ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amir Khan Muttaqi: ತಾಲಿಬಾನ್‌ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ನೀಡುತ್ತಿರುವುದೇಕೆ? ಅಜೆಂಡಾ ಏನಿರಬಹುದು?

ತಾಲಿಬಾನ್‌ ವಿದೇಶಾಂಗ ಸಚಿವ ಆಮಿರ್ ಖಾನ್‌ ಮುತ್ತಾಕ್ವಿ ಭಾರತಕ್ಕೆ ಕೆಲ ದಿನಗಳಲ್ಲೇ ಭೇಟಿ ನೀಡಲಿದ್ದಾರೆ. ಆ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಮಟ್ಟ ಹಾಕಲು ಭಾರತಕ್ಕೆ ಅಪ್ಘಾನಿಸ್ತಾನದ ತಾಲಿಬಾನ್‌ ಸರಕಾರ ಸಹಾಯ ಹಸ್ತ ಚಾಚಲಿದೆಯೇ? ಎನ್ನುವ ಅನುಮಾನ ಮೂಡಿಸಿದೆ.

ದೆಹಲಿ: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಮಟ್ಟ ಹಾಕಲು ಭಾರತಕ್ಕೆ ಅಪ್ಘಾನಿಸ್ತಾನದ ತಾಲಿಬಾನ್‌ ಸರಕಾರ ಸಹಾಯ ಹಸ್ತ ಚಾಚಲಿದೆಯೇ?! ಈ ಕುತೂಹಲಕ್ಕೆ ಕಾರಣ ಇಲ್ಲದಿಲ್ಲ. ಅದೇನೆಂದರೆ, ತಾಲಿಬಾನ್‌ ವಿದೇಶಾಂಗ ಸಚಿವ ಆಮಿರ್ ಖಾನ್‌ ಮುತ್ತಾಕ್ವಿ (Amir Khan Muttaqi) ಭಾರತಕ್ಕೆ ಕೆಲ ದಿನಗಳಲ್ಲೇ ಭೇಟಿ ನೀಡಲಿದ್ದಾರೆ. ಅಪ್ಘಾನಿಸ್ತಾನದ ತಾಲಿಬಾನ್‌ ಸರಕಾರದ ಮೊದಲ ಸಚಿವರ ಭಾರತ ಪ್ರವಾಸ ಇದಾಗಿದೆ. ಭಾರತದ ಜತೆಗೆ ರಾಜತಾಂತ್ರಿಕ ಸಂಬಂಧವನ್ನು ಸುಧಾರಿಸಲು ಅಫ್ಘಾನಿಸ್ತಾನದ ತಾಲಿಬಾನಿಗಳು ಯತ್ನಿಸುತ್ತಿದ್ದಾರೆ. ಸೆಪ್ಟೆಂಬರ್‌ 30ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕ್ಲಿಯರೆನ್ಸ್‌ ಪಡೆದ ಬಳಿಕ ಆಮಿರ್‌ ಖಾನ್‌ ಭಾರತಕ್ಕೆ ಬರುತ್ತಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆಮಿರ್‌ ಖಾನ್‌ಗೆ ಅಂತಾರಾಷ್ಟ್ರೀಯ ಪ್ರವಾಸ ಮಾಡಲು ತಾತ್ಕಾಲಿಕವಾಗಿ ಅನುಮೋದಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 9-16ರ ನಡುವೆ ದಿಲ್ಲಿಗೆ ಭೇಟಿ ನೀಡಲಿದ್ದಾರೆ.



ಈ ಸುದ್ದಿಯನ್ನೂ ಓದಿ: US Government Shutdown: ಆರು ವರ್ಷಗಳ ಬಳಿಕ ಅಮೆರಿಕ ಸರ್ಕಾರಕ್ಕೆ ಹಣಕಾಸು ಪೂರೈಕೆ ಸ್ಥಗಿತ

ಭಾರತವು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತವನ್ನು ಇಲ್ಲಿಯವರೆಗೆ ಅಧಿಕೃತವಾಗಿ ಮಾನ್ಯತೆ ಮಾಡಿಲ್ಲ. ಒಪ್ಪಿಲ್ಲ. ಆದರೆ ಭಾರತದ ಮನವೊಲಿಸಲು ತಾಲಿಬಾನ್‌ ಯತ್ನಿಸುತ್ತಿದೆ. ಆಪರೇಷನ್‌ ಸಿಂಧೂರ್‌ ಬಳಿಕ ಮೇ 15ರಂದು ಆಮಿರ್ ಖಾನ್‌ ಮತ್ತು ಭಾರತದ ವಿದೇಶಾಂಗ ಸಚಿವ ಜೈ ಶಂಕರ್‌ ಫೋನ್‌ ಮೂಲಕ ಮಾತನಾಡಿದ್ದರು. ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ಈ ಭೇಟಿಯ ವಿವರಗಳನ್ನು, ಕಾರ್ಯಸೂಚಿಯನ್ನು ಬಹಿರಂಗಪಡಿಸಿಲ್ಲ. ಆದರೆ ತಾಲಿಬಾನ್‌ ಜತೆಗಿನ ಸಂಬಂಧ, ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ಬಗ್ಗೆ ಮಾತುಕತೆ ನಡೆಯುವ ನಿರೀಕ್ಷೆ ಇದೆ.

ನಿಮಗೆ ನೆನಪಿರಬಹುದು. ಜಮ್ಮು ಕಾಶ್ಮೀರದ ಪಹಲ್ಗಾಂವ್‌ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಹಿಂದೂ ಪ್ರವಾಸಿಗರ ನರಮೇಧಗೊಳಿಸಿದ ಬರ್ಬರ ಕೃತ್ಯವನ್ನು ಅಪ್ಘಾನಿಸ್ತಾನದ ತಾಲಿಬಾನ್‌ ಸರಕಾರ ಖಂಡಿಸಿತ್ತು.

ವಾಸ್ತವವಾಗಿ ಭಾರತವು ತಾಲಿಬಾನಿಗಳ ಆಡಳಿತಕ್ಕೂ ಮೊದಲೇ ಅಪ್ಘಾನಿಸ್ತಾನದ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿತ್ತು. ಅಲ್ಲಿ ಮೂಲಸೌಕರ್ಯ ಯೋಜನೆಗೆ, ಜನರಿಗೆ ಆಹಾರ ಧಾನ್ಯಗಳು, ಔಷಧಗಳ ಪೂರೈಕೆಯನ್ನೂ ಮಾಡಿತ್ತು. ಅಪ್ಘಾನಿಸ್ತಾನದಲ್ಲಿ ತೀವ್ರ ಭೂಕಂಪನವಾದಾಗ ಭಾರತ ತಕ್ಷಣ ಮಾನವೀಯ ನೆರವನ್ನು ಒದಗಿಸಿತ್ತು.1,000 ಫ್ಯಾಮಿಲಿ ಟೆಂಟ್‌, 15 ಟನ್‌ ಆಹಾರ ಧಾನ್ಯಗಳನ್ನು ಕೊಟ್ಟಿತ್ತು. ನಂತರ ಔಷಧ, ಹೈಜಿನ್‌ ಕಿಟ್‌, ಕಂಬಳಿ, ಜನರೇಟರ್‌ ಇತ್ಯಾದಿಗಳನ್ನು ಒದಗಿಸಿತ್ತು. ಸಂಕಷ್ಟದ ಸಂದರ್ಭದಲ್ಲಿ ಭಾರತ ನೀಡಿರುವ ನೆರವನ್ನು ಅಪ್ಘಾನಿಸ್ತಾನದ ಜನತೆ ನೆನೆಯುತ್ತಾರೆ. ಇದೀಗ ತಾಲಿಬಾನ್‌ ನಾಯಕನ ಭಾರತ ಪ್ರವಾಸವು ಪಾಕಿಸ್ತಾನಕ್ಕೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಭಾರತಕ್ಕೇನು ಲಾಭ?

ವ್ಯೂಹಾತ್ಮಕವಾಗಿ ಭಾರತಕ್ಕೆ ಅನುಕೂಲಕರ ಎನ್ನಲಾಗುತ್ತಿದೆ. ಅಪ್ಘಾನಿಸ್ತಾನದಲ್ಲಿ ಭಾರತದ ದೂರಗಾಮಿ ಹಿತಾಸಕ್ತಿಗೆ ಸಹಕಾರಿಯಾಗಲಿದೆ. ಆ ಭಾಗದಿಂದ ಭಯೋತ್ಪಾದನೆಯ ಅಪಾಯವನ್ನು ಇಲ್ಲದಂತೆ ಮಾಡಬಹುದು. ಎರಡನೆಯದಾಗಿ ಪಾಕಿಸ್ತಾನ ಮತ್ತು ಚೀನಾದ ಪ್ರಭಾವವನ್ನು ಹತ್ತಿಕ್ಕಬಹುದು.

ಅಪ್ಘಾನಿಸ್ತಾನಕ್ಕೆ ಪಾಕಿಸ್ತಾನದ ಜತೆ ಏಕೆ ಅಸಮಾಧಾನ?

ಪಾಕಿಸ್ತಾನ ಈ ವರ್ಷ ಅಪ್ಘಾನಿಸ್ತಾನದಿಂದ ವಲಸೆ ಬಂದಿದ್ದ 80,000 ಕ್ಕೂ ಹೆಚ್ಚು ನಿರಾಶ್ರಿತರನ್ನು ಬಲವಂತವಾಗಿ ವಾಪಸ್‌ ಕಳಿಸಿತ್ತು. ಇದರ ಪರಿಣಾಮ ಉಭಯ ದೇಶಗಳ ಸಂಬಂಧ ಹಳಸಿತ್ತು. ಜತೆಗೆ ಪಾಕಿಸ್ತಾನಿ ತಾಲಿಬಾನಿಗಳೆಂದು ಗುರುತಿಸಿಕೊಂಡಿರುವ ತೆಹ್ರಿಕ್‌ ತಾಲಿಬಾನ್‌ (ಟಿಟಿಪಿ) ಉಗ್ರರಿಗೆ ಅಫ್ಘಾನಿಸ್ತಾನದ ತಾಲಿಬಾನ್‌ ಸರಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದೆ. ಈ ಟಿಟಿಪಿ ಭಯೋತ್ಪಾದಕರು ಆಗಾಗ್ಗೆ ಪಾಕಿಸ್ತಾನದಲ್ಲಿ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುತ್ತವೆ. ಉಭಯ ದೇಶಗಳ ಗಡಿಭಾಗದಲ್ಲಿ ಈ ಉಗ್ರರ ದಾಂಧಲೆ ಹೆಚ್ಚು. ಪಾಕ್‌ ಸೇನಾಪಡೆಗಳಿಗೂ ತಾಲಿಬಾನಿಗಳಿಗೂ ಕಾಳಗ ನಡೆಯುತ್ತವೆ. ಹೀಗಾಗಿ ಪಾಕಿಸ್ತಾನಕ್ಕೂ ತಾಲಿಬಾನಿಗಳಿಗೂ ಆಗಿ ಬರೋದಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಇದರ ಪ್ರಯೋಜನವನ್ನು ಭಾರತ ಪಡೆಯಬಹುದು. ಪಾಕಿಸ್ತಾನಿ ಸರಕಾರವನ್ನು ಭಯೋತ್ಪಾದನೆಯ ಮೂಲಕ ಕಿತ್ತು ಹಾಕಬೇಕು ಎಂಬುದೇ ಟಿಟಿಪಿ ಉಗ್ರರ ಗುರಿಯಾಗಿದೆ.