ಯಾಜಿಸ್ಟ್ರೇಟ್ ನವೆಂಬರ್ 28, 2018 ರಂದು ಹೊಸದಾಗಿ ಆದೇಶ ನೀಡಿ ರಾಹುಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 500 ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸಾಕಷ್ಟು ಪುರಾವೆಗಳಿವೆ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣವನ್ನು ಆಲಿಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅಂಬುಜ್ ನಾಥ್ ಅವರು, ಬಿಜೆಪಿ ನಾಯಕರು ಅಧಿಕಾರದ ಅಮಲಿನಲ್ಲಿರುವ ಸುಳ್ಳುಕೋರರು. ಬಿಜೆಪಿ ಕಾರ್ಯಕರ್ತರು ಕೊಲೆ ಆರೋಪಿಯನ್ನು ಸಹ ಅಧ್ಯಕ್ಷರನ್ನಾಗಿ ಸ್ವೀಕರಿಸುತ್ತಾರೆ ಎನ್ನುವ ಅರ್ಥ ರಾಹುಲ್ ಗಾಂಧಿಯವರ ಮಾತಿನಲ್ಲಿ ಧ್ವನಿಸುತ್ತದೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499ರ ಅಡಿಯಲ್ಲಿ ಗಾಂಧಿಯವರ ಈ ಹೇಳಿಕೆಗಳು ಮೇಲ್ನೋಟಕ್ಕೆ ಮಾನಹಾನಿಕರವಾಗಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಹೈಕೋರ್ಟ್‌ನ ಈ ಆದೇಶವನ್ನು ರಾಹುಲ್ ಗಾಂಧಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.