ನವದೆಹಲಿ: ಮಹಿಳೆಯ ಮುಟ್ಟಿನ ರಜೆ ನಿಯಮಗಳನ್ನು ರೂಪಿಸಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು (Supreme Court) ಸುಪ್ರೀಂ ಕೋರ್ಟ್ (Menstrual Leaves) ವಿಚಾರಣೆ ನಡೆಸಿತು. ಈ ವೇಳೆ ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ '(ಅವರ) ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು' ಏಕೆಂದರೆ ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ನೇಮಿಸಿಕೊಳ್ಳುವುದಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. ಇಂದು ಬೆಳಿಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು, ಇಂತಹ ಕಾನೂನು 'ದುಡಿಯುವ ಮಹಿಳೆಯರಲ್ಲಿ ಮಾನಸಿಕ ಭಯ ಅಥವಾ ಅನಿಸಿಕೆಯನ್ನು ಉಂಟುಮಾಡುತ್ತದೆ. ಅವರು ಪುರುಷರಿಗಿಂತ 'ಕಡಿಮೆ' ಎಂಬ ಭಾವನೆಯನ್ನು ಉಂಟುಮಾಡುತ್ತದೆ' ಎಂದು ಹೇಳಿದ್ದಾರೆ.
ಜಾಗೃತಿ ಮೂಡಿಸುವುದು ಮತ್ತು ಸಂವೇದನೆ ಮೂಡಿಸುವುದು ಬೇರೆ. ಆದರೆ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಕಾನೂನನ್ನು ನೀವು ತಂದ ತಕ್ಷಣ, ಯಾರೂ ಮಹಿಳೆಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಿಲ್ಲ. ನಿಮಗೆ ಉದ್ಯೋಗದಾತರ ಮನಸ್ಥಿತಿ ತಿಳಿದಿಲ್ಲ. ನಾವು ಅಂತಹ ಕಾನೂನನ್ನು ಮಾಡಿದರೆ ಅವರು ಮಹಿಳೆಯರನ್ನು ನೇಮಿಸಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿಗಳು ಅರ್ಜಿದಾರರಿಗೆ ಹೇಳಿದ್ದಾರೆ. ಒಮ್ಮೆ ಕಾನೂನು ಕಡ್ಡಾಯವಾದರೆ, ಖಾಸಗಿ ಸಂಸ್ಥೆಗಳಷ್ಟೇ ಅಲ್ಲ, ನ್ಯಾಯಾಂಗ ಅಥವಾ ಸರ್ಕಾರಿ ಕೆಲಸಗಳಲ್ಲೂ ಮಹಿಳೆಯರನ್ನು ತೆಗೆದುಕೊಳ್ಳಲು ಹಿಂದೇಟು ಹಾಕಬಹುದು. ಇದು ಅವರ ವೃತ್ತಿಜೀವನವನ್ನೇ ಅಂತ್ಯಗೊಳಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದರು.
2013 ರಲ್ಲಿ ಕೇರಳ ಸರ್ಕಾರವು ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮುಟ್ಟಿನ ರಜೆಯನ್ನು ಮಂಜೂರು ಮಾಡಿತ್ತು ಎಂದು ಹಿರಿಯ ವಕೀಲ ಎಂ.ಆರ್. ಶಂಶಾದ್ ವಾದ ಮಂಡಿಸಿದ್ದಾರೆ. ಖಾಸಗಿ ಕಂಪನಿಗಳು ಇದೇ ರೀತಿಯ ಸಡಿಲಿಕೆಗಳನ್ನು ಮಾಡಿವೆ ಎಂದು ಅವರು ಹೇಳಿದರು.
ಒಬಿಸಿ ಕೆನೆಪದರ ನಿರ್ಧಾರಕ್ಕೆ ಪೋಷಕರ ಆದಾಯವೊಂದೇ ಮಾನದಂಡವಲ್ಲ: ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನಿದೆ?
ನ್ಯಾಯಾಲಯ ಸ್ವಯಂಪ್ರೇರಿತ ನೀತಿಗಳನ್ನು ಸ್ವಾಗತಿಸಿತು, ಆದರೆ ಕಡ್ಡಾಯಗೊಳಿಸುವುದರ ವಿರುದ್ಧ ಎಚ್ಚರಿಕೆ ನೀಡಿತು. ‘ಸ್ವಯಂಪ್ರೇರಿತವಾಗಿ ನೀಡುವುದು ಅತ್ಯುತ್ತಮ. ಕಾನೂನಿನಲ್ಲಿ ಕಡ್ಡಾಯ ಎಂದು ಹೇಳಿದರೆ ಮಹಿಳೆಯರ ವೃತ್ತಿ ಮುಗಿಯುತ್ತದೆ’ ಎಂದು ಹೇಳಿತು. ಕೆಲಸದ ಸ್ಥಳದಲ್ಲಿ ಮಹಿಳೆಯರ ಬಗ್ಗೆ ಇರುವ ಗ್ರಹಿಕೆಗಳು ಮತ್ತು ಅವರ ವೃತ್ತಿ ಬೆಳವಣಿಗೆಯ ಮೇಲೆ ಇಂತಹ ಕ್ರಮಗಳ ಪರಿಣಾಮವನ್ನು ಪೀಠ ಎತ್ತಿ ತೋರಿಸಿತು.