ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ayodhya Ram Mandir: ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿಗೆ ಸಂಚು; 19 ವರ್ಷದ ಶಂಕಿತ ಭಯೋತ್ಪಾದಕನ ಬಂಧನ

ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಶಂಕಿತ ಭಯೋತ್ಪಾದಕನನ್ನು ಭದ್ರತಾ ಸಂಸ್ಥೆಯ ಅಧಿಕಾರಿಗಳು ಬಂಧಿಸಿದ್ದಾರೆ. ಹರಿಯಾಣದ ಫರಿದಾಬಾದ್‌ನಲ್ಲಿ ಭದ್ರತಾ ಸಂಸ್ಥೆಯ ಅಧಿಕಾರಿಗಳು 19 ವರ್ಷದ ಅಬ್ದುಲ್ ರೆಹಮಾನ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿಗೆ ಸಂಚು: ಶಂಕಿತ ಭಯೋತ್ಪಾದಕನ ಬಂಧನ

ಅಬ್ದುಲ್ ರೆಹಮಾನ್‌.

Profile Ramesh B Mar 3, 2025 5:10 PM

ಚಂಡೀಗಢ: ಅಯೋಧ್ಯೆ ರಾಮ ಮಂದಿರ (Ayodhya Ram Mandir)ದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಶಂಕಿತ ಭಯೋತ್ಪಾದಕ (Suspected terrorist)ನನ್ನು ಭದ್ರತಾ ಸಂಸ್ಥೆಯ ಅಧಿಕಾರಿಗಳು ಬಂಧಿಸಿದ್ದಾರೆ. ಹರಿಯಾಣದ ಫರಿದಾಬಾದ್‌ನಲ್ಲಿ ಭದ್ರತಾ ಸಂಸ್ಥೆಯ ಅಧಿಕಾರಿಗಳು 19 ವರ್ಷದ ಅಬ್ದುಲ್ ರೆಹಮಾನ್‌ (Abdul Rehman)ನನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ(ISI)ಯ ಸಹಾಯದಿಂದ ಅಯೋಧ್ಯೆಯ ರಾಮ ಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ನಡೆಸಲು ಈತ ಯೋಜನೆ ರೂಪಿಸಿದ್ದ ಎನ್ನುವುದು ತನಿಖೆ ವೇಳೆ ಬಹಿರಂಗಗೊಂಡಿದೆ.

ʼʼಉತ್ತರ ಪ್ರದೇಶ ಮೂಲದ ಅಬ್ದುಲ್ ರೆಹಮಾನ್‌ನನ್ನು ಭಾನುವಾರ ಫರಿದಾಬಾದ್‌ನಲ್ಲಿ ಬಂಧಿಸಲಾಗಿದೆ. ಈ ವೇಳೆ ಈತನ ಬಳಿಯಿದ್ದ ಗ್ರೆನೇಡ್‌ ಅನ್ನು ನಿಷ್ಕ್ರಿಯಗೊಳಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಗುಜರಾತ್‌ ಆ್ಯಂಟಿ ಟೆರರಿಸ್ಟ್‌ ಸ್ಕ್ವಾಡ್‌ (ATS) ಅಧಿಕಾರಿಗಳು ಆತನನ್ನು ತಮ್ಮ ರಾಜ್ಯಕ್ಕೆ ಕರೆದೊಯ್ದಿದ್ದಾರೆ. ಗುಜರಾತ್ ಎಟಿಎಸ್ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲು ಗುಜರಾತ್ ಎಟಿಎಸ್ ಅಬ್ದುಲ್ ರೆಹಮಾನ್‌ನ ವಿಚಾರಣೆ ನಡೆಸುತ್ತಿದೆ.



ಅಬ್ದುಲ್ ರೆಹಮಾನ್ ಐಎಸ್ಐ ಜತೆ ನಿಕಟ ಸಂಪರ್ಕ ಹೊಂದಿದ್ದು, ದೇವಾಲಯದ ಬೇಹುಗಾರಿಕೆ ಮಾಡಿ ಮಾಹಿತಿ ಹಂಚಿಕೊಂಡಿದ್ದ ಎನ್ನಲಾಗಿದೆ. ರಾಮ ಮಂದಿರದ ಮೇಲೆ ಗ್ರೆನೇಡ್ ದಾಳಿ ನಡೆಸಿ ಭಾರಿ ಸಾವು-ನೋವು ಸೃಷ್ಟಿಸುವುದು ಈತನ ಗುರಿಯಾಗಿತ್ತು. ಫೈಜಾಬಾದ್‌ನಲ್ಲಿ ಮಟನ್ ಅಂಗಡಿ ನಡೆಸುತ್ತಿದ್ದ ಆತ ಆಟೋ ಚಾಲಕನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ.

ಗುಜರಾತ್ ಎಟಿಎಸ್ ಮತ್ತು ಫರಿದಾಬಾದ್ ಎಸ್‌ಟಿಎಫ್‌ ಜಂಟಿ ಕಾರ್ಯಾಚರಣೆ ನಡೆಸಿ ಅಬ್ದುಲ್ ರೆಹಮಾನ್‌ನನ್ನು ರೈಲ್ವೇ ಸ್ಟೇಷನ್‌ನಲ್ಲಿ ಸೆರೆ ಹಿಡಿದಿದೆ. ರಾಮ ಮಂದಿರ ನಿರ್ಮಾಣದ ನಂತರ, ಭಯೋತ್ಪಾದಕ ಗುಂಪುಗಳು ಅಯೋಧ್ಯೆಯನ್ನು ಆಗಾಗ ಗುರಿಯಾಗಿಸುತ್ತಿದ್ದು, ಈ ಬಗ್ಗೆ ಭದ್ರತಾ ಸಂಸ್ಥೆಗಳು ಹೆಚ್ಚಿನ ಎಚ್ಚರಿಕೆ ವಹಿಸಿವೆ.

ಐಎಸ್‌ಐಯೊಂದಿಗೆ ನಿರಂತರ ಸಂಪರ್ಕ

ಅಬ್ದುಲ್‌ ರೆಹಮಾನ್‌ ಅನೇಕ ಶಂಕಿತ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಇದೀಗ ಐಎಸ್‌ಐ ಸಂಚನ್ನು ವಿಫಲಗೊಳಿಸಿದಂತಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಭದ್ರತಾ ಪಡೆಯ ಅಧಿಕಾರಿಗಳು ಗ್ರನೇಡ್‌ ವಶಕ್ಕೆ ಪಡೆದು ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಬ್ದುಲ್‌ ರೆಹಮಾನ್‌ ಹಿನ್ನೆಲೆ

ʼʼಅಬ್ದುಲ್‌ ರೆಹಮಾನ್‌ ಫೈಜಾಬಾದ್‌ ಜಿಲ್ಲೆಯ ಮಿಲ್ಕಿಪುರ ಗ್ರಾಮದವನು. ತನಿಖೆ ವೇಳೆ ಆತ ಪಾಲಿಯಲ್ಲಿ ಗ್ರೆನೇಡ್‌ ಸಂಗ್ರಹಿಸಿರುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ. ಕೂಡಲೆ ಎಟಿಎಸ್‌ ಮತ್ತು ಫರಿದಾಬಾದ್‌ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುಮಾರು 4 ಗಂಟೆಗಳ ಕಾಲ ನಡೆದ ಶೋಧನೆಯಲ್ಲಿ ಅಧಿಕಾರಿಗಳು 2 ಬಾಂಬ್‌ಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಇದನ್ನು ನಿಷ್ಕ್ರಿಯಗೊಳಿಸಲಾಯಿತುʼʼ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಸುದ್ದಿಯನ್ನೂ ಓದಿ: IIT Baba: ಕುಂಭಮೇಳ ಖ್ಯಾತಿಯ IIT ಬಾಬಾ ಅರೆಸ್ಟ್‌; ಗಾಂಜಾ ಸಮೇತ ಅಂದರ್‌

ಕಳೆದ ವರ್ಷ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್‌ ಬೆದರಿಕೆ ಹಾಕಿದ್ದ ಇಬ್ಬರನ್ನು ಬಂಧಿಸಲಾಗಿತ್ತು. ಲಖನೌನಲ್ಲಿ ಮೂಲದ ಇಬ್ಬರನ್ನು ವಿಶೇಷಾಧಿಕಾರಿಗಳು ಬಂಧಿಸಿದ್ದರು.