ನವದೆಹಲಿ, ಜು.21: ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ. ಈ ನಡುವೆ ಪ್ರತಿಭಟನಾಕಾರರೊಂದಿಗೆ ಕೇಂದ್ರದ ಮಾತುಕತೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ (JP Nadda) ಸುಳ್ಳು ಹೇಳಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಆರೋಪಿಸಿದೆ. ಸೌಹಾರ್ದಯುತ ಚರ್ಚೆ ನಡೆದಿದೆ ಎಂಬ ಕೇಂದ್ರದ ಹೇಳಿಕೆಯನ್ನು ಸಂಘಟನೆ ತಿರಸ್ಕರಿಸಿದೆ.
ಚಲೋ ಸಂಸತ್ ಮೆರವಣಿಗೆಯ ಮಧ್ಯೆ ನಡೆದ ಮಾತುಕತೆಯನ್ನು ನಿಷ್ಪ್ರಯೋಜಕ ಎಂದು ನಡ್ಡಾ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದ ಸಿಜೆಪಿ ವಕ್ತಾರ ಅಶುತೋಷ್ ರಂಕಾ ಹೇಳಿದ್ದಾರೆ. ನಿಯೋಗವು ಈ ಪ್ರಕ್ರಿಯೆಯಲ್ಲಿ ನಾಲ್ಕು ಗಂಟೆಗಳನ್ನು ವ್ಯರ್ಥ ಮಾಡಿದೆ ಎಂದು ಆರೋಪಿಸಿದರು. ಸಚಿವರಿಗಾಗಿ ಸುಮಾರು ಎರಡು ಗಂಟೆಗಳ ಕಾಲ ಕಾದ ನಂತರ ಕೇವಲ 10 ನಿಮಿಷ ಸಭೆ ನಡೆಸಿದರು ಎಂದು ಸಹ ವಕ್ತಾರ ಸೌರವ್ ದಾಸ್ ಹೇಳಿದರು.
“ಸಭೆ ಸೌಹಾರ್ದಯುತವಾಗಿ ನಡೆಯಿತು. ಸಂಜೆ 4 ಗಂಟೆ ಸುಮಾರಿಗೆ ನನಗೆ ಲಿಖಿತ ಜ್ಞಾಪಕ ಪತ್ರವನ್ನು ಸಲ್ಲಿಸಿದರು. ಎಲ್ಲಾ ಪ್ರತಿಭಟನಾಕಾರರು ತಮ್ಮ ಧರಣಿ ಅಂತ್ಯಗೊಳಿಸಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಆಡಳಿತಕ್ಕೆ ಸಹಾಯ ಮಾಡುವಂತೆ ನಾನು ವಿನಂತಿಸಿದ್ದೇನೆ” ಎಂದು ನಡ್ಡಾ ಹೇಳಿದರು.
ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಸಿಜೆಪಿ ಪ್ರತಿಭಟನೆ: 178ಕ್ಕೂ ಹೆಚ್ಚು ಮಂದಿಗೆ ಗಾಯ, 4 ಎಫ್‌ಐಆರ್ ದಾಖಲು
“ನಡ್ಡಾ ಅವರೇ, ಸುಳ್ಳು ಹೇಳಬೇಡಿ. ಈ ಚಳವಳಿಯ ಶಕ್ತಿಯನ್ನು ಅರಿತುಕೊಂಡಾಗ ನಿಮ್ಮ ಸರ್ಕಾರ ಹತಾಶವಾಯಿತು. ನಂತರ ಈ ನಿಷ್ಪ್ರಯೋಜಕ ಸಭೆಗಾಗಿ ನಮ್ಮ 4 ಗಂಟೆಗಳನ್ನು ವ್ಯರ್ಥ ಮಾಡಿತು” ಎಂದು ರಾಂಕಾ ಹೇಳಿದ್ದಾರೆ.
ಸೋಮವರಾ (ಜು.20) ನಡೆದ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ಎರಡು ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಎತ್ತಿದ ಮೂರು ಬೇಡಿಕೆಗಳ ಬಗ್ಗೆ ಕೇಂದ್ರವು ಯಾವುದೇ ಭರವಸೆ ನೀಡಲಿಲ್ಲ. ಬದಲಾಗಿ, ನಡ್ಡಾ ಪ್ರತಿಭಟನಾಕಾರರು ತಮ್ಮ ಧರಣಿ ಹಿಂತೆಗೆದುಕೊಂಡು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸುವಂತೆ ಕೇಳಿಕೊಂಡರು ಎನ್ನಲಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಹೊಣೆಗಾರಿಕೆ ಕೋರಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ, ಸಂಸತ್ತಿಗೆ ಸಿಜೆಪಿಯ ಸಂಸತ್ ಚಲೋ ಮೆರವಣಿಗೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ದೆಹಲಿಯಲ್ಲಿ ಸಾವಿರಾರು ಜನರು ಜಮಾಯಿಸಿದ್ದು, ಈ ಚರ್ಚೆಗಳು ನಡೆದವು. ದಿನವಿಡೀ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಯಿತು. ಗೃಹ ಸಚಿವ ಅಮಿತ್ ಶಾ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಬೆಳವಣಿಗೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಸಾಮೂಹಿಕ ಪ್ರಯತ್ನವಾಗಬೇಕು: ಪ್ರಧಾನಿ ಮೋದಿ
ನಡ್ಡಾ ಅವರಿಗೆ ಸಲ್ಲಿಸಿದ ಮನವಿಯ ಪ್ರಕಾರ, ಸಿಜೆಪಿಯ ಮೂರು ಪ್ರಮುಖ ಬೇಡಿಕೆಗಳೆಂದರೆ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡುವುದು, ಪ್ರಧಾನ್ ಅವರನ್ನು ವಜಾಗೊಳಿಸುವುದು ಮತ್ತು ನೀಟ್ ಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ. ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಸಿಜೆಪಿಯ ಮುಖ್ಯ ವಕ್ತಾರ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಇದ್ದರು.
ಸಭೆಯಲ್ಲಿ ಸಿಜೆಪಿಯ ಬೇಡಿಕೆಗಳ ಕುರಿತು ನಡ್ಡಾ ಯಾವುದೇ ಬದ್ಧತೆಯನ್ನು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಪ್ರತಿಭಟನಾಕಾರರು ತಮ್ಮ ಆಂದೋಲನವನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಸಾಮಾನ್ಯ ಸ್ಥಿತಿಗೆ ಮರಳಲು ಆಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.