ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಿಳುನಾಡಿನಲ್ಲಿ 5 ದಿನಗಳ ಹೈಡ್ರಾಮ ಅಂತ್ಯ; ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ‍ ರಚನೆಗೆ ಹಕ್ಕು ಮಂಡಿಸಿದ ವಿಜಯ್‌

Tamil Nadu Government Formation: ಟಿವಿಕೆ ಸ್ಥಾಪನೆಯಾಗಿ ಎರಡೇ ವರ್ಷಕ್ಕೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿದೆ. 107 ಸ್ಥಾನಗಳನ್ನು ಪಡೆದ ವಿಜಯ್‌ ಅವರ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್‌, ಮುಸ್ಲಿಂ ಲೀಗ್‌, ಎಡಪಕ್ಷಗಳು ಮತ್ತು ವಿಸಿಕೆ ಬೆಂಬಲ ನೀಡುವುದರೊಂದಿಗೆ ವಿಜಯ್‌ ಬಹುಮತ ಸಾಬೀತು ಪಡಿಸಿದ್ದಾರೆ. ಜತೆಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅವರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದಾರೆ.

ವಿಜಯ್‌ (ಸಂಗ್ರಹ ಚಿತ್ರ)

ಚೆನ್ನೈ, ಮೇ 9: ತಮಿಳುನಾಡು ರಾಜಕೀಯದಲ್ಲಿ ಕಂಡು ಬಂದಿದ್ದ ಬಹುದಿನಗಳ ಅನಿಶ್ಚಿತತೆ, ಗೊಂದಲಗಳೆಲ್ಲ ಮಾಯವಾಗಿದ್ದು, ವಿಜಯ್‌ (Vijay) ನೇತೃತ್ವದ ಟಿವಿಕೆಯ ಸರ್ಕಾರ ರಚನೆಗಿದ್ದ ಅಡೆ-ತಡೆ ನಿವಾರಣೆಯಾಗಿದೆ (Tamil Nadu Government Formation). ವಿಜಯ್‌ಗೆ ವಿಸಿಕೆ ಜತೆಗೆ ಮುಸ್ಲಿಂ ಲೀಗ್‌ ಶಾಸಕರೂ ಬೆಂಬಲ ಸೂಚಿಸಿದ್ದಾರೆ. ಆ ಮೂಲಕ ವಿಜಯ್‌ ಬೆಂಬಲಿತ ಶಾಸಕರ ಸಂಖ್ಯೆ 120ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 120 ಶಾಸಕರೊಂದಿಗೆ ಚೆನ್ನೈಯಲ್ಲಿರುವ ಲೋಕಭವನಕ್ಕೆ ತೆರಳಿದ ವಿಜಯ್‌ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅವರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

ಆರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಕೇರಳಂ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ವಿಜಯ್‌ ಭೇಟಿಗೆ ಸಮಯ ನೀಡುತ್ತಿಲ್ಲ ಎಂದು ವರದಿಯಾಗಿತ್ತು. ಬಳಿಕ ರಾಜ್ಯಪಾಲರು ತಮ್ಮ ಕೇರಳಂ ಪ್ರವಾಸ ರದ್ದುಗೊಳಿಸಿ ವಿಜಯ್‌ ಭೇಟಿಗೆ ಅವಕಾಶ ನೀಡಿದರು. ತಮಿಳುನಾಡು ವಿಧಾನಸಭೆಯ ಅವಧಿ ಮೇ 10ರಂದು ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಅದಕ್ಕಿಂತ ಮೊದಲೇಸರ್ಕಾರ ರಚಿಸಬೇಕಿತ್ತು. ಇಲ್ಲದಿದ್ದರೆ ರಾಷ್ಟರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇತ್ತು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತಪ್ಪಿಸಲು ವಿಜಯ್‌ಗೆ ಬೆಂಬಲ ನೀಡಿದ್ದಾಗಿ ವಿಸಿಕೆ ಹೇಳಿದೆ.

ಲೋಕಭವನಕ್ಕೆ ಆಗಮಿಸಿದ ವಿಜಯ್:



ವಿಸಿಕೆ ಮುಖ್ಯಸ್ಥ ತೋಲ ತಿರುಮಾವಲನ್‌ ಹೇಳಿದ್ದೇನು?

ಸುದ್ದಿಗೋಷ್ಠಿ ನಡೆಸಿದ ವಿಸಿಕೆ ಮುಖ್ಯಸ್ಥ ತೋಲ ತಿರುಮಾವಲನ್‌, ತಮ್ಮ ಪಕ್ಷ ವಿಜಯ್‌ಗೆ ಬೆಂಬಲ ಸೂಚಿಸಿದ್ದೇಕೆ ಎನ್ನುವುದನ್ನು ವಿವರಿಸಿದರು. ʼʼಟಿವಿಕೆ ನಾಯಕ ವಿಜಯ್‌ ಸರ್ಕಾರ ರಚಿಸಲಿಎನ್ನುವ ಕಾರಣಕ್ಕೆ ಅವರಿಗೆ ಬೆಂಬಲ ನೀಡಿದ್ದೇವೆ. ಅಲ್ಲದೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಯಾವುದೇ ಕಾರಣಕ್ಕೂ ಬರಬಾರದು. ಸರ್ಕಾರ ರಚನೆಗೆ ಮಾತ್ರ ಬೆಂಬಲ ನೀಡಿದ್ದೇವೆ. ಯಾವುದೇ ಷರತ್ತು ವಿಧಿಸಿಲ್ಲ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಜಯ್‌ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದೇನೆ. ವಿಜಯ್‌ಗೆ ಬೆಂಬಲ ನೀಡುವ ವಿಚಾರವನ್ನು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಅವರ ಗಮನಕ್ಕೆ ತಂದಿದ್ದೇವೆ. ಅವರೂ ಸಮ್ಮತಿಸಿದ್ದಾರೆ. ಈ ಸರ್ಕಾರದಲ್ಲಿ ನಮಗೆ ಯಾವುದೇ ಹುದ್ದೆ ಬೇಡʼʼ ಎಂದು ತಿಳಿಸಿದರು.

ರಾಜ್ಯಪಾಲರನ್ನು ಭೇಟಿಯಾದ ವಿಜಯ್‌:



ನಾಳೆ ಪ್ರಮಾಣ ವಚನ?

ಮೂಲಗಳ ಪ್ರಕಾರ ಮೇ 10ರಂದು ಅಪರಾಹ್ನ 3 ಗಂಟೆಗೆ ವಿಜಯ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಟಿವಿಕೆ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದು ಖಚಿತವಾಗುತ್ತಿದ್ದಂತೆ ಕಾರ್ಯಕರ್ತರು ರಾಜ್ಯಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಕೊನೆಗೂ ವಿಜಯ್‌ ಸಿಎಂ ಆಗುವ ಹಾದಿ ಸುಗಮ; ಬೆಂಬಲ ಘೋಷಿಸಿದ ವಿಸಿಕೆ

4ನೇ ಬಾರಿ ಹಕ್ಕು ಮಂಡಿಸಿದ ವಿಜಯ್‌

ವಿಶೇಷ ಎಂದರೆ ಫಲಿತಾಂಶ ಘೋಷಣೆಯಾದ ಬಳಿಕ ಈಗಾಗಲೇ ವಿಜಯ್‌ 4 ಬಾರಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಆದರೆ ಮೂರು ಬಾರಿಯೂ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು. ಬಹುಮತಕ್ಕೆ ಅಗತ್ಯವಾದ 118 ಶಾಸಕರ ಬೆಂಬಲದೊಂದಿಗೆ ಆಗಮಿಸುವಂತೆ ರಾಜ್ಯಪಾಲರು ಸೂಚಿಸಿದ್ದರು. ಇದೀಗ 4ನೇ ಪ್ರಯತ್ನದಲ್ಲಿ ಸರ್ಕಾರ ರಚಿಸಲು ಸಫಲರಾಗಿದ್ದಾರೆ. ವಿಜಯ್‌ 5 ಮಿತ್ರ ಪಕ್ಷಗಳ 120 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದ್ದಾರೆ. ಅದರಂತೆ ರಾಜ್ಯಪಾಲರು ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author