ಒಬಿಸಿ ಕೆನೆಪದರ ನಿರ್ಧಾರಕ್ಕೆ ಪೋಷಕರ ಆದಾಯವೊಂದೇ ಮಾನದಂಡವಲ್ಲ: ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನಿದೆ?
Supreme Court: ಒಬಿಸಿ ಕೆನೆಪದರ ನಿರ್ಧರಿಸುವಾಗ ಕೇವಲ ಪೋಷಕರ ಆದಾಯವನ್ನು ಮಾತ್ರ ಮಾನದಂಡವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ) -
ದೆಹಲಿ, ಮಾ. 12: ಇತರ ಹಿಂದುಳಿದ ವರ್ಗಗಳ (OBC) ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ. ಕೆನೆಪದರ (Creamy Layer) ನಿರ್ಧರಿಸುವಾಗ ಕೇವಲ ಪೋಷಕರ ಆದಾಯವನ್ನು ಮಾತ್ರ ಮಾನದಂಡವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಸಾರ್ವಜನಿಕ ವಲಯದ ಉದ್ಯಮಗಳು (PSU) ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಮಕ್ಕಳನ್ನು ಸರ್ಕಾರಿ ನೌಕರರ ಮಕ್ಕಳಿಗಿಂತ ಭಿನ್ನವಾಗಿ ನೋಡುವುದು ಸರಿಯಲ್ಲ. ಇದು ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಭಾರತೀಯ ಒಕ್ಕೂಟವು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು, ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರೂ, ಕೆನೆಪದರ ವರ್ಗಕ್ಕೆ ತಪ್ಪಾಗಿ ಸೇರಿಸಲಾಗಿರುವುದರಿಂದ ನೇಮಕಾತಿ ನಿರಾಕರಿಸಲ್ಪಟ್ಟ ಹಲವು ಯುಪಿಎಸ್‌ಸಿ ಅಭ್ಯರ್ಥಿಗಳ ಪರ ತೀರ್ಪು ನೀಡಿತು.
ಅಭ್ಯರ್ಥಿಯು ಒಬಿಸಿ ಕೆನೆಪದರಕ್ಕೆ ಬರುತ್ತಾರೆಯೇ ಎಂದು ನಿರ್ಧರಿಸಲು ನಿಗದಿತ ಮಾನದಂಡಗಳನ್ನು ಅನ್ವಯಿಸುವ ಬದಲು ಅಧಿಕಾರಿಗಳು ಆದಾಯವನ್ನು ತಪ್ಪಾಗಿ ಪರುಗಣಿಸಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಾದ-ವಿವಾದ ಆಲಿಸಿದ ಬಳಿಕ "ಒಬ್ಬ ಅಭ್ಯರ್ಥಿಯು ಒಬಿಸಿ ಕೆನೆಪದರಕ್ಕೆ ಸೇರುತ್ತಾರೋ ಅಥವಾ ಇಲ್ಲವೋ ಎನ್ನುವುದನ್ನು ಕೇವಲ ಆದಾಯದ ಆಧಾರದ ಮೇಲೆ ನಿರ್ಧರಿಸಲಾಗುವುದಿಲ್ಲ" ಎಂದು ನ್ಯಾಯಮೂರ್ತಿ ಮಹಾದೇವನ್ ಹೇಳಿದರು.
ಏನಿದು ಪ್ರಕರಣ?
ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಒಬಿಸಿ ಮೀಸಲಾತಿ ಪಡೆಯಲು ಪ್ರಯತ್ನಿಸಿದ ಅಭ್ಯರ್ಥಿಗಳ ಅರ್ಹತೆಗೆ ಸಂಬಂಧಿಸಿದಂತೆ ಮದ್ರಾಸ್, ಕೇರಳ ಮತ್ತು ದೆಹಲಿ ಹೈಕೋರ್ಟ್‌ಗಳು ನೀಡಿದ್ದ ತೀರ್ಪುಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರ ಪೀಠವು ಈ ಆದೇಶ ನೀಡಿದೆ.
ಉಚಿತ ಕೊಡುಗೆ ನೀಡಿದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ!
ಕೆನೆಪದರ ಎಂದರೇನು?
ಅಷ್ಟಕ್ಕೂ ಕೆನೆಪದರ ಎಂದರೇನು? ಇದನ್ನು ಯಾಕಾಗಿ ಪರಿಚಯಿಸಲಾಗಿದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಇತರ ಹಿಂದುಳಿದ ಜಾತಿಗಳಿಗೆ ಮೀಸಲಾತಿಯಲ್ಲಿ ಮಿತಿಗಳನ್ನು ನಿಗದಿಪಡಿಸುವ ಉದ್ದೇಶದಿಂದ ಕೆನೆಪದರದ ಮಾನದಂಡಗಳನ್ನು ರೂಪಿಸಲಾಯಿತು. ಒಬಿಸಿ ವರ್ಗಕ್ಕೆ ಸರ್ಕಾರಿ ಉದ್ಯೋಗ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ. 27ರಷ್ಟು ಮೀಸಲಾತಿ ಸಿಗುತ್ತದೆ. ಆದರೆ ಇದೇ ಜಾತಿಯಲ್ಲಿ ಕೆನೆಪದರದ ವ್ಯಾಪ್ತಿಗೆ ಬರುವವರು ಈ ಮೀಸಲಾತಿ ಕೋಟಾ ಬಳಸಿಕೊಳ್ಳಲು ಅವಕಾಶವಿಲ್ಲ. ಅಂದರೆ ಮೀಸಲಾತಿಯ ಲಾಭವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವವರಿಗೆ ಸಿಗುವುದಿಲ್ಲ. ಸರ್ಕಾರಿ ನೌಕರಿಯಲ್ಲಿ ಇಲ್ಲದವರಿಗೆ ವಾರ್ಷಿಕ ಆದಾಯದ ಮಿತಿ 8 ಲಕ್ಷ ರುಪಾಯಿ. ಸರ್ಕಾರಿ ನೌಕರರ ಮಕ್ಕಳಿಗೆ ಅವರ ಪೋಷಕರ ಸ್ಥಾನಮಾನಗಳನ್ನು ಆಧರಿಸಿ ನಿರ್ಬಂಧಿಸಲಾಗುತ್ತದೆ.
ಅಭ್ಯರ್ಥಿಯ ಪೋಷಕರು ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿದ್ದರೆ, ಗ್ರೂಪ್ ಎ ವಿಭಾಗದಲ್ಲಿ ಯಾರಾದರೂ ಒಬ್ಬರು ಇದ್ದರೆ, ಇಬ್ಬರೂ ಗ್ರೂಪ್ ಬಿ ವಿಭಾಗದ ನೌಕರಿಯಲ್ಲಿದ್ದರೆ, ಪೋಷಕರು 40ನೇ ವಯಸ್ಸಿಗಿಂತಲೂ ಮೊದಲು ಗ್ರೂಪ್ ಎ ವಿಭಾಗಕ್ಕೆ ಪ್ರಮೋಷನ್ ಪಡೆದು ಹೋದರೆ- ಅಂಥವರ ಮಕ್ಕಳು ಕೆನೆಪದರದ ವ್ಯಾಪ್ತಿಗೆ ಬರುತ್ತಾರೆ.