ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಸಿಜೆಪಿ ಪ್ರತಿಭಟನೆ: 178ಕ್ಕೂ ಹೆಚ್ಚು ಮಂದಿಗೆ ಗಾಯ, 4 ಎಫ್‌ಐಆರ್ ದಾಖಲು

Cockroach Janta Party: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್‌ ಜನತಾ ಪಾರ್ಟಿ (CJP) ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಘರ್ಷಣೆಯಲ್ಲಿ 118ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಸುಮಾರು 60 ಪ್ರತಿಭಟನಾಕಾರರು ಗಾಯಗೊಂಡಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಿಜೆಪಿ ಪ್ರತಿಭಟನೆಗೆ ಹಿಂಸಾತ್ಮಕ ತಿರುವು; ದೆಹಲಿ ಪೊಲೀಸರಿಂದ 4 ಎಫ್‌ಐಆರ್

ದೆಹಲಿಯಲ್ಲಿ ನಡೆ ಸಿಜೆಪಿ ಪ್ರತಿಭಟನೆ -

Profile
Sushmitha Jain Jul 21, 2026 1:26 PM

ನವದೆಹಲಿ, ಜು. 21: ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ಸೋಮವಾರ (ಜುಲೈ 20) ನಡೆದ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party - CJP) ನೇತೃತ್ವದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ನಾಲ್ವರ ವಿರುದ್ಧ ನಾಲ್ಕು ಎಫ್‌ಐಆರ್‌ ದಾಖಲಿಸಿದ್ದಾರೆ. ಗಲಭೆ, ಸರ್ಕಾರಿ ನೌಕರರ ಮೇಲೆ ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ, ಸರ್ಕಾರಿ ಕಾರ್ಯಕ್ಕೆ ಅಡ್ಡಿಪಡಿಸುವುದು ಸೇರಿ ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita - BNS) ಹಾಗೂ ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.

ಪೊಲೀಸರ ಪ್ರಕಾರ, ಒಂದು ಎಫ್‌ಐಆರ್ ಅನ್ನು ಸಂಸತ್ ಅಧಿವೇಶನ ನಡೆಯುತ್ತಿದ್ದ ವೇಳೆ ಅನುಮತಿ ಇಲ್ಲದೆ ಡ್ರೋನ್ ಹಾರಾಟ ನಡೆಸಿದ ಆರೋಪದಡಿ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣವನ್ನು ಹಿಂಸಾಚಾರಕ್ಕೆ ಸಂಚು ರೂಪಿಸಿದ ಆರೋಪದಡಿ ದಾಖಲಿಸಲಾಗಿದ್ದು, ಉಳಿದ ಎರಡು ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದ ಆರೋಪಗಳನ್ನು ಸೇರಿಸಲಾಗಿದೆ.

ಎಫ್‌ಐಆರ್‌ ದಾಖಲಿಸಿದ ದೆಹಲಿ ಪೊಲೀಸರು:



ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಸಿದವರನ್ನು ಸಿಸಿಟಿವಿ ದೃಶ್ಯಗಳು, ಮೊಬೈಲ್ ವಿಡಿಯೊಗಳು ಹಾಗೂ ಇತರ ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಆಧಾರದ ಮೇಲೆ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆ ಮುಂದುವರಿದಿದ್ದು, ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಇನ್ನಷ್ಟು ಎಫ್‌ಐಆರ್‌ಗಳನ್ನೂ ದಾಖಲಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ 118ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಸುಮಾರು 60 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ವಿಶೇಷ ಪೊಲೀಸ್ ಆಯುಕ್ತ, ಜಂಟಿ ಪೊಲೀಸ್ ಆಯುಕ್ತ, ಹೆಚ್ಚುವರಿ ಪೊಲೀಸ್ ಆಯುಕ್ತ ಸೇರಿ ಹಿರಿಯ ಅಧಿಕಾರಿಗಳಿದ್ದಾರೆ. ಹಲವು ಮಹಿಳಾ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಗಾಯಾಳುಗಳ ವೈದ್ಯಕೀಯ-ಕಾನೂನು ಪರೀಕ್ಷೆ ಕೂಡ ನಡೆಯುತ್ತಿದೆ.

ದೆಹಲಿಯಲ್ಲಿ ಕೋಲಾಹಲ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿಯ ಸಂಸತ್ ಚಲೋ

ಪೊಲೀಸರ ಹೇಳಿಕೆಯಂತೆ, ಪ್ರತಿಭಟನಾಕಾರರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಲ್ಲು ಹಾಗೂ ಇತರ ವಸ್ತುಗಳನ್ನು ಎಸೆದು ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಭದ್ರತಾ ವಲಯವನ್ನು ಭೇದಿಸಲು ಯತ್ನಿಸಿದ್ದು, ಪೊಲೀಸ್ ಹಾಗೂ ಇತರ ಸರ್ಕಾರಿ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿ ಉಂಟಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಳಿಕ ಜಂತರ್ ಮಂತರ್ ಸೇರಿ ದೆಹಲಿಯ ಮಧ್ಯ, ಉತ್ತರ, ದಕ್ಷಿಣ, ದಕ್ಷಿಣ-ಪಶ್ಚಿಮ ಮತ್ತು ದಕ್ಷಿಣ-ಪೂರ್ವ ಜಿಲ್ಲೆಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಪ್ರಮುಖ ಸರ್ಕಾರಿ ಕಟ್ಟಡಗಳು, ಪ್ರಮುಖ ಜಂಕ್ಷನ್‌ಗಳು ಹಾಗೂ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಹುಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ವಾಹನ ತಪಾಸಣೆ ಮತ್ತು ಗಸ್ತು ಕಾರ್ಯವನ್ನು ತೀವ್ರಗೊಳಿಸಲಾಗಿದೆ.

ಇತ್ತ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮವನ್ನು ಖಂಡಿಸಿದ್ದು, ಮಂಗಳವಾರವೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.

ದೆಹಲಿ ಪೊಲೀಸರು ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೇ, ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳಬಾರದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಹಿಂಸಾಚಾರ, ಸಾರ್ವಜನಿಕ ಆಸ್ತಿ ಧ್ವಂಸ ಹಾಗೂ ಪೊಲೀಸ್ ಸಿಬ್ಬಂದಿ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.