ಚೆನ್ನೈ, ಮೇ 13: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಮಿಳುನಾಡು ವಿಧಾನಸಭೆಯಲ್ಲಿ (Tamil Nadu Vidhana Sabha) ನಡೆದ ವಿಶ್ವಾಸ ಮತಯಾಚನೆಯಲ್ಲಿ ವಿಜಯ್ (Vijay) ಅಗ್ನಿಪರೀಕ್ಷೆ ಗೆದ್ದಿದ್ದಾರೆ. ಸರ್ಕಾರ ರಚಿಸಲು ಬಹುಮತಕ್ಕೆ 118 ಸ್ಥಾನಗಳು ಬೇಕಾಗಿದ್ದು, ವಿಜಯ್ ಅವರ ಟಿವಿಕೆ (TVK) ಪಕ್ಷವು ಪ್ರಸ್ತುತ 107 ಶಾಸಕರನ್ನು ಹೊಂದಿದೆ. ವಿಶ್ವಾಸ ಮತಯಾಚನೆ ವೇಳೆ ವಿಜಯ್ ಪರ ಕಾಂಗ್ರೆಸ್, ಡಿಎಂಕೆ ಮಿತ್ರಪಕ್ಷಗಳಾದ ಸಿಪಿಐ, ಸಿಪಿಎಂ, ಐಯುಎಂಎಲ್ ಸದಸ್ಯರು ಹಾಗೂ ಎಐಎಡಿಎಂಕೆಯ 24 ಶಾಸಕರು ಮತ ಚಲಾಯಿಸಿದರು. ವಿಜಯ್ ಪರವಾಗಿ ಒಟ್ಟು 144 ಮತ ಚಲಾವಣೆಯಾಗಿದೆ.
ಡಿಎಂಕೆ ಮತ್ತು ಎಐಎಡಿಎಂಕೆ ಶಾಸಕರು ಸಭಾತ್ಯಾಗ ಮಾಡಿದ ನಂತರ, ನಾಲ್ಕು ಪಿಎಂಕೆ ಶಾಸಕರು ಮತ್ತು ಒಬ್ಬ ಬಿಜೆಪಿ ಶಾಸಕರು ಮತದಾನದಿಂದ ದೂರ ಉಳಿದರು. ವಿರೋಧ ಪಕ್ಷಗಳು ಇಲ್ಲದೆಯೇ ವಿಶ್ವಾಸಮತ ಯಾಚನೆ ನಡೆಯಿತು. ಇನ್ನೊಂದೆಡೆ, ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಎಚ್ಚರಿಕೆಯ ಹೊರತಾಗಿಯೂ ಎಐಎಡಿಎಂಕೆ ಬಣಗಳು ವಿಜಯ್ ಪರವಾಗಿ ಮತ ಚಲಾಯಿಸಿದರು.
47 ಶಾಸಕರ ಪೈಕಿ 30 ಶಾಸಕರ ಬೆಂಬಲ ಹೊಂದಿರುವ ಬಂಡಾಯ ನಾಯಕರಾದ ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದ ಎಐಎಡಿಎಂಕೆ (AIADMK) ಬಣವು ವಿಜಯ್ ಅವರಿಗೆ ಬೆಂಬಲ ನೀಡಿತು. ಎಐಎಡಿಎಂಕೆ ಬಣದ ಕನಿಷ್ಠ 24 ಶಾಸಕರು ಮುಖ್ಯಮಂತ್ರಿಯವರ ಪರವಾಗಿ ಮತ ಚಲಾಯಿಸಿದ್ದಾರೆ.
ವಿಜಯ್ ಗೆಲುವಿನ ಭವಿಷ್ಯ ನುಡಿದ ಜ್ಯೋತಿಷಿ ವೆಟ್ರಿವೇಲ್ ಈಗ ಸಿಎಂ ವಿಶೇಷ ಕರ್ತವ್ಯಾಧಿಕಾರಿ
ಮೇ 13 ರಂದು ಅಥವಾ ಅದಕ್ಕೂ ಮೊದಲು ವಿಶ್ವಾಸ ಮತ ಚಲಾಯಿಸುವಂತೆ ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರ ನಿರ್ದೇಶನಗಳಿಗೆ ಅನುಗುಣವಾಗಿ ಸದನದಲ್ಲಿ ವಿಶ್ವಾಸ ಮತಯಾಚನೆ ನಡೆಸಲಾಯಿತು.
ಮತದಾನಕ್ಕೂ ಮುನ್ನ, ಮುಖ್ಯಮಂತ್ರಿ ವಿಜಯ್ ಸೋಮವಾರ ಮತ್ತು ಮಂಗಳವಾರ (ಮೇ 11, ಮೇ 12) ಮಿತ್ರಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ಹಾಗೂ ಎನ್ ಟಿಕೆ ಸಂಸ್ಥಾಪಕ ಸೀಮನ್ ಅವರೊಂದಿಗೆ ಸತತ ಸಭೆಗಳನ್ನು ನಡೆಸಿದರು.
ಆಡಳಿತಾರೂಢ ಟಿವಿಕೆಗೆ 144 ಶಾಸಕರ ಬೆಂಬಲ
ಟಿವಿಕೆ ಒಟ್ಟಾರೆ ಬಲ 107. ಆಡಳಿತ ಪಕ್ಷಕ್ಕೆ ಮೊದಲೇ ಐದು ಕಾಂಗ್ರೆಸ್ ಶಾಸಕರ ಬೆಂಬಲ ಸಿಕ್ಕಿತ್ತು. ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಐಯುಎಂಎಲ್ - ತಲಾ ಇಬ್ಬರು ಶಾಸಕರು ಬೆಂಬಲ ನೀಡಿದರು. ಹಿರಿಯ ನಾಯಕರಾದ ಎಸ್‌ಪಿ ವೇಲುಮಣಿ ಮತ್ತು ಸಿ.ವಿ. ಷಣ್ಮುಗಂ ನೇತೃತ್ವದ 26 ಎಐಎಡಿಎಂಕೆ ಶಾಸಕರು ಸರ್ಕಾರವನ್ನು ಬೆಂಬಲಿಸಿದರು.
ಕಲಾಪದಲ್ಲಿ ಮಾತನಾಡಿದ ವಿಸಿಕೆ ಶಾಸಕ ವನ್ನಿ ಅರಸು, ಜಾತ್ಯಾತೀತ ಪಕ್ಷಗಳು ಸರ್ಕಾರಕ್ಕೆ ಬೇಷರತ್ತಾದ ಬೆಂಬಲವನ್ನು ನೀಡಿವೆ. ಸರ್ಕಾರ ತನ್ನ ಐದು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ಅಧಿಕಾರ ವಹಿಸಿಕೊಂಡ ನಂತರ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಶುಭಾಶಯಗಳನ್ನು ಸ್ವೀಕರಿಸಿದ್ದಕ್ಕಾಗಿ ಮುಖ್ಯಮಂತ್ರಿ ವಿಜಯ್ ಅವರನ್ನು ಶ್ಲಾಘಿಸಿದರು.
ಒಂದು ದಿನದ ಹಿಂದೆ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಎಂಕೆ) ಪಕ್ಷದ ಏಕೈಕ ಶಾಸಕ ಎಸ್ ಕಾಮರಾಜ್ ಕೂಡ ಆಡಳಿತಾರೂಢ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದರು.
ಇನ್ನು ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಭಾತ್ಯಾಗ ಮಾಡಿದರು. ಪಿಎಂಕೆ ಹಾಗೂ ಬಿಜೆಪಿ ಮತದಾನದಿಂದ ದೂರ ಉಳಿದರು.