ನವದೆಹಲಿ, ಫೆ. 3: ವಾಟ್ಸ್‌ಆ್ಯಪ್ ಹಾಗೂ ಅದರ ಪೋಷಕ ಕಂಪನಿ ಮೆಟಾ (WhasApp Privacy Policy) ಅನುಸರಿಸುತ್ತಿರುವ ಡೇಟಾ ಹಂಚಿಕೆ ಮತ್ತು ಗೌಪ್ಯತೆ ನೀತಿಗಳ ಕುರಿತು ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದೆ. ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವುದನ್ನು ನ್ಯಾಯಾಲಯ ಯಾವುದೇ ರೀತಿಯಲ್ಲಿ ಸಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ವಾಟ್ಸ್‌ಆ್ಯಪ್ ಗೌಪ್ಯತಾ ನೀತಿ ವಿಚಾರದಲ್ಲಿ ಮೆಟಾ ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಭಾರತೀಯ ಬಳಕೆದಾರರ ಗೌಪ್ಯತೆಯನ್ನು ಕಾಪಾಡಬೇಕು, ಅವರ ಡೇಟಾದ ಅಲ್ಪಾಂಶವನ್ನೂ ಅನಧಿಕೃತವಾಗಿ ಬಳಸಲು ಅವಕಾಶ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಗೌಪ್ಯತೆಯನ್ನು ಉಳಿಸಲು ಸಾಧ್ಯವಿಲ್ಲದಿದ್ದರೆ ಭಾರತದಲ್ಲಿ ಕಾರ್ಯನಿರ್ವಹಿಸುವ ಅಗತ್ಯ ಇಲ್ಲ ಎಂಬ ಕಠಿಣ ಸಂದೇಶ ನೀಡಿದೆ.
ಒಟಿಟಿ ಮೆಸೇಜಿಂಗ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಸ್ಪರ್ಧಾ ಆಯೋಗವು ವಾಟ್ಸ್‌ಆ್ಯಪ್ ಮತ್ತು ಮೆಟಾಗೆ 213 ಕೋಟಿ ರುಪಾಯಿ ದಂಡ ವಿಧಿಸಿತ್ತು. ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿಯು ಆ ತೀರ್ಪನ್ನು ಎತ್ತಿ ಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೆಟಾ ಮತ್ತು ವಾಟ್ಸ್‌ಆ್ಯಪ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
ವಾಟ್ಸ್‌ಆ್ಯಪ್‌ಗೆ ಸುಪ್ರೀಂ ಕೋರ್ಟ್‌ನ ತಾಕೀತು:
ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದ್ದು, ವಾಟ್ಸ್‌ಆ್ಯಪ್‌ನ 2021ರ ಗೌಪ್ಯತಾ ನೀತಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಬಳಕೆದಾರರ ವೈಯಕ್ತಿಕ ಮಾಹಿತಿಯ ರಕ್ಷಣೆಯೇ ಪ್ರಥಮ ಆದ್ಯತೆ ಎಂದು ನ್ಯಾಯಾಲಯ ಸೂಚಿಸಿದ್ದು, ಕಂಪನಿಯು ಸ್ಪಷ್ಟ ಭರವಸೆ ನೀಡಬೇಕೆಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ನ್ಯಾಯಪೀಠ, “ಭಾರತದ ನಾಗರಿಕರ ಗೌಪ್ಯತೆಯೊಂದಿಗೆ ಆಟವಾಡಲು ಸಾಧ್ಯವಿಲ್ಲ. ಬಳಕೆದಾರರ ಡೇಟಾದ ಒಂದೇ ಒಂದು ಅಂಶವನ್ನೂ ಹಂಚಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ” ಎಂದು ಕಠಿಣವಾಗಿ ಎಚ್ಚರಿಸಿದೆ. ವಾಟ್ಸಾಪ್‌ನ 2021ರ ಗೌಪ್ಯತೆ ನೀತಿಗೆ ಸಂಬಂಧಿಸಿ ಭಾರತೀಯ ಸ್ಪರ್ಧಾ ಆಯೋಗ (CCI) ವಿಧಿಸಿದ್ದ 213.14 ಕೋಟಿ ರುಪಾಯಿ ದಂಡದ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಗಿದೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ರಾಜ್ಯಸಭೆ ಕಲಾಪ ಬಹಿಷ್ಕರಿಸಿ ಹೊರ ನಡೆದ ವಿಪಕ್ಷ
ಈ ಪ್ರಕರಣದಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ನೀಡಿದ ತೀರ್ಪನ್ನು ಪ್ರಶ್ನಿಸಿ ಮೆಟಾ ಮತ್ತು ವಾಟ್ಸ್‌ಆ್ಯಪ್ ಮೇಲ್ಮನವಿಗಳನ್ನು ಸಲ್ಲಿಸಿದ್ದರೆ, ಬಳಕೆದಾರರ ಡೇಟಾವನ್ನು ಜಾಹೀರಾತು ಉದ್ದೇಶಗಳಿಗೆ ಹಂಚಿಕೊಳ್ಳಲು ಅವಕಾಶ ನೀಡಿದ ಆ ತೀರ್ಪಿನ ವಿರುದ್ಧ ಸಿಸಿಐ ಕೂಡ ಮೇಲ್ಮನವಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮೆಟಾ ಮತ್ತು ವಾಟ್ಸ್‌ಆ್ಯಪ್ ಪರ ಹಾಜರಾದ ಹಿರಿಯ ವಕೀಲರು ದಂಡದ ಮೊತ್ತವನ್ನು ಈಗಾಗಲೇ ಠೇವಣಿ ಮಾಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ನ್ಯಾಯಪೀಠವು ವಾಟ್ಸ್‌ಆ್ಯಪ್‌ನ ಗೌಪ್ಯತೆ ನೀತಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿತು. ಸಾಮಾನ್ಯ ನಾಗರಿಕರಿಗೆ - ಬೀದಿಯಲ್ಲಿ ಹಣ್ಣು ಮಾರುವ ಮಹಿಳೆಗೆ ಅಥವಾ ಮನೆಕೆಲಸದಾಕೆಗೆ - ಈ ನೀತಿ ಅರ್ಥವಾಗುತ್ತದೆಯೇ ಎಂದು ಪ್ರಶ್ನಿಸಿ, ಕಂಪನಿಯು ತನ್ನ ಏಕಸ್ವಾಮ್ಯ ಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಾಗಿ ಸೂಚಿಸಿದೆ.
ಬಳಕೆದಾರರಿಗೆ ಸಮರ್ಪಕ ಆಯ್ಕೆ ಇಲ್ಲದೆ, ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದು ಸಂವಿಧಾನಾತ್ಮಕ ಗೌಪ್ಯತಾ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. “ಇದು ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ಸುಲಭ ಮಾರ್ಗವಾಗಿದ್ದು, ನಾವು ಅದನ್ನು ಅನುಮತಿಸುವುದಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಬೀದಿ ನಾಯಿ ಕಡಿತದಿಂದ ಸಾವಾದರೆ, ಗಾಯವಾದರೆ ಭಾರಿ ದಂಡ: ಸುಪ್ರೀಂ ಕೋರ್ಟ್ ಎಚ್ಚರಿಕೆ
ಬಳಕೆದಾರರ ಡೇಟಾವನ್ನು ಯಾವುದೇ ರೀತಿಯಲ್ಲೂ ಬಳಸುವುದಿಲ್ಲ ಎಂಬ ಸ್ಪಷ್ಟ ಭರವಸೆ ನೀಡುವಂತೆ ನ್ಯಾಯಾಲಯ ಸೂಚಿಸಿದ್ದು, ಈ ವಿಷಯದಲ್ಲಿ ಮೆಟಾ ಮತ್ತು ವಾಟ್ಸ್‌ಆ್ಯಪ್ ಸ್ಪಷ್ಟ ನಿಲುವು ತಿಳಿಸಬೇಕಾಗಿದೆ. ಇದೇ ವೇಳೆ 2021ರ ಗೌಪ್ಯತೆ ನೀತಿಯನ್ನು ಒಪ್ಪದ ಬಳಕೆದಾರರನ್ನು ನಿರ್ಬಂಧಿಸಲಾಗುವುದಿಲ್ಲ ಎಂಬ ಭರವಸೆಯೂ ನೀಡಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.