ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ರಾಜ್ಯಸಭೆ ಕಲಾಪ ಬಹಿಷ್ಕರಿಸಿ ಹೊರ ನಡೆದ ವಿಪಕ್ಷ

India–US trade deal: ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ವಿವಾದದ ನಡುವೆ, ಈ ವಿಷಯದ ಕುರಿತು ಚರ್ಚೆ ನಡೆಸುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ರಾಜ್ಯಸಭೆಯಿಂದ ಸಭಾತ್ಯಾಗ ನಡೆಸಿವೆ. ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಪಕ್ಷೀಯವಾಗಿ ಘೋಷಿಸಿದ್ದೇಕೆ ಎಂದು ವಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸಿವೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ರಾಜ್ಯಸಭೆಯಿಂದ ವಿಪಕ್ಷಗಳ ಸಭಾತ್ಯಾಗ

ರಾಜ್ಯಸಭೆಯಿಂದ ಪ್ರತಿಪಕ್ಷಗಳ ಸಭಾತ್ಯಾಗ -

Priyanka P
Priyanka P Feb 3, 2026 3:39 PM

ನವದೆಹಲಿ, ಫೆ. 3: ಬುಧವಾರ (ಫೆಬ್ರವರಿ 3) ಭಾರತ–ಅಮೆರಿಕ ವಾಣಿಜ್ಯ ಒಪ್ಪಂದದ (India–US trade deal) ಕುರಿತು ಚರ್ಚೆ ನಡೆಸುವಂತೆ ಆಗ್ರಹಿಸಿ ವಿಪಕ್ಷಗಳು ರಾಜ್ಯಸಭೆಯಿಂದ ಹೊರ ನಡೆದವು. ಈ ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಏಕಪಕ್ಷೀಯವಾಗಿ ಘೋಷಿಸಿದ್ದೇಕೆ ಎಂದು ಪ್ರಶ್ನಿಸಿ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅಮೆರಿಕ ಅಧ್ಯಕ್ಷ ವ್ಯಾಪಾರ ಸುಂಕಗಳ ಕುರಿತು ಇತ್ತೀಚೆಗೆ ಮಾಡಿದ ಎಕ್ಸ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಸರ್ಕಾರ ಪ್ರತಿಕ್ರಿಯಿಸುತ್ತಿರುವಾಗ, ವಿಪಕ್ಷವು ಕಲಾಪಕ್ಕೆ ಅಡ್ಡಿಪಡಿಸಿದ್ದನ್ನು ರಾಜ್ಯಸಭೆಯಲ್ಲಿ ಜಗತ್ ಪ್ರಕಾಶ್ ನಡ್ಡಾ ತೀವ್ರವಾಗಿ ಟೀಕಿಸಿದರು.

ಭಾರತೀಯ ಸರಕುಗಳ ಮೇಲಿನ ಅಮೆರಿಕದ ಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸುವ ಸಾಧ್ಯತೆಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಸಚಿವ ಜೆ.ಪಿ. ನಡ್ಡಾ ಮಾತನಾಡುತ್ತಿದ್ದಂತೆ, ವಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದರು. ಒಳ್ಳೆಯದರಲ್ಲಿ ಕೂಡ ಕೆಟ್ಟದ್ದನ್ನೇ ಕಾಣುವ ಪ್ರವೃತ್ತಿಯಿರುವ ವಿಪಕ್ಷದ ನಿರಾಶೆಯನ್ನು ನಾನು ಸ್ಪಷ್ಟವಾಗಿ ನೋಡುತ್ತಿದ್ದೇನೆ ಎಂದು ನಡ್ಡಾ ಹೇಳಿದರು.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಸಂಜಯ್ ರಾವತ್ ಹೇಳಿಕೆ:



ಇಡೀ ವಿಪಕ್ಷವು ರಾಜ್ಯಸಭೆಯಿಂದ ಹೊರನಡೆದಿದೆ. ರಾಷ್ಟ್ರೀಯ ಹಿತಾಸಕ್ತಿ ಮತ್ತು ರೈತರ ಹಿತಾಸಕ್ತಿಗಳಿಗೆ ಧಕ್ಕೆ ತರಲಾಗಿದೆ. ಗೌತಮ್ ಅದಾನಿಯನ್ನು ರಕ್ಷಿಸಲು ಈ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನಾವು ಇದರ ವಿರುದ್ಧ ಬೀದಿಗಳಿಂದ ಸಂಸತ್ತಿನವರೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಶಿವಸೇನೆ ಶಾಸಕ ಸಂಜಯ್ ರಾವತ್ ಸಭಾತ್ಯಾಗದ ನಂತರ ಹೇಳಿದರು.

ಸರ್ಕಾರ ಉತ್ತರಿಸುವಾಗ, ನೀವು ಕೂಗುತ್ತಿದ್ದೀರಿ. ಇದು ಒಳ್ಳೆಯದಲ್ಲ ಎಂದು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ವಿಪಕ್ಷಗಳಿಗೆ ಎಚ್ಚರಿಕೆ ನೀಡಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇಂಡಿಯಾ ಬಣವು ಪ್ರಜಾಪ್ರಭುತ್ವಕ್ಕೆ ಕೇಡು ಬಯಸುವ ಬೇಜವಾಬ್ದಾರಿಯುತ ನಡವಳಿಕೆಯನ್ನು ಹೊಂದಿದೆ ಎಂದು ಆರೋಪಿಸಿದ ರಾಧಾಕೃಷ್ಣನ್, ವಿಪಕ್ಷದ ನಡವಳಿಕೆಯು ನಮ್ಮ ದೇಶದ ಬೆಳವಣಿಗೆ ಮತ್ತು ವ್ಯಾಪಾರದಲ್ಲಿ ಅವರಿಗೆ ಯಾವುದೇ ಆಸಕ್ತಿಯಿಲ್ಲ ಎಂದು ತೋರಿಸಿದೆ ಎಂದು ಹೇಳಿದರು. ಅವರ ಕಾರ್ಯಗಳು ರಾಷ್ಟ್ರೀಯ ಹಿತಾಸಕ್ತಿಗಿಂತ ರಾಜಕೀಯ ಹತಾಶೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ಕದನ ವಿರಾಮದಂತೆ ಅಮೆರಿಕ- ಭಾರತ ವ್ಯಾಪಾರ ಒಪ್ಪಂದದ ಘೋಷಣೆ: ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ

ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಲು ಸರ್ಕಾರ ಸಿದ್ಧವಾಗಿದೆ ಎಂದು ನಡ್ಡಾ ಹೇಳಿದರು. ಜತೆಗೆ ಶೀಘ್ರದಲ್ಲೇ ಸ್ವಯಂಪ್ರೇರಿತ ಹೇಳಿಕೆ ನೀಡುವುದಾಗಿ ಅವರು ಸದನಕ್ಕೆ ಭರವಸೆ ನೀಡಿದರು. ಸರ್ಕಾರ ಮಾಹಿತಿಯನ್ನು ಮರೆಮಾಚುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ಅವರು ತಿರಸ್ಕರಿಸಿದರು. ಪ್ರಮುಖ ಎಲ್ಲ ವಿಷಯಗಳನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನಿರಂತರವಾಗಿ ಚರ್ಚಿಸಿದೆ ಎಂದು ಅವರು ಪ್ರತಿಪಾದಿಸಿದರು.

ವಿಪಕ್ಷಗಳು ಸಾರ್ವಜನಿಕರನ್ನು ತಪ್ಪು ದಾರಿಗೆಳೆದು ಉದ್ದೇಶಪೂರ್ವಕವಾಗಿ ಸದನದಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತಿವೆ ಎಂದು ನಡ್ಡಾ ಆರೋಪಿಸಿದರು. ಪದೇ ಪದೆ ಕಲಾಪಗಳನ್ನು ಸ್ಥಗಿತಗೊಳಿಸುವ ಮೂಲಕ ಮತ್ತು ಸರ್ಕಾರದ ಉದ್ದೇಶವನ್ನು ಪ್ರಶ್ನಿಸುವ ಮೂಲಕ, ವಿರೋಧ ಪಕ್ಷವು ನಾಗರಿಕರನ್ನು ಬೆದರಿಸಲು ಮತ್ತು ಜನವಿಶ್ವಾಸವನ್ನು ಕುಂದಿಸಲು ಪ್ರಯತ್ನಿಸುತ್ತಿವೆ. ಇಂತಹ ವರ್ತನೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ನಡ್ಡಾ ಆರೋಪಿಸಿದರು.